Asianet Suvarna News Asianet Suvarna News

ಮುದ್ದು ಮಗನ ಆಸೆಯಂತೆ ಗಣೇಶ ಪ್ರತಿಷ್ಠಾಪಿಸಿದ ಮುಸ್ಲಿಂ ಕುಟುಂಬ: 5 ದಿ‌ನ ಮಾಂಸ ತಿನ್ನದೆ ಆರಾಧನೆ!

ಮುಸ್ಲಿಂ ಧರ್ಮೀಯೊಬ್ಬರು ತನ್ನ ಮಗನ ಆಸೆ, ಪ್ರೀತಿ, ಮುಗ್ಧತೆಗೆ ಕಟ್ಟುಬಿದ್ದು ಮನೆಯಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡುವ ಮೂಲಕ 'ದೇವರೊಬ್ಬನೇ ನಾಮ ಹಲವು' ಎಂಬ ಭಾವೈಕ್ಯತೆಯ ಸಂದೇಶ ಸಾರಿದ್ದಾನೆ. 

A Gadag Muslim family established by Ganesha as the wish of a beloved son gvd
Author
First Published Sep 9, 2024, 6:08 PM IST | Last Updated Sep 9, 2024, 6:08 PM IST

ಗದಗ (ಸೆ.09): ಮುಸ್ಲಿಂ ಧರ್ಮೀಯೊಬ್ಬರು ತನ್ನ ಮಗನ ಆಸೆ, ಪ್ರೀತಿ, ಮುಗ್ಧತೆಗೆ ಕಟ್ಟುಬಿದ್ದು ಮನೆಯಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡುವ ಮೂಲಕ 'ದೇವರೊಬ್ಬನೇ ನಾಮ ಹಲವು' ಎಂಬ ಭಾವೈಕ್ಯತೆಯ ಸಂದೇಶ ಸಾರಿದ್ದಾನೆ. ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿಯ ಮುಸ್ಲಿಂ ಧರ್ಮದ ಮುಸ್ತಫಾ ಕೋಲ್ಕಾರ ಎಂಬ ವ್ಯಕ್ತಿ ಗಣೇಶ ಚತುರ್ಥಿ ದಿನ ಹಿಂದೂ ಸಂಪ್ರದಾಯದಂತೆ ಗಣೇಶನನ್ನ ಪ್ರತಿಷ್ಠಾಪಿಸಿ ಭಾವೈಕ್ಯತೆ ಸಾರಿದ್ದಾನೆ. ಮುಸ್ತಫಾ ಮತ್ತು ಯಾಸ್ಮಿನಾಬಾನು ದಂಪತಿಗಳಿಗೆ ಐದು ಜನ ಮಕ್ಕಳು. ಚಿಕ್ಕ ಮಗ 3 ವರ್ಷದ ಹಜರತ್ ಅಲಿಗೆ ಗಣಪನೆಂದರೆ ಪ್ರೀತಿ, ಧರ್ಮ, ಸಂಪ್ರದಾಯಕ್ಕೆ ಮೀರಿದ ಮುಗ್ಧ ಭಕ್ತಿಯದು.

ತಾನು ಗಣೇಶನನ್ನು ಮನೆಗೆ ತೆಗೆದುಕೊಂಡು ಹೋಗಬೇಕು. ಎಲ್ಲರಂತೆ ಪೂಜಿಸಬೇಕು, ಪಟಾಕಿ ಹೊಡೆಯಬೇಕು. ಕುಣಿದು ಕುಪ್ಪಳಿಸಬೇಕೆಂಬ ಹಂಬಲ ಆತನದ್ದು. ಈ ಬಗ್ಗೆ ತಂದೆ-ತಾಯಿ ಹತ್ತಿರ ಕೇಳಿ ಅತ್ತು ಕರೆದು ಹಠ ಮಾಡಿದ್ದರೂ ತಂದೆ ಹೇಗೂ ಸಮಾಧಾನ ಮಾಡಿದ್ದರಂತೆ. ಆದರೆ ಗಣೇಶ ಚತುರ್ಥಿ ದಿನ ಎಲ್ಲರೂ ಮನೆಗೆ ಗಣೇಶ ಮೂರ್ತಿ ತರುವುದನ್ನು ಗಮನಿಸಿದ ಹಜರತ್ ಅಲಿ. ತನ್ನ ಅಣ್ಣನೊಂದಿಗೆ ಗಣೇಶಮೂರ್ತಿ ಮಾರಾಟ ಮಾಡುವಲ್ಲಿಗೆ ಹೋಗಿ ಚಿಕ್ಕದೊಂದು ಮೂರ್ತಿಯನ್ನು ಮನೆಗೆ ತಂದಿದ್ದ. 

ಮಕ್ಕಳು ಮೂರ್ತಿ ತಂದಿದ್ದನ್ನ ಕಂಡ ತಂದೆ-ತಾಯಿ ಒಂದು ಕ್ಷಣ ಮೌನವಾಗಿದ್ದಾರೆ. ಆದ್ರೆ, ತಂದೆ-ತಾಯಿಗಳು ಮಗನ ಬಗ್ಗೆ ಒಂದಷ್ಟೂ ಬೇಸರ ಮಾಡಿಕೊಳ್ಳದೆ, ಚಿಕ್ಕ ಮೂರ್ತಿಯನ್ನ ಮರಳಿಸಿ ದೊಡ್ಡ ಮೂರ್ತಿಯನ್ನ ಮನೆಗೆ ತಂದಿದ್ದಾರೆ. ಪಕ್ಕದ ಮನೆಯ ಶಾಸ್ತ್ರಿಗಳಿಗೆ ಮಾಹಿತಿ ನೀಡಿ ಶಾಸ್ತ್ರೋಕ್ತವಾಗೇ ಪೂಜೆ ಮಾಡಿದ್ದಾರೆ. ಮಗ ಹಜರತ್ ಅಲಿಗೆ ಗಣೇಶನೆಂದರೆ ತುಂಬಾ ಇಷ್ಟ. ಮನಗ ಇಚ್ಛೆಯಂತೆ ವಿನಾಯಕನ ಪ್ರತಿಷ್ಠಾಪನೆ ಮಾಡಿದ್ದೇವೆ. ಐದು ದಿನ ಅದ್ಧೂರಿಯಾಗಿ ಪೂಜಿಸಲು ನಿರ್ಧರಿಸಿದ್ದೇವೆ. ಮಾಂಸ ಅಡುಗೆ ಮಾಡದೇ ಪದ್ಧತಿಯಂತೆ ಕುಟುಂಬದೊಂದಿಗೆ ಪೂಜಿಸಿದ್ದೇವೆ. 

ಮೇಣದಲ್ಲಿ ಮೈದಳೆದ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಹೆಗ್ಗಡೆ ಪ್ರತಿರೂಪ: ತದ್ರೂಪ ಕಂಡು ವೀರೇಂದ್ರ ದಂಪತಿ ಮೂಕವಿಸ್ಮಿತ!

ಕುಟುಂಬ ಪರಿವಾರದವರಿಗೂ ಪೂಜೆಗೆ ಬರಲು ಹೇಳಿದ್ದೇವೆ. ಎಲ್ಲರೂ ಸೇರಿ ಗಣೇಶನನ್ನ ಪೂಜಿಸುತ್ತೇವೆ ಅಂತಾ ಹಜರತ್ ಅಲಿ‌ ತಂದೆ ಮುಸ್ತಫಾ  ಕೋಲ್ಕಾರ್ ಹೇಳ್ತಾರೆ. ಮುಗ್ಧ ಮನಸ್ಸಿನ ಮಗು ಗಣೇಶನನ್ನ ಪೂಜಿಸುವ ಮೂಲಕ ನಾವೆಲ್ಲರೂ ಒಂದು ಎನ್ನುವ ಸಂದೇಶ ಸಾರಿದೆ.. ಮಗು ಹಠ ಮಾಡ್ತಿದೆ ಅಂತಾ ಗದರಿಸದೇ ಮಗುವಿನ ಆಸೆಗೆ ತಂದೆ ಸ್ಪಂದಿಸಿದ್ದಾರೆ.. ಸೂರಣಗಿಯ ಈ ತಂದೆ ಮಗ ಭಾವೈಕ್ಯತೆಯ ಹೊಸ ಭಾಷ್ಯ ಬರೆದಿದ್ದಾರೆ.

Latest Videos
Follow Us:
Download App:
  • android
  • ios