ಮೇಣದಲ್ಲಿ ಮೈದಳೆದ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಹೆಗ್ಗಡೆ ಪ್ರತಿರೂಪ: ತದ್ರೂಪ ಕಂಡು ವೀರೇಂದ್ರ ದಂಪತಿ ಮೂಕವಿಸ್ಮಿತ!
ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ರಾಜಕೀಯ ಹಾಗೂ ಸಾಮಾಜಿಕ ರಂಗದ ಸೆಲೆಬ್ರೆಟಿಗಳ ನಾನಾ ವಿಧದ ಪ್ರತಿಮೆಗಳನ್ನು ರಚಿಸುವುದು ಸಾಮಾನ್ಯ. ಆದರೆ ಇಲ್ಲಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕವೇ ಮೊದಲಾದ ರಂಗಗಳಲ್ಲಿ ಅಪೂರ್ವ ಸಾಧನೆ ಮಾಡಿದ ಸೆಲೆಬ್ರಿಟಿಯೊಬ್ಬರ ಮೇಣದ ಪ್ರತಿಮೆ ಭಾರಿ ಸದ್ದುಮಾಡುತ್ತಿದೆ.
ಮಂಗಳೂರು (ಸೆ.09): ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ರಾಜಕೀಯ ಹಾಗೂ ಸಾಮಾಜಿಕ ರಂಗದ ಸೆಲೆಬ್ರೆಟಿಗಳ ನಾನಾ ವಿಧದ ಪ್ರತಿಮೆಗಳನ್ನು ರಚಿಸುವುದು ಸಾಮಾನ್ಯ. ಆದರೆ ಇಲ್ಲಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕವೇ ಮೊದಲಾದ ರಂಗಗಳಲ್ಲಿ ಅಪೂರ್ವ ಸಾಧನೆ ಮಾಡಿದ ಸೆಲೆಬ್ರಿಟಿಯೊಬ್ಬರ ಮೇಣದ ಪ್ರತಿಮೆ ಭಾರಿ ಸದ್ದುಮಾಡುತ್ತಿದೆ. ರಾಜ್ಯಸಭಾ ಸದಸ್ಯ, ಧರ್ಮಸ್ಥಳ ಧರ್ಮಾಧಿಕಾರಿ, ರಾಜರ್ಷಿ ಡಾ.ವೀರೇಂದ್ರ ಹೆಗ್ಗಡೆ ಅವರ ಮೇಣದ ಪ್ರತಿರೂಪವನ್ನು ಬೆಂಗಳೂರಿನ ಭಕ್ತರೊಬ್ಬರು ಸಿದ್ಧಪಡಿಸಿದ್ದು, ಇದರ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಬೆಂಗಳೂರಿನ ಭಕ್ತರೊಬ್ಬರ ಕೋರಿಕೆ ಮೇರೆಗೆ ಸುಮಾರು ಒಂದು ವರ್ಷದಿಂದ ಬೆಂಗಳೂರಿನ ಶಿಲ್ಪಿಯೊಬ್ಬರು ಡಾ.ವೀರೇಂದ್ರ ಹೆಗ್ಗಡೆ ಅವರ ಮೇಣದ ಪ್ರತಿರೂಪ ಮೂಡಿಸಲು ಶ್ರಮಿಸಿದ್ದಾರೆ. ಡಾ.ಹೆಗ್ಗಡೆ ಅವರ ಸಾಂಪ್ರದಾಯಿಕ ದಿರಿಸಿನ ಫೋಟೋ ಮುಂದಿಟ್ಟುಕೊಂಡು ಮೇಣದ ಪ್ರತಿಮೆ ರಚಿಸಲಾಗಿದೆ. ಎರಡು ವಾರದ ಹಿಂದೆಯಷ್ಟೆ ಇದು ಅಂತಿಮಗೊಂಡಿದೆ. ಇದನ್ನು ಆಂಧ್ರಪ್ರದೇಶದ ಪುಟ್ಟಪರ್ತಿಯಲ್ಲಿ ಡಾ.ವೀರೇಂದ್ರ ಹೆಗ್ಗಡೆ ಹಾಗೂ ಅವರ ಕುಟುಂಬ ವೀಕ್ಷಿಸಿ ಅಚ್ಚರಿ ಹೊಂದಿದ್ದು, ಅಪಾರ ಮೆಚ್ಚುಗೆ ವ್ಯಕ್ತಪಡಿಸಿದೆ. ಈ ಚಿತ್ರವೂ ವೈರಲ್ ಆಗಿರುವ ವಿಡಿಯೋದಲ್ಲಿದೆ.
ಮೇಣದ ಎರಕದಲ್ಲಿ ಡಾ.ವೀರೇಂದ್ರ ಹೆಗ್ಗಡೆ ಅವರ ಪ್ರತಿರೂಪವನ್ನು ಅದ್ಭುತವಾಗಿ ಮೂಡಿಸಲಾಗಿದ್ದು, ಇದನ್ನು ವೀಕ್ಷಿಸಿದ ಡಾ.ಹೆಗ್ಗಡೆ ಅವರೇ ಅವಕ್ಕಾಗಿರುವುದು ವಿಡಿಯೋದಲ್ಲಿ ಕಂಡುಬರುತ್ತದೆ. ಮೇಣದ ಪ್ರತಿಮೆಯ ರೂವಾರಿಯ ಭಕ್ತರು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿ ಪ್ರತಿಮೆಯನ್ನು ಶೀಘ್ರವೇ ಹಸ್ತಾಂತರಿಸುವ ಬಗ್ಗೆ ಮಾತುಕತೆ ನಡೆಸುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ.