Asianet Suvarna News Asianet Suvarna News

Dasara Special : 21 ವರ್ಷಗಳಿಂದ ದಸರಾ ಗೊಂಬೆ ಪ್ರದರ್ಶನ ಸೇವೆ ಮಾಡುತ್ತಿರುವ ಕುಟುಂಬ

  • ದಸರಾ: ಭದ್ರಾವತಿಯಲ್ಲೊಂದು ವಿಶೇಷ ಗೊಂಬೆ ಪ್ರದರ್ಶನ
  • 21 ವರ್ಷಗಳಿಂದ ನಾಡಿನ ಪರಂಪರೆ, ಇತಿಹಾಸ ತಿಳಿಸುವ ಕಾರ್ಯದಲ್ಲಿ ಶ್ರಮಿಸುತ್ತಿರುವ ಉಮೇಶ್‌-ಕುಸುಮ ಕುಟುಂಬ
A family that has been serving dasara gombe Show for 21 years rav
Author
First Published Oct 3, 2022, 7:26 AM IST

ಅನಂತಕುಮಾರ್‌

ಭದ್ರಾವತಿ (ಅ.3) : ವೈಭವದ ನಾಡಹಬ್ಬ ಮೈಸೂರು ದಸರಾ ಎಂದರೆ, ಮೊದಲು ಕಣ್ಮುಂದೆ ಬರುವುದು ಆನೆ ಅಂಬಾರಿ. ಬಳಿಕ ನಾಡಿನ ಪರಂಪರೆ, ಸಂಸ್ಕೃತಿ, ಧಾರ್ಮಿಕ ಹಾಗೂ ಜನಜೀವನ ಮೇಲೆ ಬೆಳಕು ಚೆಲ್ಲುವಂಥ ಗೊಂಬೆಗಳ ಪ್ರದರ್ಶನ. ದಸರಾ ಹಬ್ಬ ಅಂಗವಾಗಿ ಇಂಥ ಗೊಂಬೆ ಕೂರಿಸುವ ಆಚರಣೆಯನ್ನು ನಾಡಿನ ಬಹುತೇಕ ಮನೆಗಳಲ್ಲಿ ಇಂದಿಗೂ ಚಾಚೂ ತಪ್ಪದೇ ನೆರವೇರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ 21 ವರ್ಷಗಳಿಂದ ಗೊಂಬೆಗಳ ಕೂರಿಸುವಲ್ಲಿ ಗಮನ ಸೆಳೆಯುವಂಥ ಕುಟುಂಬವೊಂದು ಭದ್ರಾವತಿಯಲ್ಲಿದೆ.

ರಾಮನಗರ: ಮನೆ ಮನೆಗಳಲ್ಲಿ ರಾರಾಜಿಸುತ್ತಿರುವ ದಸರಾ ಬೊಂಬೆಗಳು..!

ನಗರದ ನ್ಯೂಕಾಲೋನಿಯ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆ ಸಮೀಪದ ವಿಐಎಸ್‌ಎಲ್‌ ವಸತಿ ಗೃಹದಲ್ಲಿ ವಾಸವಾಗಿರುವ ವೆಸ್ಟೀಜ್‌ ಹೆಲ್ತ್‌ಕೇರ್‌ ನೌಕರ ಉಮೇಶ್‌ ಹಾಗೂ ನ್ಯಾಯಾಂಗ ಇಲಾಖೆ ನೌಕರರಾದ ಕುಸುಮ ದಂಪತಿ ದಸರಾ ಹಬ್ಬದ ಸಂದರ್ಭದಲ್ಲಿ ಮನೆಯಲ್ಲಿ ಗೊಂಬೆ ಪ್ರದರ್ಶನ ಏರ್ಪಡಿಸುತ್ತಾರೆ. ವಿಶೇಷವೆಂದರೆ, ಉಕ್ಕಿನ ನಗರದ ಜನತೆಗೆ ಹಲವು ವಿಚಾರಗಳ ಕುರಿತು ಗೊಂಬೆ ಪ್ರದರ್ಶನ ಜತೆಗೆ ಅವುಗಳ ಮಾಹಿತಿ ಮೂಲಕ ಜಾಗೃತಿ ಮೂಡಿಸುತ್ತಾರೆ.

ಈ ದಂಪತಿ ಮನೆಯಲ್ಲಿಯೇ ಪ್ರತಿವರ್ಷ ದಸರಾ ಗೊಂಬೆ ಪ್ರದರ್ಶನ ಆಯೋಜಿಸುತ್ತಾರೆ. ಒಂದೊಂದು ಹಂತದಲ್ಲಿ ಒಂದೊಂದು ವರ್ಗದ ಗೊಂಬೆಗಳನ್ನು ಜೋಡಿಸುತ್ತಾರೆ. ಮೊದಲ ಹಂತದಲ್ಲಿ ವಿಶೇಷವಾಗಿ 150 ವರ್ಷ ಹಳೆಯದಾದ ಪಟ್ಟದ ಗೊಂಬೆ, ಎರಡನೇ ಹಂತದಲ್ಲಿ ಅಂಬಾರಿ ಜೊತೆ ಪಟ್ಟದ ಗೊಂಬೆ, ಮೂರನೇ ಹಂತದಲ್ಲಿ ವಿಷ್ಣುವಿನ ದಶವತಾರ, ನಾಲ್ಕನೇ ಹಂತದಲ್ಲಿ ನವದುರ್ಗಿಯರು, ಐದನೇ ಹಂತದಲ್ಲಿ ತ್ರಿಶಕ್ತಿ, ಅನ್ನಪೂರ್ಣೇಶ್ವರಿ ಮತ್ತು ಅಷ್ಟಲಕ್ಷ್ಮೇ, ಆರನೇ ಹಂತದಲ್ಲಿ ತಿರುಪತಿ ವೆಂಕಟರಮಣ, ವಿಶ್ವರೂಪ, ಅಯೋಧ್ಯೆ ಶ್ರೀರಾಮ, ಮತ್ತು ಅನಂತಪದ್ಮನಾಭ, ಏಳನೇ ಹಂತದಲ್ಲಿ ಆಚಾರ್ಯತ್ರಯರು, ಕೈಲಾಸ ಮತ್ತು ಸಪ್ತಋುಷಿಗಳು, ಎಂಟನೇ ಹಂತದಲ್ಲಿ ಶಿರಡಿ ಸಾಯಿಬಾಬಾ, ಉಡುಪಿ ಶ್ರೀಕೃಷ್ಣ, ಗೋಕರ್ಣ, ಇಡಗುಂಜಿ ಗಣಪತಿ, ರಾಜೇಶ್ವರಿ ಮತ್ತು ವಿಜಯ ನಗರದ ವೈಭವ ಬಿಂಬಿಸುವ ಗೊಂಬೆಗಳನ್ನು ಜೋಡಿಸುತ್ತಾರೆ. ಈ ಗೊಂಬೆಗಳ ಪ್ರತಿಷ್ಠಾಪನೆಯಲ್ಲಿ ಅವರ ದಸರಾ ಸಂಭ್ರಮ ಗಮನಿಸಬಹುದಾಗಿದೆ. ದಸರೆಯಲ್ಲಿ ಇವರ ಮನೆಗೆ ಬಂದವರು ದೇವಾನು ದೇವತೆಗಳನ್ನು ಹಾಗೂ ಧಾರ್ಮಿಕ ಸ್ಥಳಗಳನ್ನು ಗೊಂಬೆಗಳ ಮೂಲಕ ಕಣ್ತುಂಬಿಕೊಂಡು ಸಂಭ್ರಮಿಸುತ್ತಾರೆ.

ಇನ್ನೇನು ವಿಶೇಷ?:

9 ಮತ್ತು 10ನೇ ಹಂತದಲ್ಲಿ ಹಲವು ವಿಶೇಷಗಳ ಗೊಂಬೆಗಳಿರುತ್ತವೆ. ಹಳ್ಳಿ ಮನೆ ಸೊಗಡು ಮೂಲಕ ಗ್ರಾಮೀಣ ಬದುಕು, ರೈತನೇ ದೇಶದ ಬೆನ್ನೆಲುಬು ಎಂಬ ಸಂದೇಶದೊಂದಿಗೆ ಅನ್ನ ನೀಡುವ ರೈತರ ನೆನಪು, ವಿದ್ಯೆಯ ಪ್ರತಿರೂಪ ಸ್ವರಸತಿದೇವಿಯ ಸ್ಮರಣೆ, ಸಂಗೀತ ವಾದ್ಯಗಳು, ಬಣ್ಣಬಣ್ಣದ ಮತ್ಸ ್ಯಗಳ ಜೊತೆಗೆ ಕೃಷ್ಣ ಮತ್ತು ರಾಧೆ ದರ್ಶನವಾಗುತ್ತದೆ. ವಿಶೇಷವೆಂದರೆ ವನ್ಯಜೀವಿ ತಾಣಗಳಾದ ಶಿವಮೊಗ್ಗದ ತಾವರೆಕೊಪ್ಪ ಹುಲಿ ಮತ್ತು ಸಿಂಹಧಾಮ, ಸಕ್ರೆಬೈಲು ಆನೆ ಬಿಡಾರ, ಗುಡವಿ ಪಕ್ಷಿಧಾಮ, ಬುದ್ಧ ಗೋಲ್ಡನ್‌ ಟೆಂಪಲ್‌, ಭದ್ರಾವತಿ ಹೋಟೆಲ್‌ ಪದ್ಮನಿಲಯ, ಮೈಸೂರು ಅರಮನೆ, ಮೈಸೂರು ಚಾಮುಂಡೇಶ್ವರಿ ದೇವಸ್ಥಾನ, ಅಜ್ಜಿ ಅಡುಗೆ ಮನೆ, ಆದಿಯೋಗ ಮೂರ್ತಿ ಮತ್ತು ಧ್ಯಾನಲಿಂಗ ಹಾಗೂ ಪಿಪಿಇಸಿ ಶಾಲೆಯನ್ನು ಸಹ ಇವರ ಗೊಂಬೆ ಪ್ರದರ್ಶನದಲ್ಲಿ ಕಾಣುವುದು ವಿಶೇಷ. ಈ ರೀತಿಯ ಗೊಂಬೆಗಳ ಪ್ರದರ್ಶಿಸುವುದರ ಹಿಂದೆ ನಮ್ಮ ಪಾರಂಪರಿಕ ಸ್ಥಳಗಳು, ಧಾರ್ಮಿಕ ಹಾಗೂ ಪ್ರವಾಸಿ ತಾಣಗಳು, ವನ್ಯಜೀವಿ ನೆಲೆಗಳು, ಹಳ್ಳಿ ಮತ್ತು ನಗರ ಬದುಕು, ರೈತನ ಬದುಕು ಹೀಗೆ ಹಲವು ಚಿತ್ರಣಗಳ ಬಗ್ಗೆ ಜನಜಾಗೃತಿ ಮೂಡಿಸುವುದಾಗಿದೆ ಎನ್ನುತ್ತಾರೆ.

ಯುವ ದಸರಾದಲ್ಲಿ ಯುವ ಮನಸ್ಸುಗಳ ಸಾಮ್ರಾಟ್: ದಸರಾ ಹಬ್ಬದ ಮೆರುಗು ಹೆಚ್ಚಿಸಿದ ಪವರ್ ಸ್ಟಾರ್!

ಉಮೇಶ್‌ ಅವರ ತಾಯಿ ನಾಗರತ್ನ ಅವರ ಮಾರ್ಗದರ್ಶನದಲ್ಲಿ ಮಕ್ಕಳಾದ ಸ್ಕಂದ ಭಾರದ್ವಾಜ್‌ ಮತ್ತು ಸ್ತುತಿ ಭಾರದ್ವಾಜ್‌ ಸಹಕಾರದೊಂದಿಗೆ ಈ ದಂಪತಿ ಬಿಡುವಿಲ್ಲದ ಕರ್ತವ್ಯದ ನಡುವೆಯೂ ದಸರಾ ಗೊಂಬೆ ಪ್ರದರ್ಶನ ಸಂಪ್ರದಾಯ ಪಾಲಿಸುತ್ತಿರುವುದು ಅನುಕರಣೀಯ. ಇದೇ ಕಾರಣಕ್ಕೆ ಇವರ ಮನೆಯ ಗೊಂಬೆಗಳ ನೋಡಲು ಎಲ್ಲ ವರ್ಗದ ಜನರೂ ಭೇಟಿ ನೀಡುತ್ತಾರೆ.

ನಮ್ಮ ನಾಡಿನ ಭವ್ಯ ಪರಂಪರೆ ಮುಂದಿನ ಪೀಳಿಗೆಗೂ ಉಳಿಯಬೇಕೆಂಬ ಆಶಯ ನಮ್ಮದಾಗಿದೆ. ಅದರಲ್ಲೂ ಉಕ್ಕಿನ ನಗರದ ಜನತೆಗೆ ಈ ಪರಂಪರೆಯನ್ನು ಪರಿಚಯಿಸುವ ಮೂಲಕ ಸಮಾಜದ ಎಲ್ಲರೂ ಜಾತಿ, ಧರ್ಮ, ಭೇದಭಾವ ಮರೆತು ಒಗ್ಗಟ್ಟಾಗಿ ಆಚರಿಸುವಂತಾಗಬೇಕು. ಈ ನಿಟ್ಟಿನಲ್ಲಿ ನಮ್ಮ ಕಾರ್ಯ ನಡೆಸಿಕೊಂಡು ಬರಲಾಗುತ್ತಿದೆ

- ಉಮೇಶ್‌, ಭದ್ರಾವತಿ

Follow Us:
Download App:
  • android
  • ios