Vijayapuraದಲ್ಲಿ ಬೆಚ್ಚಿಬೀಳಿಸುವ ಕರಿ ಹೋರಿಗಳ ಓಟ!
- ಕಾಖಂಡಕಿ ಗ್ರಾಮದಲ್ಲಿ ನಡೆಯುತ್ತೆ ಬೆಚ್ಚಿಬೀಳಿಸುವ ಕರಿ ಹೋರಿಗಳ ಓಟ.!
- ಕಾರಹುಣ್ಣಿಮೆಯ ಕಳೆದ ವಾರಕ್ಕೆ ನಡೆಯೋ ಎತ್ತು ಓಡಿಸುವ ಹಬ್ಬ.!
- ಹೋರಿ ಹಿಡಿಯಲು ಹೋಗಿ ತಿವಿಸಿಕೊಂಡ ಯುವಕರು ಆಸ್ಪತ್ರೆ ಪಾಲು..!
ವರದಿ: ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಜೂನ್ 23) : ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದಲ್ಲಿ ನಡೆಯೋ ಕಾರ ಹುಣ್ಣಿಮೆ ಎತ್ತಿನ ಓಟ ಅಂದ್ರೆ ಬಹುತೇಕರು ಬೆಚ್ಚಿ ಬೀಳ್ತಾರೆ. ಎತ್ತಿನ ಓಟವನ್ನ ನೋಡಿ ಆನಂದಿಸೋದನ್ನ ಬಿಟ್ಟು ಬೆಚ್ಚಿಯಾಕೆ ಬೀಳ್ತಾರೆ ಅಂತೆಲ್ಲ ನೀವು ಕೇಳಬಹುದು. ಆದ್ರೆ ಇಲ್ಲಿ ನಡೆಯುವ ಬುಲ್ಸ್ ಗಳ ಡೆಂಜುರಸ್ ಓಟ-ಆಟ ಒಂದಿಲ್ಲೊಂದು ಅನಾಹುತವನ್ನ ಸೃಷ್ಟಿಸುತ್ತೆ. ಈ ಬಾರಿಯು ಕಾರ ಹುಣ್ಣಿಮೆ ನಡೆದ 5ನೇ ದಿನಕ್ಕೆ ನಡೆದ ಕಾಖಂಡಕಿ ಕಾರ ಹುಣ್ಣಿಮೆ ಎತ್ತಿನ ಓಟದಲ್ಲಿ ಹಲವರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ..
ಇತಿಹಾಸ ಪ್ರಸಿದ್ದ ಕಾಖಂಡಕಿ ಕರಿ..!
ಡೆಂಜುರಸ್ ಆದ್ರು ಕಾಖಂಡಕಿ ಕರಿಗೆ ತನ್ನದೆ ಆದ ಮಹತ್ವ ಇದೆ. ಕಾರ ಹುಣ್ಣಿಮೆ ಕಳೆದ 5 ನೇ ದಿನಕ್ಕೆ ಇಲ್ಲಿ ಕರಿ ಹರಿಯಲಾಗುತ್ತೆ. ಇದು ಮೊದಲಿನಿಂದಲು ನಡೆದುಕೊಂಡ ಬಂದ ಪದ್ದತಿಯಾಗಿದೆ. ಹೀಗಾಗಿ ಎತ್ತುಗಳನ್ನ ಸಿಂಗಾರಗೊಳಿಸಿ ಜನರ ನಡುವೆ ಬಿಡಲಾಗುತ್ತೆ. ಕೊಬ್ಬಿದ ಹೋರಿಗಳು ಓಡೋದಕ್ಕೆ ಶುರು ಮಾಡಿದ್ರೆ, ಇತ್ತ ನೋಡಲು ಬಂದ ಜನರು ಕೂಡ ಬೆದರೋದು ಕಾಮನ್
ಕೂಲಿ ಕಾರ್ಮಿಕರಿಗೆ ಸಿಗ್ತಿಲ್ಲ ಉದ್ಯೋಗ ಖಾತ್ರಿ ಯೋಜನೆಯ ಕೆಲಸ!
ಮಹಾರಾಷ್ಟ್ರದಿಂದಲು ಕಾಖಂಡಕಿಗೆ ಬರ್ತಾರೆ ಜನ..!
ಇತಿಹಾಸ ಪ್ರಸಿದ್ಧ ಕಾಖಂಡಕಿ ಕರಿ ನೋಡಲು ಬೆಳಗಾವಿ, ಬಾಗಲಕೋಟೆ ಸೇರಿದಂತೆ ಮಹಾರಾಷ್ಟ್ರದ ಸೊಲ್ಲಾಪುರದಿಂದಲು ಸಾಕಷ್ಟು ಜನರು ಗ್ರಾಮಕ್ಕೆ ಬರ್ತಾರೆ. ಇನ್ನು ಸುತ್ತಮುತ್ತಲ ಜಿಲ್ಲೆ, ತಾಲೂಕುಗಳಿಂದಲು ಕಾಖಂಡಕಿ ಕರಿ ನೋಡಲು ಸಾವಿರಾರು ಜನರ ಸೇರ್ತಾರೆ. ಕೇಕೆ ಸಿಳ್ಳೆ ಚಪ್ಪಾಳೆ ಮೂಲಕ ಎತ್ತುಗಳು ಓಡೋದನ್ನ ನೋಡಿ ಎಂಜಾಯ್ ಮಾಡ್ತಾರೆ..
ಓಡಿ ಮಳೆ-ಬೆಳೆ ಭವಿಷ್ಯ ಹೇಳುವ ಎತ್ತುಗಳು..!
ಈ ಓಟದ ಸ್ಪರ್ಧೆಯಲ್ಲಿ ಮೊದಲು ಯಾವ ಬಣ್ಣದ ಎತ್ತು ಓಡಿ ಬರುತ್ತೋ ಅದರ ಮೇಲೆ ಮುಂದಿನ ಒಂದು ವರ್ಷದ ಮಳೆ-ಬೆಳೆಯ ಭವಿಷ್ಯವನ್ನ ನಿರ್ಧರಿಸಲಾಗುತ್ತೆ. ಈ ಬಾರಿ ಕೆಂಪು ಎತ್ತು ಕರಿ ಹರಿಯಿತು. ಈ ಮೂಲಕ ಈ ಬಾರಿ ಮುಂಗಾರು ಕೆಂಪು ಧಾನ್ಯ ಬೆಳೆಗಳು ರೈತರ ಬಾಳು ಹಸನ ಮಾಡಲಿ ಎನ್ನುವ ನಂಬಿಕೆ ಅನ್ನದಾತಯಲ್ಲಿ ಹುಟ್ಟಿಕೊಂಡಿತು.. ಕೆಂಪು ಧಾನ್ಯಗಳಾದ ಗೋದಿ, ಮೆಕ್ಕೆಜೋಳ ಸೇರಿದಂತೆ ಹಲವು ಧಾನ್ಯಗಳ ಫಸಲು ಹಲುಸಾಗಿ ಬೆಳೆಯುತ್ತವೆ ಎನ್ನುವ ನಂಬಿಕೆ ಜನರಲ್ಲಿದೆ.
ಸಿಂಗಾರಗೊಂಡ ಎತ್ತುಗಳು..!
ಎತ್ತುಗಳ ಓಟದ ಸ್ಪರ್ಧೆಯಲ್ಲಿ 40-50 ಎತ್ತುಗಳು ಓಟಕ್ಕೆ ರೈತರು ಸಜ್ಜು ಗೊಳಿಸಿದರು. ಬೆಳಗ್ಗೆಯಿಂದಲೇ ರೈತರು ತಮ್ಮ ಎತ್ತುಗಳಿಗೆ ಶೃಂಗಾರ ಮಾಡಿ ಓಟದ ಸ್ಪರ್ಧೆಗೆ ಸಜ್ಜುಗೊಳಿಸಿದರು. ಸಂಜೆ ಆರಂಭವಾದ ಎತ್ತುಗಳ ಸ್ಪರ್ಧೆ ವೀಕ್ಷಿಸಲು ಜನರು ಮರದ ಮೇಲೆ, ಮಾಳಗಿ ಮೇಲೆ ಕುಳಿತಿರುವ ದೃಶ್ಯ ಸಾಮಾನ್ಯವಾಗಿತ್ತು. ಎತ್ತುಗಳಿಗೆ 7-8 ಮೂಗುದಾರ ಪೂಣಿಸಿ ಹಿಡಿದು ಸ್ಪರ್ಧೆ ಗೆ ಸಜ್ಜುಗೊಳಿಸಿದರು. ಗ್ರಾಮದ ಅಗಸಿಯಿಂದ ಓಟದ ಸ್ಪರ್ಧೆಗೆ ಗ್ರಾಮದ ಹಿರಿಯರು ಹಸಿರು ನಿಶಾನೆ ತೋರುತ್ತಿದ್ದಂತೆ ರೈತರು ಎತ್ತುಗಳಿಗೆ ಚಾಟಿ ಏಟು ನೀಡಿ ಓಡಿಸಿದರು. ಹೀಗೆ ಓಡುವ ಎತ್ತುಗಳನ್ನ ಹಿಡಿಯೋಕೆ ಯುವಕರ ಗುಂಪುಗಳೆ ಇರುತ್ವೆ.
Mangaluru Crime News: ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ಕೊಂದ ಪಾಪಿ ತಂದೆ!
ಜನರ ಮೇಲೆ ಎರಗಿದ ಎತ್ತುಗಳು..!
ಗ್ರಾಮದಲ್ಲಿ ಎತ್ತುಗಳನ್ನ ಓಡಿಸೋಕೆ ಶುರು ಮಾಡಿದ್ರೆ, ಓಡೋಡಿ ಬರುವ ಎತ್ತುಗಳನ್ನ ಯುವಕರು ಹಿಡಿಯೋಕೆ ಪ್ರಯತ್ನಿಸುತ್ತಾರೆ. ಕೆಲ ಯುವಕರು ಇಂಥ ಎತ್ತುಗಳು ಹಿಡಿಯಲು ಪ್ರಯತ್ನಿಸಿದಾಗ ಬೆದರಿದ್ದ ಎತ್ತುಗಳು ಅವರ ಮೇಲೆ ಕೋಡಿನಿಂದ ತಿವಿದ ಘಟನೆಗಳೂ ನಡೆದವು.. ಸುಮಾರು 8-10 ಯುವಕರು ಎತ್ತುಗಳನ್ನು ಬೆದರಿಸಲು ಹೋದಾಗ ಏಕಾಏಕಿ ಎತ್ತುಗಳು ಅವರ ಮೇಲೆ ಎಗರಿ ಬಂದ ಪರಿಣಾಮ ಹಲವರು ಗಾಯ ಗೊಂಡರು. ನಂತರ ಗ್ರಾಮದ ಹಿರಿಯರು ಅಗಸಿ ಬಳಿ ಬಂದು ಎತ್ತುಗಳಿಗೆ ಪೂಜೆ ಸಲ್ಲಿಸಿದ ಮೇಲೆ ಓಟದ ಸ್ಪರ್ಧೆ ಮುಕ್ತಾಯಗೊಂಡಿತು.