Mangaluru Crime News: ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ಕೊಂದ ಪಾಪಿ ತಂದೆ!
Mangaluru Crime News: ಕೌಟುಂಬಿಕ ಸಮಸ್ಯೆಯ ಹಿನ್ನೆಲೆಯಲ್ಲಿ ಪಾಪಿ ತಂದೆಯೊಬ್ಬ ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ಕೊಲೆ ಮಾಡಿದ ಹೃದಯ ವಿದ್ರಾವಕ ಘಟನೆ ದಕ್ಷಿಣ ಕನ್ನಡದಲ್ಲಿ ನಡೆದಿದೆ.
ಮಂಗಳೂರ (ಜೂ. 23): ಕೌಟುಂಬಿಕ ಸಮಸ್ಯೆಯ ಹಿನ್ನೆಲೆಯಲ್ಲಿ ಪಾಪಿ ತಂದೆಯೊಬ್ಬ ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ಕೊಲೆ ಮಾಡಿದ ಹೃದಯ ವಿದ್ರಾವಕ ಘಟನೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಮಂಗಳೂರು (Mangaluru) ತಾಲೂಕಿನ ಪದ್ಮನೂರು ಎಂಬಲ್ಲಿ ನಡೆದಿದೆ. ಮಕ್ಕಳಾದ ರಶ್ಮಿತಾ(14), ಉದಯ್ (11), ದಕ್ಷಿತ್ (04) ಸಾವನ್ನಪ್ಪಿದವರು. ಪಾಪಿ ತಂದೆ ವಿಜೇಶ್ ಶೆಟ್ಟಿಗಾರ್ ಕೃತ್ಯ ಎಸಗಿದ್ದು, ಕೌಟುಂಬಿಕ ಸಮಸ್ಯೆ ಘಟನೆಗೆ ಕಾರಣ ಎನ್ನಲಾಗಿದೆ. ಮಕ್ಕಳನ್ನು ಬಾವಿಗೆ ತಳ್ಳಿದ ಬಳಿಕ ವಿಜೇಶ್ ಶೆಟ್ಟಿಗಾರ್ ತನ್ನ ಪತ್ನಿಯನ್ನು ಎಳೆದುಕೊಂಡು ಹೋಗಿ ಒಟ್ಟಾಗಿ ಬಾವಿಗೆ ಹಾರಿ ಆತ್ಮಹತ್ಯೆಗೆ (Suicide) ಯತ್ನಿಸಿದ್ದಾನೆ.
ಆದರೆ ಸ್ಥಳೀಯರು ತಕ್ಷಣ ಧಾವಿಸಿ ವಿಜೇಶ್ ಮತ್ತು ಆತನ ಪತ್ನಿಯನ್ನ ರಕ್ಷಿಸಿದರೂ ಮೂವರು ಮಕ್ಕಳು ಮಾತ್ರ ಅದಾಗಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಕೌಟುಂಬಿಕ ಸಮಸ್ಯೆ ಹಿನ್ನೆಲೆಯಲ್ಲಿ ಕೃತ್ಯ ಶಂಕೆ ವ್ಯಕ್ತವಾಗಿದ್ದು, ವಿಜೇಶ್ ಪದ್ಮನ್ನೂರು ಬಳಿ ಹೂವಿನ ವ್ಯಾಪಾರ ನಡೆಸ್ತಿದ್ದ ಎನ್ನಲಾಗಿದೆ. ಮುಲ್ಕಿ ಪೊಲೀಸ್ ಠಾಣಾ (Mulki Police Station) ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಮಂಗಳೂರು ಉತ್ತರ ಎಸಿಪಿ ಮಹೇಶ್ ಕುಮಾರ್ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.
ಹಣಕಾಸು ಸಮಸ್ಯೆ ಕಾರಣಕ್ಕೆ ನಿತ್ಯ ಜಗಳ?: ವಿಜೇಶ್ ಶೆಟ್ಟಿಗಾರ್ ಹೂವಿನ ವ್ಯಾಪಾರದ ಜೊತೆಗೆ ಕೂಲಿ ಕೆಲಸ ಕೂಡ ಮಾಡ್ತಾ ಇದ್ದು, ಸರಿಯಾಗಿ ಕೆಲಸಕ್ಕೆ ಹೋಗುತ್ತಿರಲಿಲ್ಲವಂತೆ. ಹೀಗಾಗಿ ಅನೇಕ ಬಾರಿ ವಿಜೇಶ್ ಮತ್ತು ಪತ್ನಿಯ ಮಧ್ಯೆ ಜಗಳ ನಡೀತಾ ಇದ್ದು, ಹಣಕಾಸು ವಿಚಾರದಲ್ಲಿ ನಿತ್ಯ ಸಂಘರ್ಷ ಇತ್ತು ಎನ್ನಲಾಗಿದೆ. ಇಂದು ಇದೇ ಕಾರಣಕ್ಕೆ ಮತ್ತೆ ಜಗಳ ನಡೆದಿದ್ದು, ಇದರಿಂದ ಆಕ್ರೋಶಗೊಂಡ ವಿಜೇಶ್ ಮೂವರು ಮಕ್ಕಳನ್ನು ಬಾವಿಗೆ ತಳ್ಳಿದ್ದಾನೆ.
ಇದನ್ನೂ ಓದಿ: ಪತ್ನಿ ಕೊಂದು, ಮಗಳನ್ನು ಕೊಲ್ಲಲು ಯತ್ನಿಸಿದ ಅಪ್ಪ, ಸತ್ತಂತೆ ನಟಿಸಿದ ಪುತ್ರಿ!
ಇದೇ ವೇಳೆ ಹುಡುಕಿಕೊಂಡು ಬಂದ ಪತ್ನಿಯನ್ನು ಕೂಡ ತಳ್ಳಿದ್ದು, ತಾನೂ ಬಾವಿಗೆ ಹಾರಿದ್ದಾನೆ. ಆದರೆ ಪತ್ನಿ ಮತ್ತು ವಿಜೇಶ್ ಬದುಕಿದ್ದು, ಮೂವರು ಮಕ್ಕಳು ಸಾವಿಗೀಡಾಗಿದ್ದಾರೆ. ಪತ್ನಿ ಲಕ್ಷ್ಮೀ (35) ಮನೆ ಕೆಲಸ ಮಾಡುತ್ತಾ ಜೀವನ ಸಾಗಿಸುತಿದ್ದು, ರಶ್ಮಿತಾ 8ನೇ ತರಗತಿ ಕಟೀಲು ಶಾಲೆ, ಉದಯ 6ನೇ ತರಗತಿ ಪುನರೂರು ಶಾಲೆ ಹಾಗೂ ಅಂಗನವಾಡಿಯಲ್ಲಿ ಕಲಿಯುತ್ತಿರುವ 4 ವರ್ಷದ ದಕ್ಷಿತ್ ಎಂಬ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ.