ಪ್ರತಿಯೊಂದನ್ನೂ ಪರಿಸರಕ್ಕೆ ಪೂರಕವಾಗಿ ಮಾಡಲು ಎಲ್ಲರಿಗೂ ಮನಸ್ಸಿರುತ್ತದೆ. ಆದರೆ, ಹೇಗೆ ಮಾಡಿದರೆ ಪರಿಸರಕ್ಕೆ ಪೂರಕ, ಯಾವುದು ಮಾರಕ ಎಂದೆಲ್ಲ ಲೆಕ್ಕ ಹಾಕುತ್ತಾ ಕೂರಲು ಮಾತ್ರ ಯಾರಿಗೂ ಸಮಯವಿಲ್ಲ. ಅಷ್ಟೇ ಅಲ್ಲ, ಈ ಲೆಕ್ಕಾಚಾರದಲ್ಲಿ ಆ ಕ್ಷಣದ ಸಂಭ್ರಮಗಳೆಲ್ಲ ಸವೆದು ಹೋಗುತ್ತದೆಂಬ ಭಯ ಬೇರೆ. ದೀಪಾವಳಿಯನ್ನು ಕೂಡಾ ಪರಿಸರಸ್ನೇಹಿಯಾಗಿಸಲು ಹಲವರಿಗೆ ಇಷ್ಟ.

ದೀಪಾವಳಿಗೆ ಎಣ್ಣೆ ಸ್ನಾನ ಮಾಡಿದ್ರಾ? ಅಷ್ಟಕ್ಕೂ ಇದರ ಮಹತ್ವವೇನು?

ಆದರೆ, ಹೇಗೆ ಎಂದು ಯೋಚಿಸುವುದಕ್ಕಿಂತ ಬೇಕಾಗಿದ್ದನ್ನು ಶಾಂಪಿಂಗ್ ಮಾಡಿ ಬಳಸಿ ಬಿಸಾಡುವುದು ಸುಲಭ ಎಂಬ ಕಾರಣಕ್ಕೆ ಜನರು ಮನಸ್ಸಿಗೆ ಬಂದಂತೆ ಹಬ್ಬ ಆಚರಿಸುತ್ತಾರೆ. ಆದರೆ ಹಬ್ಬ ಮುಗಿದ ಮರುದಿನ ಪ್ರತಿ ಊರಿನ ಬೀದಿಬೀದಿಗಳೂ ಕಸದಲ್ಲಿ ಮಿಂದೆದ್ದಿರುತ್ತವೆ. ಪಟಾಕಿಗಳ ರಾಸಾಯನಿಕದ ವಾಸನೆ ಮೂಗಿಗೆ ಬಡಿಯುತ್ತಿರುತ್ತದೆ. ನಮ್ಮ ಸಂಭ್ರಮ ಪರಿಸರಕ್ಕೆ ಅಪಾಯಕಾರಿಯಾಗಿರಬಾರದು. ಹಾಗಾದರೆ, ಹಸಿರು ದೀಪಾವಳಿ ಆಚರಿಸಲು ಏನೆಲ್ಲ ಮಾಡಬಹುದು ಎಂಬುದನ್ನು ಇಲ್ಲಿ ತಿಳಿಸಿದ್ದೇವೆ ನೋಡಿ. 

1.ಆಹಾರ ತ್ಯಾಜ್ಯ ಕಡಿಮೆ ಮಾಡಿ

ದೀಪಾವಳಿಯಲ್ಲಿ ಎಷ್ಟನ್ನು ತಿನ್ನಬಹುದೋ ಅಷ್ಟೇ ಆಹಾರ ತಯಾರಿಸಿ. ಎರಡರಿಂದ ಮೂರು ವೆರೈಟಿ ಸಾಕು. ಸಿಹಿ ಅದಕ್ಕಿಂತ ಹೆಚ್ಚಾದರೆ ಮುಖ ಕಟ್ಟಿದಂತಾಗುತ್ತದೆ. ಜೊತೆಗೆ, ಆರೋಗ್ಯಕ್ಕೂ ಒಳಿತಲ್ಲ. ನೀವು 10 ರೀತಿಯ ಅಡುಗೆ ಮಾಡಿದಿರೆಂದು ಯಾರೂ ಇಂಪ್ರೆಸ್ ಆಗುವುದಿಲ್ಲ. ಎರಡು ಮೂರು ರೀತಿಯೇ ಆದರೂ ರುಚಿಯಾಗಿದ್ದರೆ ಅದನ್ನು ಮನಸ್ಪೂರ್ತಿಯಾಗಿ ತಿನ್ನಬಹುದು. ಹಾಗಾಗಿ, ದಿನಸಿ ತರುವ ಮುನ್ನವೇ ಸರಿಯಾಗಿ ಪ್ಲ್ಯಾನ್ ಮಾಡಿ ಎಷ್ಟು ಬೇಕೋ ಅಷ್ಟೇ ಖರೀದಿಸಿ. ಸುಮ್ಮನೆ ಬಿಸಾಡುವ ಸಲುವಾಗಿ ಯಾವ ಅಡುಗೆಯನ್ನೂ ಮಾಡಬೇಡಿ.

ಮನೆ ಮನಸ್ಸಿಗೆ ಬೆಳಕು ತರುವ ದೀಪಾವಳಿ ಹಬ್ಬದ ವಿಶೇಷಗಳು!

2. ಮಣ್ಣಿನ ಹಣತೆ ಬಳಕೆ

ಚೈನೀಸ್ ಎಲ್ಇಡಿ ಲೈಟ್‌ಗಳು ಅಥವಾ ಕ್ಯಾಂಡಲ್ಸ್ ಬಳಕೆ ಬೇಡ. ಈ ಮೇಣದ ದೀಪಗಳಲ್ಲಿ ಪ್ಯಾರಾಫಿನ್ ವ್ಯಾಕ್ಸ್ ಇರುತ್ತದೆ. ಇದನ್ನು ಪೆಟ್ರೋಲಿಯಂನಿಂದ ಮಾಡಲಾಗಿದ್ದು, ಇದು ಪರಿಸರಕ್ಕಾಗಲಿ, ನಿಮ್ಮ ಆರೋಗ್ಯಕ್ಕಾಗಲಿ ಒಳ್ಳೆಯದಲ್ಲ. ಅದರ ಬದಲಿಗೆ ಮಣ್ಣಿನಿಂದ ಮಾಡಿದ ಹಣತೆಗಳನ್ನು ಖರೀದಿಸಿ. ಇದನ್ನು ತಯಾರಿಸುವವರು ವರ್ಷವಿಡೀ ಒದ್ದಾಡಿ, ಹಬ್ಬದ ಕಾಲದಲ್ಲಿ ಮಾರಾಟಕ್ಕಾಗಿ ಕಾಯುತ್ತಿರುತ್ತಾರೆ. ಜೊತೆಗೆ, ಮಣ್ಣಿನ ಹಣತೆ ನೀಡುವ ಹಬ್ಬದ ಕಳೆಯನ್ನು ಬೇರಾವುದೇ ರೀತಿಯ ಲೈಟ್‌ಗಳು ನೀಡಲಾರವು. ಇದು ಹಬ್ಬದ ಆಧ್ಯಾತ್ಮಿಕ ಸ್ಪರ್ಶವನ್ನು ಗಮನಕ್ಕೆ ತರುತ್ತದೆ. 

3. ಸ್ವೀಟ್, ಎಲೆಕ್ಟ್ರಾನಿಕ್ಸ್ ಹಾಗೂ ಡ್ರೈ ಫ್ರೂಟ್ಸ್ ಮಾತ್ರ ಉಡುಗೊರೆಯಲ್ಲ

ದೀಪಾವಳಿಗೆ ನಾವು ನೀಡುವ ಸಿಹಿತಿನಿಸುಗಳು ಸುಮ್ಮನೆ ಕ್ಯಾಲೋರಿ ಹೆಚ್ಚಿಸುತ್ತವೆ. ಇನ್ನು ಲೈಟ್ ಮತ್ತಿತರೆ ಎಲೆಕ್ಟ್ರಾನಿಕ್ ವಸ್ತುಗಳು ಕಾಸ್ಟ್ಲಿ ಬಿಟ್ಟರೆ ಪ್ರಯೋಜನವೇನಿಲ್ಲ. ಬದಲಿಗೆ ಒಳಾಂಗಣ ಸಸ್ಯಗಳು, ಚೆಂದದ ಹೂವುಗಳು, ಜೈವಿಕ ಆಹಾರ ಸಾಮಗ್ರಿಗಳನ್ನು ನೀಡಬಹುದು.

4. ಗಿಫ್ಟ್ ರ್ಯಾಪ್ ಬೇಡ

ಉಡುಗೊರೆಗಳನ್ನು ನೀಡುವಾಗ ಅವುಗಳನ್ನು ಫಳಫಳ ಹೊಳೆವ ಪ್ಲ್ಯಾಸ್ಟಿಕ್ ಪೇಪರ್‌ಗಳಲ್ಲಿ ಸುತ್ತಿಟ್ಟಿರಲೇಬೇಕೆಂಬ ನಿಯಮವೇನಿಲ್ಲ. ಒಮ್ಮೆ ಉಡುಗೊರೆ ತೆರೆದ ಮೇಲೆ ಡಸ್ಟ್‌ಬಿನ್ ಸೇರುವ ಈ ಬಣ್ಣದ ಹಾಳೆಗಳಿಗೆ ಹಣ ವ್ಯರ್ಥ ಮಾಡುವುದೇಕೆ, ಜೊತೆಗೆ ಅವು ಕಸ ಹಾಗೂ ಪರಿಸರಕ್ಕೆ ಮಾರಕ ಕೂಡಾ. ಹಾಗಾಗಿ, ಬಣ್ಣದ ಪ್ಲ್ಯಾಸ್ಟಿಕ್ ಹಾಳೆ ಇಲ್ಲದೆಯೇ ಉಡುಗೊರೆ ಕೊಡುವುದನ್ನು ಅಭ್ಯಾಸ ಮಾಡಿಕೊಳ್ಳಿ. 

ಬಂದೇ ಬಿಡ್ತು ದೀಪಾವಳಿ; ಪ್ರೀತಿಪಾತ್ರರಿಗೆ ಈ ಗಿಫ್ಟ್ ಗಳನ್ನು ಕೊಡಿ!

5. ಸಿಂಗಲ್ ಬಳಕೆಯ ಪ್ಲ್ಯಾಸ್ಟಿಕ್ ಬೇಡ

ದೀಪಾವಳಿ ಹಬ್ಬದ ಪಾರ್ಟಿಗಳು ಮತ್ತಿತರೆ ಕಾರ್ಯಕ್ರಮಗಳಲ್ಲಿ ಪ್ಲ್ಯಾಸ್ಟಿಕ್ ಕಪ್‌ಗಳು, ತಟ್ಟೆಗಳ ಬಳಕೆಯನ್ನು ಬಿಟ್ಟುಬಿಡಿ. ಬದಲಿಗೆ ಗೃಹಬಳಕೆಯ ಪಾತ್ರೆಗಳನ್ನೇ ಉಪಯೋಗಿಸಿ. ಪ್ಲ್ಯಾಸ್ಟಿಕ್ ಆಧರೆ ಬಳಸಿ ಬಿಸಾಡಬಹುದು, ಮನೆಯ ಪಾತ್ರೆಗಳನ್ನು ತೊಳೆಯುತ್ತಾ ಕೂರಬೇಕು ನಿಜ. ಆದರೆ, ಸಿಂಗಲ್ ಯೂಸ್ ಪ್ಲ್ಯಾಸ್ಟಿಕ್‌ಗಳನ್ನು ಬಳಸುವವರ ಸಂಖ್ಯೆ ಕಡಿಮೆಯಾದಾಗ ತಯಾರಿಕರಿಗೂ ಅದರ ಸಂದೇಶ ಸಿಕ್ಕು, ಉತ್ಪಾದನೆ ಕಡಿಮೆಯಾಗುತ್ತದೆ. ಇದರಿಂದ ಪರಿಸರಕ್ಕೆ ಮತ್ತೊಂದಿಷ್ಟು ಪ್ಲ್ಯಾಸ್ಟಿಕ್ ಸೇರದಂತೆ ನೋಡಿಕೊಳ್ಳಬಹುದು. 

6. ರಂಗೋಲಿಯ ಬಣ್ಣ ನ್ಯಾಚುರಲ್ ಆಗಿರಲಿ

ರಂಗೋಲಿಯ ರಂಗು ರಂಗಿನ ಬಣ್ಣಗಳಲ್ಲಿ ಕೆಮಿಕಲ್ಸ್ ಧಾರಾಳವಾಗಿರುತ್ತದೆ. ಇದು ನೀರು, ಗಾಳಿಯಲ್ಲಿ ಸೇರಿ ಪರಿಸರ ಮಾಲಿನ್ಯ ಮಾಡುತ್ತದೆ. ಹೀಗಾಗಿ, ಈ ಬಣ್ಣಗಳ ಬಳಕೆ ಬೇಡ. ಆರ್ಗ್ಯಾನಿಕ್ ಬಣ್ಣಗಳು ಕೂಡಾ ಬೇಡ. ಬದಲಿಗೆ ರಂಗೋಲಿಯ ಪುಡಿಗೆ ಅಕ್ಕಿ ಹಿಟ್ಟನ್ನೇ ಬಳಸಬಹುದು. ಹಳದಿಗೆ ಅಡುಗೆ ಅರಿಶಿನ ಬಳಸಬಹುದು. ಇನ್ನುಳಿದ ಬಣ್ಣಗಳಿಗೆ ದವಸಧಾನ್ಯಗಳನ್ನೇ ಬಳಸಬಹುದು. ಇದರ ಹೊರತಾಗಿಯೂ ಹೂವಿನ ದಳದಿಂದ ರಂಗೋಲಿ ಬಣ್ಣ ಹಾಕುವ ಅಭ್ಯಾಸ ಉತ್ತಮ.

7. ಪ್ಲ್ಯಾಸ್ಟಿಕ್ ಡೆಕೋರೇಶನ್ ಬೇಡ

ಗ್ಲಾಸ್, ಮರ, ಹೂವು ಹಾಗೂ ಆರ್ಗ್ಯಾನಿಕ್ ಕಾಟನ್‌ನಿಂದ ತಯಾರಿಸಿದ ಡೆಕೋರೇಶನ್ ಆಯ್ಕೆ ಮಾಡಿ. ಪ್ಲ್ಯಾಸ್ಟಿಕ್ ಹಾರಗಳು, ತೋರಣಗಳ ಬಳಕೆ ಬೇಡ. 

8. ಪಟಾಕಿಗೆ ಹಣ ವ್ಯರ್ಥ

ಸುಮ್ಮನೆ ಜಾಸ್ತಿ ಹಣ ಕೊಟ್ಟು ಖರೀದಿಸಿದ ಪಟಾಕಿಯನ್ನು ಬೆಂಕಿ ಹಾಕಿ ಸುಟ್ಟು ತೆಗೆವುದು ಹಣದ ಪೋಲಲ್ಲವೇ? ಇದು ಮನುಷ್ಯರ ಆರೋಗ್ಯಕ್ಕೆ, ಪ್ರಾಣಿಗಳಿಗೆ ಹಾಗೂ ಪರಿಸರಕ್ಕೆ ಕೂಡಾ ಅಪಾಯಕಾರಿ. ಪಟಾಕಿ ಸಿಡಿಸುವ ಬದಲು ಕುಟುಂಬದವರೆಲ್ಲ ಒಟ್ಟಾಗಿ ಸೇರಿ ಆಟಗಳನ್ನು ಆಡುವ ಅಭ್ಯಾಸ ರೂಢಿಸಿಕೊಳ್ಳಿ. ಇದು ಪಟಾಕಿಗಿಂತ 10 ಪಟ್ಟು ಹೆಚ್ಚು ಖುಷಿ ನೀಡದಿದ್ದರೆ ಕೇಳಿ.