ಸಿಕ್ಕಾಪಟ್ಟೆ ಕೋಪ ಬರುತ್ತಾ? ಈ ಜ್ಯೋತಿಷ್ಯ ಪರಿಹಾರ ನಿಮ್ಮನ್ನು ಶಾಂತವಾಗಿಸುತ್ತೆ!
ಕೋಪ ಬಹುತೇಕ ಬಾರಿ ಕೆಟ್ಟದ್ದೇ. ಅದರಿಂದ ಸಾಕಷ್ಟು ಅನಾಹುತಗಳಾಗುತ್ತವೆ. ಕೋಪದಲ್ಲಿ ಕೊಯ್ದ ಮೂಗು ಆಮೇಲೆ ಬೇಕು ಅಂದ್ರೆ ಬರೋದಿಲ್ಲ. ಆದ್ರೆ ಬಹುತೇಕರ ಪರಿಸ್ಥಿತಿ ಇದೇ. ಕೋಪ ನಿಯಂತ್ರಿಸಿಕೊಳ್ಳಲು ಬಾರದೆ ಅನಾಹುತ ಮಾಡಿಕೊಂಡು ನಂತರ ಪಶ್ಚಾತ್ತಾಪ ಪಡುತ್ತಾರೆ. ಕೋಪ ಕಡಿಮೆ ಮಾಡಿಕೊಳ್ಳಲು ಜ್ಯೋತಿಷ್ಯ ಪರಿಹಾರಗಳು ಇಲ್ಲಿವೆ.
ಕೋಪ(anger) ಎಲ್ಲರಿಗೂ ಬರುತ್ತದೆ. ಕೆಲವರಿಗೆ ಅದನ್ನು ನಿಯಂತ್ರಿಸಿಕೊಳ್ಳುವ ಛಾತಿ ಇರುತ್ತದೆ. ಮತ್ತೆ ಕೆಲವರು ಕೋಪ ಬಂದಾಗ ರಣಚಂಡಿ ಅವತಾರ ತಾಳುತ್ತಾರೆ. ಇನ್ನೂ ಕೆಲವರು ಕೋಪದ ಭರದಲ್ಲಿ ತಾವೇನು ಮಾಡುತ್ತಿದ್ದೇವೆಂಬ ಪ್ರಜ್ಞೆಯನ್ನೇ ಕಳೆದುಕೊಂಡು ಬೇಕಾಬಿಟ್ಟಿ ವರ್ತಿಸಿ ನಂತರ ತಮ್ಮ ವರ್ತನೆಗಾಗಿ ಪಶ್ಚಾತ್ತಾಪ ಪಡುತ್ತಾರೆ. ಆದರೆ, ಪಶ್ಚಾತ್ತಾಪದಿಂದ ಆದ ಹಾನಿಯನ್ನು ತಪ್ಪಿಸುವುದು ಸಾಧ್ಯವಿಲ್ಲವಲ್ಲ!
ಕೋಪದ ವಿಷಯದಲ್ಲಿ ಸದಾ ನಿಯಂತ್ರಣ ಇರಬೇಕು. ಇಲ್ಲದಿದ್ದರೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕೋಪದಿಂದ ಧನಾತ್ಮಕ ಫಲಿತಾಂಶ ಸಿಗುವುದು ಸಾಧ್ಯವೇ ಇಲ್ಲ. ಕೋಪದಿಂದ ತೆಗೆದುಕೊಂಡ ನಿರ್ಧಾರಗಳು ಸರಿಯಾಗಿರಲೂ ಸಾಧ್ಯವಿಲ್ಲ. ಕೋಪ ಸಂಬಂಧಗಳನ್ನು ಹಾಳು ಮಾಡುತ್ತದೆ, ಮನಃಶಾಂತಿಯನ್ನು ಕೆಡಿಸುತ್ತದೆ.
ಇದೆಲ್ಲ ತಿಳಿದಿದ್ದರೂ ಕೆಲವರಿಂದ ಕೋಪ ನಿಯಂತ್ರಿಸಿಕೊಳ್ಳಲು(Anger management) ಅಸಾಧ್ಯವಾಗಿರುತ್ತದೆ. ಈ ಕೋಪಕ್ಕೆ ಗ್ರಹಗಳ ಚಲನೆ, ರಾಶಿ, ನಕ್ಷತ್ರಗಳು ಕೂಡಾ ಕಾರಣ ಎನ್ನುತ್ತದೆ ಜ್ಯೋತಿಷ್ಯ. ಸಾಮಾನ್ಯವಾಗಿ ವೃಶ್ಚಿಕ, ಸಿಂಹ ಮತ್ತು ವೃಷಭ ರಾಶಿಯವರು ತಮ್ಮ ದೃಢವಾದ ವ್ಯಕ್ತಿತ್ವದಿಂದಾಗಿ ಕೋಪದ ಸಮಸ್ಯೆಗಳಿಗೆ ಗುರಿಯಾಗುತ್ತಾರೆ. ನಮ್ಮ ಕೋಪದ ಮೇಲೆ ಹೇಗೆ ಹಿಡಿತ ಸಾಧಿಸಬಹುದು, ಇದಕ್ಕೆ ಜ್ಯೋತಿಷ್ಯ ಪರಿಹಾರ(Astrological remedies)ಗಳೇನಿವೆ ಎಂದು ನೋಡೋಣ.
1. ನಿಮ್ಮ ಸುತ್ತಮುತ್ತಲಿನ ಪ್ರದೇಶ ಮತ್ತು ಕೆಲಸದ ಸ್ಥಳವನ್ನು ಯಾವಾಗಲೂ ಸ್ವಚ್ಛ(clean)ವಾಗಿಟ್ಟುಕೊಳ್ಳಬೇಕು. ಶುಚಿತ್ವದ ಬಗ್ಗೆ ಗಮನ ಹರಿಸದ ಯಾರಿಗಾದರೂ ಕೋಪವು ಹೆಚ್ಚು. ಅದು ತಂದೊಡ್ವು ಸಮಸ್ಯೆಗಳೂ ಹೆಚ್ಚೇ. ಇದಲ್ಲದೆ, ನಿಮ್ಮ ಮನೆಯಲ್ಲಿ ಪ್ರತಿ ದಿನ ಬೆಳಿಗ್ಗೆ ಮತ್ತು ಸಂಜೆ ಪೂರ್ವ ದಿಕ್ಕಿನಲ್ಲಿ ದೀಪವನ್ನು ಬೆಳಗಿಸಬೇಕು.
ವಾಸ್ತು ಪ್ರಕಾರ ಮನೆಯಲ್ಲಿ ಯಾವ ಪ್ರಾಣಿ ಸಾಕೋದು ಒಳ್ಳೇದು?
2. ಜ್ಯೋತಿಷ್ಯದ ಪ್ರಕಾರ, ಈಗಾಗಲೇ ಕೋಪದ ಸಮಸ್ಯೆಗಳನ್ನು ಹೊಂದಿರುವ ಜನರು ಕುಟುಂಬ ಮತ್ತು ಕೆಲಸದ ಸ್ಥಳದಲ್ಲಿ ಮಹಿಳೆ(women)ಯರನ್ನು ಅವಮಾನಿಸಬಾರದು. ಪ್ರತಿ ದಿನ ಆಂಜನೇಯನನ್ನು ಪೂಜಿಸಿ ಮತ್ತು ಹನುಮಾನ್ ಚಾಲೀಸಾ(Hanuman Chalisa)ವನ್ನು ಪಠಿಸಿ. ಇದರಿಂದ ಕೋಪದ ಸಮಸ್ಯೆಗಳು ಕಡಿಮೆಯಾಗುತ್ತವೆ.
3. ಕೋಪ ಸಿಕ್ಕಾಪಟ್ಟೆ ಹೆಚ್ಚಿದ್ದರೆ ಸಸ್ಯಾಹಾರ(Veg)ದತ್ತ ಹೊರಳಿಕೊಳ್ಳಿ. ಮಧ್ಯಮ ಪ್ರಮಾಣದಲ್ಲಿ ಆಹಾರವನ್ನು ಸೇವಿಸಿ. ಈರುಳ್ಳಿ, ಬೆಳ್ಳುಳ್ಳಿ ಮುಂತಾದ ತಾಮಸಿಕ ಆಹಾರವನ್ನು ತಪ್ಪಿಸಿ. ಮಸಾಲೆಯುಕ್ತ ಅಥವಾ ಸಂಸ್ಕರಿಸಿದ ಆಹಾರ ಸೇವನೆ ಬೇಡ. ಸಕ್ಕರೆ, ಮದ್ಯಪಾನ, ಧೂಮಪಾನ ಮತ್ತು ಇತರ ವ್ಯಸನಕಾರಿ ಅಮಲುಗಳನ್ನು ಸಹ ತ್ಯಜಿಸಬೇಕು.
4. ಕೆಲವೊಮ್ಮೆ, ಒಬ್ಬ ವ್ಯಕ್ತಿಯು ಯಾರೊಂದಿಗೂ ಮಾತನಾಡದೆಯೂ ಕೋಪಗೊಳ್ಳಬಹುದು. ಅಂತಹ ನಡವಳಿಕೆಯ ಕಾರಣವು ವ್ಯಕ್ತಿಯ ಮಾನಸಿಕ ಮತ್ತು ಭಾವನಾತ್ಮಕ ಸ್ಥಿತಿಯಲ್ಲಿ ಬೇರೂರಿರಬಹುದು, ಇದಕ್ಕೆ ತಕ್ಷಣದ ಗಮನ ಬೇಕು. ನೀವೂ ಇವರಲ್ಲೊಬ್ಬರಾಗಿದ್ದರೆ, ಪ್ರತಿದಿನ ಬೆಳಿಗ್ಗೆ ಎದ್ದಾಗ, ಭೂಮಿ ತಾಯಿಗೆ ನಮಸ್ಕರಿಸಲು ಜ್ಯೋತಿಷ್ಯದಲ್ಲಿ ಸಲಹೆ ನೀಡಲಾಗುತ್ತದೆ. ಇದರ ನಂತರ, ಬಲ ಪಾದವನ್ನು ಮೊದಲು ನೆಲದ ಮೇಲೆ ಇರಿಸಿ. ಅಲ್ಲದೆ, ಹಾಸಿಗೆಯಿಂದ ಹೊರಬಂದ ನಂತರ, ಕನಿಷ್ಠ 15 ನಿಮಿಷಗಳ ಕಾಲ ಯಾರೊಂದಿಗೂ ಮಾತನಾಡಬೇಡಿ. ಸಾಧ್ಯವಾದರೆ ಧ್ಯಾನ(meditation) ಮಾಡಿ. ಇದನ್ನು ನಿಯಮಿತವಾಗಿ ಮಾಡುವುದರಿಂದ ಕೋಪ ಶಮನವಾಗುತ್ತದೆ ಎಂದು ನಂಬಲಾಗಿದೆ.
ನಂದಿಯ ಕಿವಿಯಲ್ಲಿ ಹೇಳೋ ಆಶಯ ಈಡೇರುತ್ತೆ ನಿಜ, ಆದ್ರೆ ನಿಯಮಗಳು ಗೊತ್ತಾ?
5. ಸುಲಭವಾಗಿ ಕೋಪಗೊಳ್ಳುವ ಜನರು ತಮ್ಮ ಕೋಪವನ್ನು ನಿಯಂತ್ರಿಸಲು ಬೆಳ್ಳಿಯ ಉಂಗುರ ಅಥವಾ ಪೆಂಡೆಂಟ್‌ನಲ್ಲಿ ದೊಡ್ಡ ಗಾತ್ರದ ನಿಜವಾದ ಮುತ್ತುಗಳನ್ನು ಧರಿಸಬೇಕು. ಮುತ್ತು(pearl)ಗಳನ್ನು ಕನಿಷ್ಠ 8 ರಿಂದ 12 ಕ್ಯಾರೆಟ್‌ಗಳನ್ನು ಧರಿಸಬೇಕು. ಇದರಿಂದಾಗಿ ವ್ಯಕ್ತಿಯ ಜಾತಕದಲ್ಲಿ ಚಂದ್ರನು ಶಾಂತನಾಗುತ್ತಾನೆ ಮತ್ತು ಕೋಪಗೊಂಡಾಗಲೂ, ನೀವು ಅದನ್ನು ಸರಿಯಾಗಿ ನಿಯಂತ್ರಿಸಲು ಸಾಧ್ಯವಾಗುತ್ತದೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.