ಮಹಾಲಯ ಶ್ರಾದ್ಧ - ಯಾರು, ಯಾವಾಗ, ಹೇಗೆ ಮಾಡಬೇಕು? ಇಲ್ಲಿದೆ ವಿವರ
ಪಿತೃಗಳನ್ನು ಮತ್ತು ಅವರ ಪೂರ್ವಿಕರನ್ನು ನೆನಪಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ. ಹಿರಿಯರು ಹಾಕಿದ ಗೆರೆಯಲ್ಲಿಯೇ ನಡೆಯಬೇಕೆಂದೇನೂ ಅಲ್ಲ. ಆದರೆ, ಅವರು ತೋರಿಸಿದ ಸನ್ಮಾರ್ಗ ಹಾಗೂ ತಮ್ಮನ್ನು ಭೂಮಿಗೆ ಕರೆ ತರುವಂತೆ ಮಾಡಿದ ಅವರಿಗೆ ಥ್ಯಾಂಕ್ಸ್ ಹೇಳು ಈ ಪದ್ಧತಿ
- ದೈವಜ್ಞ. ಹರೀಶ್ ಕಾಶ್ಯಪ
ಸತ್ಪುತ್ರ - ಅಂದರೆ ಯಾರು ?
'ಪುತ್' ಎಂಬ ನರಕದಿಂದ ಪಾರು ಮಾಡುವವನೇ ಪುತ್ರನು.
ತಂದೆ ತಾಯಿಗಳು ಜೀವಿಸುರುವಾಗ ಅವರಿಗೆ ಅಧೀನನಾಗಿದ್ದು ಅವರ ಮಾತನ್ನು ನಡೆಸಿ ಕೊಡುವುದು.
ಮೃತರಾದ ಮೇಲೆ ಪ್ರತಿ ವರ್ಷವೂ ಕಾಲ ಪ್ರಾಪ್ತ ಶ್ರಾದ್ಧ ಮಾಡುವುದು.
ಒಂದು ಬಾರಿಯಾದರೂ ಗಯಾಕ್ಕೆ ಹೋಗಿ ಮೃತ ತಂದೆ ತಾಯಿಯನ್ನು ಉದ್ಧೇಶಿಸಿ, ವಿಷ್ಣು ಪಾದದಲ್ಲಿ ಪಿಂಡ ಪ್ರದಾನ ಮಾಡುವುದು.
ಈ ಮೂರರಿಂದ 'ಪುತ್ರ' ನೆನಿಸುವನು!
ಜೀವತೋ ವಾಕ್ಯ ಕರಣಾತ್ ಪ್ರತ್ಯಬ್ಧಂ ಭೂರಿ ಭೋಜನಾತ್ ।
ಗಯಾಯಾಂ ಪಿಂಡ ದಾನಾಶ್ಚ ತ್ರಿಭಿಃ ಪುತ್ರಸ್ಯ ಪುತ್ರತಾ ।।
'ಪುರು ತ್ರಾಯತೇ ಇತಿ ಪುತ್ರಃ' ಎಂಬಂತೆ ಇತರ ಬಂಧುಗಳಕ್ಕಿಂತ ಚೆನ್ನಾಗಿ ರಕ್ಷಿಸುವನು. ತಂದೆ ತಾನು ಬದುಕಿರುವಾಗ ಗೋದಾನಾದಿಗಳನ್ನೂ, ಛತ್ರಿ, ಚಪ್ಪಲಿ (Slippers), ಪದದಾನ, ಶಯ್ಯ ದಾನಗಳನ್ನು ಪಾರ ಲೌಕಿಕ ಫಲಕ್ಕಾಗಿ ಮಾಡಬಹುದು.
ಆದರೆ ದಹನ - ಜಲಾಂಜಲೀ - ಪಿಂಡ ದಾನಾದಿಗಳನ್ನು ತಾನೇ ಮಾಡಲಾರ! ಇದಕ್ಕಾಗಿಯೇ ತನ್ನದೇ ಆದ ಇನ್ನೊಂದು ರೂಪವನ್ನು ಅಪೇಕ್ಷಿಸುತ್ತಾನೆ. ಇದನ್ನೇ..
'ಅಯಂ ಲೋಕಃ ಪುತ್ರೇಣೈವ ಜಯ್ಯಃ ನಾನ್ಯೇನ' - ಎನ್ನಲಾಗಿದೆ.
ಉಪನಿಷದ್ವಾಕ್ಯದಂತೆ ಪುತ್ರ ಎಂದರೆ?
ಪಾಪ ಫಲ ರೂಪವಾಗಿ ಬರುವ ದುಃಖ ರೂಪವಾದ 'ಪುತ್' ಎಂಬ ನರಕದಿಂದ ಬಿಡಿಸುವ ಅಥವಾ ರಕ್ಷಿಸುವ ಮಗನನ್ನು ಮಾತ್ರವೇ 'ಪುತ್ರ' ಎನ್ನುತ್ತಾರೆ. ಈ ರೀತಿಯಾದ ಪುತ್ರನನ್ನು ಮಾತ್ರವೇ ಪಡೆಯಬೇಕೆಂದು ಇಹ ಮತ್ತು ಪರ ಲೋಕದಲ್ಲಿಯೂ ಅಪೇಕ್ಷಿಸುತ್ತಾರೆ!
ಪುದಿತಿ ನರಕವ್ಯಾಖ್ಯಾಃ ದುಃಖಂ ಚ ನರಕಂ ವಿದುಃ ।
ಪುದಿತ್ರಾಣಾತ್ತತಃ ಪುತ್ರಂ
ಹೇಚ್ಚಂತಿ ಪರತ್ರ ಚ ।।
ಶ್ರುತಿಯಲ್ಲಿಯೂ ತಂದೆಗೆ (Father) ಒಳ್ಳೆಯ ಲೋಕಗಳನ್ನು ಸಂಪಾದಿಸಿ ಕೊಡುವವನು ಪುತ್ರನೆಂದೂ..
ಪುತ್ರಃ ಪಿತ್ರೇ ಲೋಕಕೃತ್ ಜಾತವೇದಾಃ ।। - ತೈತ್ತಿರೇಯ ಬ್ರಾಹ್ಮಣ
ಆದ್ದರಿಂದ ತಂದೆ ತಾಯಿಗಳ ಶ್ರಾದ್ಧ ಮಾಡುವ ಅಧಿಕಾರ ಪುತ್ರನಿಗೆ (ಮಗನಿಗೆ) ಮಾತ್ರ ಶ್ರುತಿ - ಸ್ಮೃತಿಗಳು ಅಧಿಕಾರವನ್ನು ನೀಡಿದೆ.
ಆಷಾಢದ ಹುಣ್ಣಿಮೆಯಿಂದ ಐದನೇ ಪಕ್ಷ ಅಂದರೆ ಭಾದ್ರಪದ ಕೃಷ್ಣ ಪಕ್ಷವು ಪಂಚಮ. ಇದಕ್ಕೆ ಅಪರ ಪಕ್ಷವೆಂದೂ, ಪಿತೃ ಪಕ್ಷವೆಂದೂ, ಮಹಾಲಯ (Mahalaya) ಪಕ್ಷವೆಂದೂ ಪ್ರಸಿದ್ಧ. ಈ ಅವಧಿಯಲ್ಲಿ ಕನ್ಯಾ ರಾಶಿಯಲ್ಲಿ ರವಿಯಿದ್ದರೆ ಇನ್ನೂ ವಿಶೇಷ. ಈ ಸಮಯದಲ್ಲಿ ಪಿತೃಗಳು ತಮ್ಮವರಿಂದ ಪಿಂಡದಾನ, ತಿಲೋದಕಗಳನ್ನು ನಿರೀಕ್ಷೆ ಮಾಡಿರುತ್ತಾರೆ. ಯಾರು ಶ್ರದ್ಧೆಯಿಂದ ಈ ಅವಧಿಯಲ್ಲಿ ಪಿತೃ ಆರಾಧನೆ ಮಾಡುವರೋ ಅವರಿಗೆ ಸಂತೃಪ್ತರಾದ ಪಿತೃಗಳು ಆಯುಷ್ಯ, ಸಂತಾನ, ಐಶ್ವರ್ಯ (Prosperity), ಜ್ಞಾನ (Knowledge), ಭಕ್ತಿ (Devotion), ವೈರಾಗ್ಯಗಳು (Detachement) ಆಗಲೆಂದು ಆಶೀರ್ವಾದ ಮಾಡುತ್ತಾರೆ.
ಈ ಮಹಾಲಯ ಪಕ್ಷದಲ್ಲಿ ಪ್ರತಿನಿತ್ಯವೂ ಪಿತೃ ದೇವತೆಗಳ ತೃಪ್ತ್ಯರ್ಥ ಶ್ರಾದ್ಧವನ್ನು ಮಾಡಬೇಕು. ಅದಕ್ಕೆ ಶಕ್ಯವಿಲ್ಲದಿದ್ದಲ್ಲಿ ಒಂದು ದಿನವಾದರೂ ಶ್ರಾದ್ಧವನ್ನು ಪಿಂಡ ಪ್ರದಾನ ಪೂರ್ವಕ ಮಾಡಲೇಬೇಕು. ಪ್ರತಿನಿತ್ಯ ಶ್ರಾದ್ಧದ ಪ್ರತಿನಿಧಿಯಾಗಿ ತಿಲ ತರ್ಪಣವನ್ನು ಕೊಡಲೇಬೇಕು. ಯಾರು ಈ ಕಾಲದಲ್ಲಿ ಪಿತೃಗಳಿಗೆ ಪಿತೃ ತರ್ಪಣ, ಪಿಂಡ ದಾನಗಳನ್ನು ಸಮರ್ಪಿಸುವುದಿಲ್ಲವೋ ಅವರಿಗೆ ಪಿತೃಗಳು ನಿರಾಶರಾಗಿ ಶಾಪವನ್ನು ಕೊಟ್ಟು ಹೋಗುವರು. ಪಿತೃ ಕೋಪವು ನಮ್ಮ ಭವಿಷ್ಯದ ಭಾಗ್ಯವನ್ನೂ, ವಂಶಾಭಿವೃದ್ಧಿಯನ್ನೂ ತಡೆಗಟ್ಟುವುದು. ಪಿತೃ ಪ್ರಸಾದವಿದ್ದರೇ ಮಕ್ಕಳು, ಮೊಮ್ಮಕ್ಕಳು ಎಲ್ಲರೂ ಪಿತೃಗಳ ಶುಭ ಹರಿಕೆಯಿಂದ ಆರೋಗ್ಯ, ಆಯುಷ್ಯಗಳನ್ನು ಪಡೆದು ಜೀವನದಲ್ಲಿ ಪ್ರಗತಿಯನ್ನು ಹೊಂದುವರು!
ಪಿತೃಪಕ್ಷ ಯಾವಾಗ?
ಪಕ್ಷ ಶ್ರಾದ್ಧ :
ಪಾಢ್ಯ, ಷಷ್ಥೀ, ಶುಕ್ರವಾರ, ಜನ್ಮ ನಕ್ಷತ್ರದಂದು (Birth Star), ಜನ್ಮ ನಕ್ಷತ್ರದಿಂದ 10, 11ನೇ ದಿನಗಳು, ರೋಹಿಣೀ - ಮಖಾ - ರೇವತಿ ನಕ್ಷತ್ರಗಳಂದು ಪಕ್ಷ ಶ್ರಾದ್ಧ ಮಾಡಬಾರದು.
ಈ ದಿನಗಳಲ್ಲಿ ತಂದೆ ಅಥವಾ ತಾಯಿಯ ಮೃತ ತಿಥಿಯೇ ಇದ್ದರೆ ಈ ನಿಯಮ ಗಣನೆಗೆ ಬರೋದಿಲ್ಲ. ಮೃತ ತಿಥಿಯಂದು ಪಕ್ಷ ಶ್ರಾದ್ಧ ಮಾಡುವುದು ಬಹಳ ಶ್ರೇಷ್ಠ!
ಮಹಾಲಯ ಪಕ್ಷದ ಮಧ್ಯದಲ್ಲಿ ಕಾಲ ಶ್ರಾದ್ಧ ಬಂದರೆ ಕಾಲ ಶ್ರಾದ್ಧ ಆದ ಮೇಲೆ ಪಕ್ಷ ಶ್ರಾದ್ಧ ಮಾಡಬೇಕು. ಹುಣ್ಣಿಮೆ, ಸಪ್ತಮೀ, ದ್ವಾದಶೀ, ಅಮಾವಾಸ್ಯೆ, ಭರಣೀ ನಕ್ಷತ್ರದಂದು, ಅಷ್ಟಮೀ ದಿನದಂದು ಪಕ್ಷ ಶ್ರಾದ್ಧ ಮಾಡಬಹುದು.
ಪಕ್ಷದ 15 ದಿನಗಳಲ್ಲಿ ಅನಾನುಕೂಲವಾದರೆ ತುಲಾ ಮಾಸದ ಕೃಷ್ಣ ಪಕ್ಷದಲ್ಲಿ ಮಹಾಲಯ ಶ್ರಾದ್ಧ ಮಾಡಬಹುದು.
'ಮಹಾಲಯ ಪಕ್ಷ ಶ್ರಾದ್ಧದಲ್ಲಿ ದರ್ಭೆ ಬಳಕೆಯ ವಿಚಾರ'
ಪಿಂಡ ಪ್ರದಾನದ ಮುಂಚೆ ಅದರ ಬುಡದಲ್ಲಿ ಹಾಸಲು ತುದಿಯಿರುವ 101 ಅಥವಾ 64 ದರ್ಭೆಗಳು.
ವಿಶ್ವೇ ದೇವತೆಗಳು ಮತ್ತು ಪಿತೃಗಳಿಗಾಗಿ ಇರುವ ಕಲಶದಲ್ಲಿ ಇಡಬೇಕಾದ ಕೂರ್ಚ 9 ದರ್ಭೆಗಳು.
ಪವಿತ್ರಕ್ಕೆ 3 ದರ್ಭೆ.
ಪಿಂಡದಲ್ಲಿ ಏನೇನು ಇರಬೇಕು?
ತಿಲಮನ್ನಂ ಚ ಪಾನೀಯಂ ಪಯೋದಧಿ ಗುಡಂ ತಥಾ ।
ಮಧುಸರ್ಪಿಸ್ಸಮಾಯುಕ್ತಂ ಅಷ್ಟಾಂಗಂ ಪಿಂಡ ಲಕ್ಷಣಮ್ ।।
ಎಳ್ಳು - ಅನ್ನ - ಕಲಶದ ನೀರು - ಹಾಲು - ಮೊಸರು - ಬೆಲ್ಲ - ಜೇನುತುಪ್ಪ - ತುಪ್ಪ ಈ ಎಂಟು ದ್ರವ್ಯಗಳನ್ನು ಸೇರಿಸಿ ಪಿಂಡ ಮಾಡಬೇಕು.
'ಪತ್ರಿಯೊಂದು ದಾನ (Donation) ಕೊಡುವಾಗಲೂ, ಶ್ರಾದ್ಧದಲ್ಲಿ ಯವೋದಕ, ತಿಲೋದಕಗಳನ್ನು ಬಿಡುವಾಗಲೂ, ದತ್ತ ಮಾಡುವಾಗಲೂ, ತಾಂಬೂಲ ದಕ್ಷಿಣೆ ಕೊಡುವಾಗಲೂ ತುಳಸೀ ದಳ'ವನ್ನು ಸೇರಿಸಿಕೊಂಡೇ ಕೊಡಬೇಕು.
ತುಳಸೀ ಗಂಧ ಮಾತ್ರೇಣ ಪಿತರಃ ತುಷ್ಟಿಮಾಪ್ನುಯುಃ ।
ಪ್ರಯಾಂತಿ ಮುಕ್ತಿ ಮಾರ್ಗೇಣ ತತ್ಪದಂ ಚಕ್ರಪಾಣಿನಃ ।।
ಶ್ರೀಹರಿಗೆ ಅರ್ಪಿಸಿರುವ ತುಳಸಿಯ ವಾಸನೆಯಿಂದ ಮಾತ್ರವೇ ಪಿತೃಗಳು ಸಂತೋಷವನ್ನು ಹೊಂದುತ್ತಾರೆ. ಚಕ್ರಪಾಣಿಯಾದ ಮಹಾ ವಿಷ್ಣುವಿನ ಲೋಕವನ್ನೂ; ಮುಕ್ತಿ ಮಾರ್ಗವನ್ನು ಹೋಗಿ ಸೇರುತ್ತಾರೆ.
ತುಳಸೀ ಶ್ರಾದ್ಧ ಕಾಲೇ ತು ದತ್ವಾ ಶಿರಸೀಧಾರಿತೇ ।
ದಾತಾ ಭೋಕ್ತಾ ಪಿತಾ ತಸ್ಯ ವಿಷ್ಣು ಲೋಕೇ ಮಹೀಯತೆ ।।
ಶ್ರಾದ್ಧ ಕಾಲದಲ್ಲಿ ಕರ್ತೃವು ತುಳಸಿಯನ್ನು ಕೊಟ್ಟು, ಅದನ್ನು ಭೋಕ್ತೃವು ತಲೆಯಲ್ಲಿ ಧರಿಸುವುದರಿಂದ ಕರ್ತೃ, ಕರ್ತೃವಿನ ತಂದೆ ಅಥವಾ ತಾಯಿ ಮತ್ತು ಭೋಜನ ಮಾಡಿದವರು ಮೂವರೂ ಮುಂದೆ ವಿಷ್ಣುಲೋಕದಲ್ಲಿ ಪ್ರಕಾಶಿತರಾಗುತ್ತಾರೆ.
ಪಿತೃ ಪಿಂಡಾರ್ಚನಂ ಶ್ರಾದ್ಧೇ ಯೈಃ ಕೃತಂ ತುಳಸೀ ದಳೈಃ ।
ತರ್ಪಿತಾ ಪಿತರಸ್ತೈಶ್ಚ ಯಾವಚ್ಚಾಂದ್ರಾರ್ಕ ಮೇದಿನೀ ।।
ಶ್ರಾದ್ಧದಲ್ಲಿ ಯಾರಿಂದ ಪಿತೃ ಪಿಂಡಗಳ ಅರ್ಚನವು ತುಳಸೀದಳಗಳಿಂದ ಮಾಡಲ್ಪಡುತ್ತದೆಯೋ; ಅದರಿಂದ ಎಲ್ಲಿಯ ವರೆಗೂ ಚಂದ್ರ ಸೂರ್ಯ ಭೂಮಿಗಳಿರುತ್ತವೆಯೋ ಅಲ್ಲಿಯವರೆಗೂ ಪಿತೃಗಳು ಸಂತುಷ್ಟರಾಗಿರುವಂತೆ ಮಾಡಲ್ಪಡುತ್ತದೆ.
ಶ್ರಾದ್ಧದಲ್ಲಿ ವಸ್ತ್ರದ ವೈಶಿಷ್ಟ್ಯ
ಆಚ್ಚಾದನಂ ತು ಯೋ ದದ್ಯಾತ್ ಅಹತಂ ಶ್ರಾದ್ಧ ಕರ್ಮಣೀ ।
ಆಯುಃ ಶ್ರೀಃ ಕಾಮಂ ಐಶ್ವರ್ಯಂ ರೂಪಂ ಚ ಲಭತೇ ಧ್ರುವಮ್ ।।
ಶ್ರಾದ್ಧ ಕರ್ಮದಲ್ಲಿ ಬ್ರಾಹ್ಮಣರಿಗೆ ಯಾವನು ಉತ್ತಮವಾದ ಹೊಸ ವಸ್ತ್ರವನ್ನು (New Cloth) ಕೊಡುತ್ತಾನೆಯೋ, ಅವನು ನಿಶ್ಚಯವಾಗಿಯೂ ದೀರ್ಘಕಾಲದ ಆಯುಷ್ಯವನ್ನೂ (Long Life), ಸಂಪತ್ತನ್ನೂ, ತನ್ನ ಇಷ್ಟವಾದ ಧನ ಕನಕಾದಿ ಸಕಲೈಶ್ವರ್ಯಗಳನ್ನೂ; ತೇಜಸ್ಸಿನಿಂದ ಕೂಡಿದ ಒಳ್ಳೆಯ ರೂಪವನ್ನೂ ಹೊಂದುತ್ತಾನೆ!
ಶ್ರಾದ್ಧದಲ್ಲಿ ಯಜ್ಞೋಪವೀತದ ಮಹತ್ವ
ಯಜ್ಞೋಪವೀತ೦ ವೈ ದದ್ಯಾತ್ ಶ್ರಾದ್ಧ ಕಾಲೇಷು ಧರ್ಮವಿತ್ ।
ಪಾವನಂ ಸರ್ವ ವಿಪ್ರಾಣಾಂ ಬ್ರಹ್ಮ ದಾನಸ್ಯ ತತ್ಫಲಮ್ ।।
ಧರ್ಮವನ್ನರಿತವನು ಎಲ್ಲಾ ವಿಪ್ರರನ್ನೂ ಶುದ್ಧಿಗೊಳಿಸುವ ಯಜ್ಞೋಪವೀತವನ್ನು ಶ್ರಾದ್ಧ ಕಾಲದಲ್ಲಿ ಕೊಡಬೇಕು. ಅದರಿಂದ ಸರ್ವ ವ್ಯಾಪಿಯಾದ ಪರಬ್ರಹ್ಮನಾದ ಶ್ರೀ ಹರಿಯನ್ನೇ ಅಂದರೆ ವಿಶ್ವದಲ್ಲಿರುವ ಎಲ್ಲ ವಸ್ತುಗಳನ್ನೂ ದಾನ ಮಾಡಿದ ಶ್ರೇಷ್ಠ ಫಲ ಉಂಟಾಗುತ್ತದೆ. ಈ ಮೇಲಿನ ಎಲ್ಲಾ ವಿಷಯಗಳೂ ಗರುಡ ಪುರಾಣ (Garuda Purana), ಪದ್ಮ ಪುರಾಣ, ಮಹಾ ಭಾರತ - ರಾಮಾಯಣ, ನಾರದೀಯ ಪುರಾಣದಲ್ಲಿ ಉಲ್ಲೇಖಿತವಾಗಿವೆ.
ಶ್ರಾದ್ಧದಲ್ಲಿ ಅರ್ಘ್ಯ, ಪಿಂಡ, ತರ್ಪಣ ಕ್ರಮ
ಆದೌ ಪಿತಾ, ತಥಾ ಮಾತಾ, ಸಪತ್ನ್ಯಾ ಜನನೀ ತಥಾ ।
ಮತಾಮಹಾಸ್ಸಪತ್ನಿಕಾಃ ಆತ್ಮಪತ್ನ್ಯಸ್ತ್ವನಂತರಮ್ ।।
ಸುತಭ್ರಾತೃಪಿತೃವ್ಯಾಶ್ಚ ಮಾತುಲಾಸ್ಸಭಾರ್ಯಕಾಃ ।
ದುಹಿತಾ ಭಗಿನೀ ಚೈವ ದೌಹಿತ್ರೋ ಭಾಗಿನೇಯಕಾಃ ।।
ಪಿತೃಷ್ವಸಾ ಮಾತೃಷ್ವಸಾ ಜಾಮಾತಾ ಭಾವುಕಾಸ್ಸ್ನುಷಾ ।
ಶ್ವಶುರಶ್ಶ್ಯಾಲಕಶ್ಚೈವ ಸ್ವಾಮಿನೋ ಗುರುರಿರ್ಥೆಸ್ಥಿನಃ ।
ಪಿತೃಣಾಂ ಪಶ್ಚಿಮೇ ಭಾಗೇ ಮಾತೃ ಪಿಂಡಂ ಯಥಾ ಕ್ರಮಮ್ ।
ಮಾತಾಮಹಾಶ್ಚ ತತ್ಪೂರ್ವಂ ಆತ್ಮಪತ್ನ್ಯಸ್ತದುತ್ತರಮ್ ।।
ಸುತ ಭ್ರಾತೃವ್ಯಾಶ್ಚ ಮಾತಾ ಪಿತ್ರೋಶ್ಚ ಮಧ್ಯಮೇ ।
ಮಾತಾಮಹ ಮಾತಾಮಹೀ ಮಧ್ಯೇ ಮಾತುಲಾಸ್ಸಹಭಾರ್ಯಕಾಃ ।।
ಪಿಂಡ ವಿಸರ್ಜನೆ ಮಾಡುವ ಸ್ಥಳ
ಶ್ರಾದ್ಧದ ವಿಸರ್ಜಿತ ಪಿಂಡವನ್ನು ನೆಲದಲ್ಲಿ ಹೂಳಬಹುದು. ನದೀ ತೀರದಲ್ಲಿ ಮಾಡಿದಾಗ ನದಿಯ ಹರಿಯುವ ಪ್ರವಾಹದಲ್ಲಿ ಬಿಡಬಹುದು. ಗೋವುಗಳಿಗೆ ಕೊಡಬಹುದು. ಚಟಕದ (ಪ್ರತ್ಯಕ್ಷ ಅಥವಾ ದರ್ಭೆ ಬ್ರಾಹ್ಮಣರಿಗೆ ಬಡಿಸಿದ) ಎಲೆಗೆ ಬಡಿಸಿದ ಅನ್ನವನ್ನು ನೆಲದಲ್ಲಿಯೇ ಹೂಳಬೇಕು. ಹಸುಗಳಿಗೆ ಕೊಡಬಾರದು. ನದಿಯಲ್ಲಿ ಹಾಕಬಾರದು. ಪಿಂಡದೊಂದಿಗೆ ಬೆರೆಸಬಾರದು. ಪಿಂಡದ ಜೊತೆಯಲ್ಲಿ ಭೂ ಸ್ಥಾಪನೆ ಮಾಡಬಾರದು. ಜಲಚರ ಪ್ರಾಣಿಗಳು ಪಿಂಡವನ್ನು ತಿಂದರೆ ಉತ್ತಮ. ನಾಯಿ ಮಾತ್ರ ಮುಟ್ಟಬಾರದು ಶ್ರಾದ್ಧ ಹಾಳಾಗುತ್ತದೆ.
(ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಶ್ರೀ ಕೃಷ್ಣಾಚಾರ್ಯ ಸ್ಮೃತಿ ಮುಕ್ತಾವಲೀ, ಧರ್ಮಸಿಂಧು, ನಿರ್ಣಯಸಿಂಧು, ಜೀವನ ಪ್ರಕ್ರಿಯಾ ಮೊದಲಾದ ಗ್ರಂಥಗಳನ್ನು ನೋಡುವುದು.)
ಸಂಕರೋ ನರಕಾಯೈವ ಕುಲಘ್ನಾನಾಂ ಕುಲಸ್ಯ ಚ ।
ಪತಂತಿ ಪಿತರೋ ಹ್ಯೇಷಾಂ ಲುಪ್ತಪಿಂಡೋದಕಕ್ರಿಯಾಃ
ಸಂಕರಃ ನರಕಾಯ ಏವ ಕುಲಘ್ನಾನಾಮ್ ಕುಲಸ್ಯ ಚ
ಪತಂತಿ ಪಿತರಃ ಹಿ ಏಷಾಮ್ ಲುಪ್ತ ಪಿಂಡ ಉದಕ ಕ್ರಿಯಾಃ -ಬಣ್ಣಗೇಡು ಕುಲಗೇಡಿಗಳನ್ನೂ, ಕುಲವನ್ನೂ ನರಕಕ್ಕೆ ತಳ್ಳುತ್ತದೆ. ಇಂಥವರ ಪೂರ್ವಜರು ಪಿಂಡ-ತರ್ಪಣಗಳಿಲ್ಲದೆ ನರಳುತ್ತಾರೆ.
ವಿಕ್ಷಿಪ್ತ ಮನಸ್ಸಿನ ಮಕ್ಕಳು ಹುಟ್ಟುವುದರಿಂದ, ಇಡೀ ಸಮಾಜ ನರಕಕ್ಕೆ ಹೋಗಬೇಕಾಗುತ್ತದೆ. ಹಾಗು ಅದಕ್ಕೆ ಕಾರಣರಾದ ನಾವೂ ಕೂಡಾ ನರಕಕ್ಕೆ ಹೋಗಬೇಕಾಗುತ್ತದೆ. ಸಮಾಜ ಈ ರೀತಿ ಸಂಕೀರ್ಣವಾದಾಗ, ಎಲ್ಲಾ ನಂಬಿಕೆಯನ್ನು (Belief) ಕಳೆದುಕೊಂಡಾಗ, ಪಿತೃಗಳು ಪಿಂಡ ಇಲ್ಲದೆ ನರಕದಲ್ಲಿ ಬೀಳುತ್ತಾರೆ ಎನ್ನುವುದು ಅರ್ಜುನನ ಯುದ್ಧೋತ್ತರ ಪರಿಣಾಮದ ಭೀಕರತೆಯ ಪರಿಕಲ್ಪನೆ.
ಇಲ್ಲಿ ಪಿಂಡ ಅಂದರೆ ಏನು? ಅದರ ಮಹತ್ವ ಏನು? ಅದು ಯಾರಿಗೆ ಹೋಗಿ ಹೇಗೆ ಸೇರುತ್ತದೆ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳೋಣ. ನಾವು ಹಾಕುವ ಸ್ಥೂಲವಾದ ಪಿಂಡ ಸತ್ತ ಜೀವಕ್ಕೆ ನೇರವಾಗಿ ಹೋಗಿ ಸೇರುವುದಿಲ್ಲ. ಸತ್ತ ನಂತರ ಸ್ಥೂಲ ಜೀವದಲ್ಲಿ ಇರುವ ಜೀವಕ್ಕೆ ಸ್ಥೂಲವಾದ ಪಿಂಡ ಬೇಕಿಲ್ಲ. ಜೀವ ತನ್ನ ಕರ್ಮಾನುಸಾರ ತಾನು ಹೋಗಬೇಕಾದಲ್ಲಿಗೆ ಹೋಗುತ್ತದೆ. ನಾವು ಪಿಂಡ ಹಾಕುವುದು ಪಿತೃದೇವತೆಗಳಿಗೆ. ಇದೊಂದು ದೇವತಾಗಣ. ಅದರಲ್ಲಿ ಒಟ್ಟು ನೂರು ದೇವತೆಗಳು. ಅವರಲ್ಲಿ ಮೂರು ಪ್ರಧಾನಪಿತೃಗಳು . ಜೀವಿತ ಕಾಲದಲ್ಲಿ ತತ್ವಾಭಿಮಾನಿ ದೇವತೆಗಳನ್ನು ಹೇಗೆ ಪೂಜಿಸುತ್ತೆವೋ ಹಾಗೆ ಸತ್ತ ನಂತರ, ಈ ಸ್ಥೂಲ ಶರೀರದಿಂದ ಈಚೆ ಬಂದ ಮೇಲೆ, ಜೀವವನ್ನು ರಕ್ಷಿಸುವ ದೇವತಾಗಣ-ಪಿತೃಗಣ. ಈ ಪಿತೃಗಳನ್ನು ನಿಯಂತ್ರಿಸುವವರು ವಸು-ರುದ್ರ-ಆದಿತ್ಯರು. ಈ ಪಿತೃ ದೇವತೆಗಳನ್ನು ನಮ್ಮ ಪೂರ್ವಜರು (Ancesters) ತೀರಿಕೊಂಡ ದಿನದಂದು ಆರಾಧಿಸುವುದು ಸಂಪ್ರದಾಯ. ಇಲ್ಲಿ ಪಿತೃಗಳಿಗೆ ಪಿಂಡ ಪ್ರಧಾನ ಮಾಡುವ ಕಾರಣ ಏನೆಂದರೆ, ಒಂದು ವೇಳೆ ಕಾರಣ ವಿಶೇಷದಿಂದ ನಮ್ಮ ಹಿರಿಯರಿಗೆ ಅವರ ದಾರಿಯಲ್ಲಿ ಬಾಧಕವಾಗಿದ್ದರೆ, ಅದನ್ನು ಪರಿಹರಿಸಿ ಎನ್ನುವ ಪ್ರಾರ್ಥನೆಯೇ ಪಿಂಡ ಪ್ರಧಾನ. 'ಪ್ರಾರಬ್ದ ಕರ್ಮದಿಂದ ಅವರನ್ನು ಕಾಪಾಡಿ' ಎನ್ನುವ ಪಿತೃ-ದೇವತೆಗಳ ಪೂಜೆ. ಇನ್ನು ಕಾಗೆ ಮುಟ್ಟುವುದು ಎಂದರೆ ಪಿತೃ ದೇವತೆಗಳು ನಮ್ಮ ಪೂಜೆಯನ್ನು ಸ್ವೀಕರಿಸಿದ ಶಕುನ ಸಂಕೇತ.
ಪಿತೃಪಕ್ಷದಲ್ಲಿ ಏನು ಮಾಡಬೇಕು? ಏನು ಮಾಡಬಾರದು?
ಭಾದ್ರಪದ ಕೃಷ್ಣಪಕ್ಷದ ಪ್ರತಿಪದೆಯಿಂದ ಅಮಾವಾಸ್ಯೆಯವರೆಗಿನ ಕಾಲ, ಪಿತೃಗಳಿಗೆ ಅತ್ಯಂತ ಪ್ರಿಯವಾದ ಕಾಲ. ಪರಮಾತ್ಮ ಪಿತೃಗಳಿಗಾಗಿ ಮೀಸಲಿಟ್ಟ ಕಾಲ. ಹೀಗಾಗಿ ಈ ಇಡಿಯ ಪಕ್ಷದಲ್ಲಿ ಪಿತೃಗಳನ್ನು ಭಕ್ತಿಯಿಂದ ಆರಾಧಿಸಬೇಕು.
ತಂದೆ ಇಲ್ಲದವರ ಕರ್ತವ್ಯಗಳು
ಹಿಂದಿನ ಲೇಖನದಲ್ಲಿ ತಿಳಿಸಿದಂತೆ ಇಡಿಯ ಹದಿನೈದು ದಿವಸಗಳು (ಏಕಾದಶಿಯನ್ನ ಹೊರತುಪಡಿಸಿ) ಸರ್ವಪಿತೃಗಳಿಗೆ ಶ್ರಾದ್ಧವನ್ನು ಮಾಡಬೇಕು. ಪೂರ್ಣ ಪಕ್ಷದಲ್ಲಿ ಮಾಡಲು ಸಾಧ್ಯವಿಲ್ಲದಾಗ ಒಂದು ದಿವಸವಾದರೂ ಮಾಡಬೇಕು. ತಂದೆಯವರು ಮೃತರಾದ ತಿಥಿಯಲ್ಲಿ ಮಾಡುವದು ಸರ್ವೋತ್ತಮಪಕ್ಷ. ತಂದೆಯವರು ಹುಣ್ಣಿಮೆಯಂದು ಮೃತರಾಗಿದ್ದರೆ ಅಮಾವಾಸ್ಯೆಯಂದು ಪಕ್ಷ ಮಾಡಬೇಕು. ತಂದೆಯ ಮೃತತಿಥಿ ಈ ಸಂದರ್ಭದಲ್ಲಿ ಪ್ರಧಾನ, ದೊಡ್ಡಪ್ಪ, ತಾತ, ತಾಯಿ ಮುಂತಾದ ಉಳಿದವರದ್ದಲ್ಲ.
ಅದು ಸಾಧ್ಯವಿಲ್ಲದಿದ್ದರೆ ಅಮಾವಾಸ್ಯೆಯಂದು ಮಾಡಬೇಕು. ಅದೂ ಸಾಧ್ಯವಿಲ್ಲದ ಪಕ್ಷದಲ್ಲಿ ಪ್ರತಿಪದಾ, ಷಷ್ಠೀ, ಏಕಾದಶೀ, ಚತುರ್ದಶೀ, ಶುಕ್ರವಾರ, ಮತ್ತು ರೋಹಿಣೀ, ಮಘಾ, ರೇವತೀ ನಕ್ಷತ್ರ ದಿವಸಗಳ ಬಿಟ್ಟು ಉಳಿದ ದಿವಸಗಳಲ್ಲಿ ಪಕ್ಷ ಮಾಡಬೇಕು. ಈ ನಿಯಮ ತಂದೆಯ ಮೃತತಿಥಿಯಂದು ಪಕ್ಷ ಮಾಡುವವರಿಗೆ ಅನ್ವಯಿಸುವದಿಲ್ಲ.
ಈ ಪಕ್ಷದ ಹದಿನೈದೂ ದಿವಸಗಳೂ (ಏಕಾದಶಿಯನ್ನು ಹೊರತು ಪಡಿಸಿ) ಸಮಸ್ತ ಪಿತೃಗಳಿಗೂ ತಿಲತರ್ಪಣವನ್ನು ನೀಡಬೇಕು. ಪಿತೃಸ್ತೋತ್ರಗಳನ್ನು ಪಠಿಸಬೇಕು. ರಾತ್ರಿಯ ಹೊತ್ತು ಭೋಜನ (Dinner) ಮಾಡಬಾರದು. ಲಘು ಉಪಾಹಾರ ಸೇವಿಸಬೇಕು. ಹದಿನೈದು ದಿವಸಗಳಲ್ಲಿಯೂ ಕ್ಷೌರವನ್ನು ಮಾಡಿಸಿಕೊಳ್ಳಬಾರದು, ಬ್ರಹ್ಮಚರ್ಯ ಪಾಲಿಸಬೇಕು.
ಸ್ತ್ರೀಯರ ಕರ್ತವ್ಯ
ಹದಿನೈದು ದಿವಸಗಳೂ ಮನೆಯ ಹೊಸ್ತಿಲಿನಲ್ಲಿ ಮತ್ತು ಅಂಗಳದಲ್ಲಿ ರಂಗೋಲಿ ಹಾಕಬಾರದು. ದೇವರ ಮಂಟಪದ ಮುಂದೆ ಮಾತ್ರ ಹಾಕತಕ್ಕದ್ದು. ಮನೆಗೆ ತಳಿರು ತೋರಣಗಳನ್ನು ಕಟ್ಟಬಾರದು. ಮನೆಯಲ್ಲಿ ಗಂಡ ಪಕ್ಷವನ್ನು ಮಾಡುವ ದಿವಸ ತಲೆಗೆ ಸ್ನಾನ ಮಾಡಿ ಅಡಿಗೆ ಮಾಡಬೇಕು. ಹೆಂಗಸರು ರಾತ್ರಿಯ ಹೊತ್ತು ಊಟ ಮಾಡಬೇಕು. ಪಿತೃಸ್ತೋತ್ರ , ಶ್ರೀಗೀತಾ , ವಿಷ್ಣುಸಹಸ್ರನಾಮಗಳನ್ನು ಪಠಿಸಬೇಕು. ಬ್ರಹ್ಮಚರ್ಯ ಪಾಲಿಸಬೇಕು.
ತಂದೆ ಇದ್ದು ತಾಯಿ ಇಲ್ಲದವರ ಕರ್ತವ್ಯ
ಅವಿಧವಾನವಮಿಯ ದಿವಸ ತಾಯಿಗೆ ಶ್ರಾದ್ಧವನ್ನು ಮಾಡಬೇಕು.
ತಂದೆ ಬದುಕಿದ್ದಾಗ ಸರ್ವಥಾ ತರ್ಪಣವನ್ನು ನೀಡುವ ಅಧಿಕಾರವಿಲ್ಲ. ಮಗ ತಾಯಿಗೆ ಶ್ರಾದ್ಧ ಮಾಡಬೇಕು, ತಂದೆ ತರ್ಪಣವನ್ನು ನೀಡಬೇಕು. ಅವಿಧವಾ ನವಮಿಯ ಹಿಂದಿನ ದಿವಸ, ಅವಿಧವಾನವಮಿಯ ದಿವಸ ರಾತ್ರಿ ಊಟವನ್ನು ಮಾಡಬಾರದು. ಉಳಿದ ದಿವಸಗಳಲ್ಲಿ ರಾತ್ರಿಯ ಹೊತ್ತು ಊಟವನ್ನು ಮಾಡಬಹುದು. ಹದಿನೈದು ದಿವಸ ಕ್ಷೌರವನ್ನು ಮಾಡಿಸಿಕೊಳ್ಳಬಾರದು
ತಂದೆ ತಾಯಿ ಇಬ್ಬರೂ ಇದ್ದರೆ
ತಂದೆ ಮಾಡುವ ಪಕ್ಷದಲ್ಲಿ ನಮಸ್ಕಾರಗಳನ್ನು ಸಲ್ಲಿಸುವದಷ್ಟೇ ಪಿತೃಗಳಿಗೆ ಸಲ್ಲಿಸುವ ಗೌರವ. ಇಡಿಯ ಹದಿನೈದು ದಿವಸ ಕ್ಷೌರವನ್ನು ಮಾಡಿಸಿಕೊಳ್ಳಬಾರದು.
ಮಹಾಲಯದಲ್ಲಿಯೇ ಸಾಂವತ್ಸರಿಕ ಶ್ರಾದ್ಧ ಬಂದರೆ ಹೇಗೆ ಆಚರಣೆ?
ಉದಾಹರಣೆಗೆ ಭಾದ್ರಪದ ಕೃಷ್ಣ ಸಪ್ತಮಿಯಂದು ತಂದೆ, ತಾಯಿ, ಹೆಂಡತಿ, ಅಣ್ಣ, ತಮ್ಮ, ಮಗ, ಮಾವನ ಸಾಂವತ್ಸರಿಕ ಶ್ರಾದ್ಧವಿದ್ದರೆ ಆ ದಿವಸ ಕೇವಲ ಸಾಂವತ್ಸರಿಕ ಶ್ರಾದ್ಧವನ್ನು (ಮೂರು ಪಿಂಡಗಳನ್ನಿಟ್ಟು ಮಾಡಬೇಕು) ಪಕ್ಷದ ಶ್ರಾದ್ಧಕ್ಕೆ ಅನ್ವಯಿಸುವ ಯಾವ ನಿಯಮವೂ ಆ ಶ್ರಾದ್ಧಕ್ಕೆ ಅನ್ವಯಿಸುವದಿಲ್ಲ. ಕಾಲಶ್ರಾದ್ಧದ ನಿಯಮಗಳಂತೆಯೇ ಮಾಡಬೇಕು.
ಆ ನಂತರ, ಮೇಲೆ ಹೇಳಿದ ನಿಷಿದ್ಧ ದಿವಸಗಳನ್ನು ಬಿಟ್ಟು ಒಂದು ದಿವಸ ಪಕ್ಷದ ಆಚರಣೆಯನ್ನು ಮಾಡಬೇಕು. ಆ ದಿವಸ ಸರ್ವಪಿತೃಗಳಿಗೂ ಶ್ರಾದ್ಧ.
ಮಹಾಲಯದಲ್ಲಿ ಯಾವಾಗ ಶ್ರಾದ್ಧ ಮಾಡಬಾರದು? ಯಾವಾಗ ಮಾಡಬೇಕು?
ಭಾದ್ರಪದ ಕೃಷ್ಣಪಕ್ಷದ ಪ್ರತಿಪದೆಯಿಂದ, ಭಾದ್ರಪದ ಅಮಾವಾಸ್ಯೆಯವರೆಗಿನ ಕಾಲವನ್ನು ಪಿತೃಪಕ್ಷ ಎನ್ನುತ್ತಾರೆ. ಈ ಸಂದರ್ಭದಲ್ಲಿ ನಾವು ಸಮಸ್ತ ಪಿತೃಗಳಿಗೂ ಶ್ರಾದ್ಧವನ್ನು ಮಾಡಬೇಕು. ಏಕಾದಶೀದಿವಸ ಹೊರತು ಪಡಿಸಿ ಉಳಿದ ಹದಿನಾಲ್ಕು ದಿವಸಗಳೂ ಶ್ರಾದ್ಧ ಮಾಡಬೇಕು.
ಈ ಮಾತನ್ನು ಕಾತ್ಯಾಯನರು ಹೇಳಿದ್ದಾರೆ —
ನಭಸ್ಯಾಸ್ಯಾಪರೇ ಪಕ್ಷೇ ಶ್ರಾದ್ಧಂ ಕುರ್ಯಾದ್ ದಿನೇದಿನೇ
ಬ್ರಹ್ಮಪುರಾಣದಲ್ಲಿಯೂ ಈ ಮಾತಿದೆ —
ಆಶ್ವಯುಕ್ಕೃಷ್ಣಪಕ್ಷೇ ತು ಶ್ರಾದ್ಧಂ ಕುರ್ಯಾದ್ ದಿನೇದಿನೇ
ಏಕಾದಶೀವ್ರತ ಸಕಲನಿಯಮಗಳಿಗಿಂತಲೂ ಮಹತ್ತ್ವದ್ದಾದ್ದರಿಂದ ವೈಷ್ಣವರು ಏಕಾದಶೀ ದಿವಸ ಶ್ರಾದ್ಧವನ್ನು ಮಾಡುವಂತಿಲ್ಲ. ಘಾತಚತುರ್ದಶಿಯಂದು ದುರ್ಮರಣ ಹೊಂದಿದವರಿಗೆ ಮಾತ್ರ ಶ್ರಾದ್ದ. ಈ ಎರಡು ದಿವಸ ಬಿಟ್ಟು ಎಲ್ಲ ದಿವಸಗಳಲ್ಲಿಯೂ ಶ್ರಾದ್ಧ ಮಾಡಬೇಕು, ಇಡಿಯ ಪಕ್ಷದಲ್ಲಿ ಶ್ರಾದ್ಧ ಮಾಡುವ ಶ್ರದ್ಧಾಳುಗಳು.
ರಾಹು ಕೇತು ದೋಷದಿಂದ ಮುಕ್ತರಾಗಲು Pitru Pakshaದಲ್ಲಿ ಈ ಕೆಲಸ ಮಾಡಿ..
ಆದರೆ, ಈಗ ಪ್ರತೀದಿವಸ ಮಾಡುವವರು ಬಹಳ ಕಡಿಮೆ. ಮಹಾಲಯದಲ್ಲಿ ಒಂದು ದಿವಸ ಮಾತ್ರ ಪಕ್ಷವನ್ನು ಮಾಡಿಬಿಡುತ್ತಾರೆ. ಅಂಥಹವರೂ ಸಹ ಪ್ರತೀದಿವಸ ತರ್ಪಣವನ್ನು ಮಾತ್ರ ನೀಡಲೇ ಬೇಕು, ಏಕಾದಶಿಯನ್ನು ಹೊರತುಪಡಿಸಿ.
ಒಂದೇ ಬಾರಿ ಶ್ರಾದ್ಧ ಮಾಡುವವರು ಯಾವ ದಿವಸಗಳಲ್ಲಿ ಶ್ರಾದ್ಧ ಮಾಡಬಾರದು ಎನ್ನುವದನ್ನು ವಸಿಷ್ಠರು ತಿಳಿಸಿದ್ದಾರೆ —
ನಂದಾಯಾಂ ಭಾರ್ಗವದಿನೇ ಚತುರ್ದಶ್ಯಾಂ ತ್ರಿಜನ್ಮಸು I
ಏಷು ಶ್ರಾದ್ಧಂ ನ ಕುರ್ವೀತ ಗೃಹೀ ಪುತ್ರಧನಕ್ಷಯಾತ್ II
೧. ಪ್ರತಿಪದಾ, ಷಷ್ಠೀ ಮತ್ತು ಏಕಾದಶಿಗಳಿಗೆ ನಂದಾತಿಥಿ ಎಂದು ಹೆಸರು. ಈ ತಿಥಿಗಳಂದು ಮಹಾಲಯಶ್ರಾದ್ಧ ಮಾಡಬಾರದು.
೨. ಶುಕ್ರವಾರದಂದು (Friday) ಮಹಾಲಯಶ್ರಾದ್ಧ ಮಾಡಬಾರದು.
೩. ಘಾತಚತುರ್ದಶಿಯಂದು ಮಹಾಲಯಶ್ರಾದ್ಧ ಮಾಡಬಾರದು. ಅಫಘಾತ - ಕೊಲೆ - ಆತ್ಮಹತ್ಯೆಗಳಿಂದ ಸತ್ತವರಿಗೆ ಮಾತ್ರ ಘಾತಚತುರ್ದಶಿಯಂದು ಶ್ರಾದ್ಧ.
೪. ರೋಹಿಣೀ, ರೇವತೀ ಮತ್ತು ಮಘಾ ಈ ನಕ್ಷತ್ರಗಳು ಇರುವ ದಿವಸ ಮಹಾಲಯಶ್ರಾದ್ಧವನ್ನು ಮಾಡಬಾರದು.
ಮೇಲೆ ಹೇಳಿದ ದಿವಸಗಳಲ್ಲಿ ಮಹಾಲಯಶ್ರಾದ್ಧ ಮಾಡಿದರೆ ಮಕ್ಕಳಿಗೆ ತೊಂದರೆಯುಂಟಾಗುತ್ತದೆ ಮತ್ತು ಸಂಪತ್ತು ನಾಶವಾಗುತ್ತದೆ ಎಂದು ವಸಿಷ್ಠರು ಮತ್ತು ವೃದ್ದಗರ್ಗರು ಇಬ್ಬರೂ ತಿಳಿಸಿದ್ದಾರೆ.
ಪ್ರಾಜಾಪತ್ಯೇ ಚ ಪೌಷ್ಣೇ ಚ ಪಿತ್ರ್ಯಕ್ರ್ಷೇ ಭಾರ್ಗವೇ ತಥಾ I
ಯಸ್ತು ಶ್ರಾದ್ಧಂ ಪ್ರಕುರ್ವೀತ ಸತ್ಯ ಪುತ್ರೋ ವಿನಶ್ಯತಿ II
ಹೀಗಾಗಿ ಒಂದೇ ಬಾರಿ ಶ್ರಾದ್ಧ ಮಾಡುವವರು ಈ ನಿಯಮವನ್ನು ಅವಶ್ಯವಾಗಿ ಅನುಸರಿಸಬೇಕು.
ಚತುರ್ದಶಿಯಂದು ಪಕ್ಷ ಮಾಡಬಾರದು. ದುರ್ಮರಣ ಹೊಂದಿದ ವ್ಯಕ್ತಿಗಳಿಗೆ ಮಾತ್ರ ಆ ದಿವಸ ಶ್ರಾದ್ಧ. ಇಡಿಯ ಮಹಾಲಯದಲ್ಲಿ ಪ್ರತೀದೀವಸವೂ ಶ್ರಾದ್ಧ ಮಾಡುವವರು ಮೇಲಿನ ದಿವಸಗಳಲ್ಲಿಯೂ — ಏಕಾದಶಿಯನ್ನು ಹೊರತು ಪಡಿಸಿ — ಶ್ರಾದ್ಧ ಮಾಡಬಹುದು. ಅವರಿಗೆ ಮೇಲಿನ ನಿಯಮಗಳು ಅನ್ವಯಿಸುವದಿಲ್ಲ ಎಂದು ಶ್ರೀ ವೇದವ್ಯಾಸದೇವರ ಶಿಷ್ಯರಾದ ಕಾರ್ಷ್ಣಾಜಿನಿಋಷಿಗಳು ಹೇಳಿದ್ದಾರೆ.
ಮಹಾಲಯ ಅಮಾವಾಸ್ಯೆಯ ಮಹತ್ವ, ಆಚರಣೆ ಹಿನ್ನಲೆಯೇನು.?
ನಭಸ್ಯಸ್ಯಾಪರೇ ಪಕ್ಷೇ ಶ್ರಾದ್ಧಂ ಕುರ್ಯಾದ್ ದಿನೇದಿನೇ I
ನೈವ ನಂದ್ಯಾದಿ ವರ್ಜ್ಯಂ ಸ್ಯಾನ್ನೇ ವ ವರ್ಜ್ಯಾ ಚತುರ್ದಶೀ II
ಹಾಗಾದರೆ ಯಾವ ದಿವಸದಲ್ಲಿ ಪಕ್ಷ ಮಾಡುವದು ಉತ್ತಮ ಪಕ್ಷ?
ಈ ಪ್ರಶ್ನೆಗೆ ಕಾತ್ಯಾಯನರು ಉತ್ತರವನ್ನು ನೀಡಿದ್ದಾರೆ —
ಯಾ ತಿಥಿರ್ಯಸ್ಯ ಮಾಸಸ್ಯ ಮೃತಾಹೇ ತು ಪ್ರವರ್ತತೇ I
ಸಾ ತಿಥಿಃ ಪಿತೃಪಕ್ಷೇ ತು ಪೂಜನೀಯಾ ಪ್ರಯತ್ನತಃ II
ಪಿತೃಪಕ್ಷದಲ್ಲಿ ಮೃತ ತಿಥಿ ಯಾವುದೋ ಆ ತಿಥಿಯಂದೇ ವರ್ಷ ಶ್ರಾದ್ಧವು....ಪ್ರಯತ್ನ ಮಾಡಿ , ಅವಶ್ಯವಾಗಿ ಮಾಡಿ ಅಂತಲೇ ಅರ್ಥ.
ವರ್ಷ ತಿಥಿ ಅಲ್ಲದೇ , ಪಿತೃ ಮಹಾಲಯವನ್ನು ಅಮಾವಾಸ್ಯೆಯಂದು ಕ್ರಮವಾಗಿ ಮಾಡತಕ್ಕದ್ದು.
ಸರ್ವ ಪಿತರಂತರ್ಯಾಮಿ ಪ್ರಾಣಸ್ಥ ಶ್ರೀಲಕ್ಷ್ಮೀಜನಾರ್ದನ ಪ್ರಿಯತಾಂ