ಲಾಕ್‍ಡೌನ್ ಸಡಿಲಿಕೆಯಾದ್ರೂ ಕೆಲವರಿಗೆ ಪಾರ್ಲರ್‍ಗೆ ಹೋಗೋಕೆ ಭಯ. ಕೊರೋನಾ ಹಾವಳಿ ಹೆಚ್ಚುತ್ತಿರುವ ಈ ದಿನಗಳಲ್ಲಿ ಆದಷ್ಟು ಮನೆಯೊಳಗೇ ಇರೋದು ಸೇಫ್. ಹೀಗಿರುವಾಗ ಸೌಂದರ್ಯಕ್ಕೆ ಮೆರುಗು ನೀಡಲು ಮನೆಯಲ್ಲೇ ಕೈಗೊಳ್ಳಬಹುದಾದ ಸರಳ ವಿಧಾನಗಳ ಕಡೆಗೆ ಹೆಚ್ಚಿನವರು ಆಸಕ್ತಿ ತೋರುತ್ತಿದ್ದಾರೆ.ಅದ್ರಲ್ಲೂ ಒಣಗಿದ, ಬಿರುಕು ಬಿಟ್ಟ ಪಾದಗಳು ಕಾಲಿನ ಅಂದವನ್ನೇ ಕೆಡಿಸಿ ಬಿಡುತ್ತವೆ. ಆದ್ರೆ ಪಾರ್ಲರ್‍ಗೆ ಹೋಗದೆ ಪೆಡಿಕ್ಯೂರ್ ಮಾಡೋದು ಹೇಗೆ ಎಂಬುದು ಹಲವರನ್ನು ಕಾಡುವ ಪ್ರಶ್ನೆ. ಅಲ್ಲದೆ, ಪೆಡಿಕ್ಯೂರ್ ಅಂದ್ರೆ ಗಂಟೆಗಟ್ಟಲೆ ಟಬ್‍ನಲ್ಲಿ ಕಾಲು ಮುಳುಗಿಸಿಟ್ಟುಕೊಂಡು ಕೂರಬೇಕು, ಆಫೀಸ್ ಮತ್ತು ಮನೆಗೆಲಸದ ನಡುವೆ ಅಷ್ಟು ಸಮಯ ಸಿಗೋದು ಕಷ್ಟವೇ. ಪಾರ್ಲರ್‍ನಲ್ಲಾದ್ರೆ ಈ ಅವಧಿಯಲ್ಲೇ ಐ ಬ್ರೋ ಶೇಪ್, ವ್ಯಾಕ್ಸಿಂಗ್, ಫೇಶಿಯಲ್ ಯಾವುದಾದ್ರೂ ಮಾಡಿಸಿಕೊಳ್ಳುವ ಕಾರಣ ಸಮಯ ಕಳೆದದ್ದೇ ತಿಳಿಯೋದಿಲ್ಲ. ಹೀಗಾಗಿ ಮನೆಯಲ್ಲಿ ಕಡಿಮೆ ಸಮಯದಲ್ಲಿ ಮಾಡಬಹುದಾದ ಪೆಡಿಕ್ಯೂರ್ ವಿಧಾನ ಯಾವುದು ಎಂಬುದು ಬಹುತೇಕರ ಪ್ರಶ್ನೆ.ಮನೆಯಲ್ಲೇ ಸಿಗುವ ಕೆಲವು ವಸ್ತುಗಳಿಂದ ಸರಳವಾಗಿ ಫೂಟ್ ಸ್ಕ್ರಬ್ ಸಿದ್ಧಪಡಿಸಿಕೊಂಡು ನೀವೇ ಪೆಡಿಕ್ಯೂರ್ ಮಾಡಿಕೊಳ್ಳಬಹುದು. ಜಾಸ್ತಿ ವಸ್ತುಗಳ ಅಗತ್ಯವಿಲ್ಲದೆ ಸಿಂಪಲಾಗಿ ಫೂಟ್ ಸ್ಕ್ರಬ್ ಸಿದ್ಧಪಡಿಸೋದು ಹೇಗೆ ಎಂದು ನೋಡೋಣ.

ಬಾಚಣಿಗೆ ಸ್ವಚ್ಛಗೊಳಿಸೋದೆ ದೊಡ್ಡ ತಲೆನೋವಾ? ಇಲ್ಲಿದೆ ಸುಲಭ ವಿಧಾನ

ತೆಂಗಿನೆಣ್ಣೆ ಹಾಗೂ ಉಪ್ಪಿನ ಜಾದು
ಈ ಎರಡೂ ವಸ್ತುಗಳು ಎಲ್ಲರ ಮನೆ ಅಡುಗೆಮನೆಯಲ್ಲೂ ಸಿಗುತ್ತವೆ. ಅದ್ರಲ್ಲೂ ತೆಂಗಿನೆಣ್ಣೆ ತ್ವಚೆಯ ಒರಟುತನ ದೂರ ಮಾಡಿ ನೈಸರ್ಗಿಕವಾಗಿ ಕಾಂತಿ ಹೆಚ್ಚಿಸುವ ಗುಣ ಹೊಂದಿದೆ. ಇನ್ನು ಉಪ್ಪು ಪಾದದ ಸತ್ತ ಜೀವಕೋಶಗಳನ್ನು ತೆಗೆದು ಅಂದ ಹೆಚ್ಚಿಸುವ ಮೂಲಕ ನೀವು ಈಗ ತಾನೇ ಪಾರ್ಲರ್‍ಗೆ ಹೋಗಿ ಬಂದಿರುವಂತಹ ಅನುಭವ ನೀಡುತ್ತದೆ. ಒಟ್ಟಾರೆ ಈ ಎರಡೂ ವಸ್ತುಗಳು ಜೊತೆಯಾದ್ರೆ ನಿಮ್ಮ ಒರಟು ಪಾದ ಸುಕೋಮಲವಾಗೋದ್ರಲ್ಲಿ ಡೌಟೇ ಇಲ್ಲ. ಈ ಸ್ಕ್ರಬ್ ಸಿದ್ಧಪಡಿಸಲು ನಿಮಗೆ 1 ಟೀ ಸ್ಪೂನ್ ಕಲ್ಲುಪ್ಪು, 4 ಟೇಬಲ್ ಸ್ಪೂನ್ ತೆಂಗಿನೆಣ್ಣೆ ಹಾಗೂ ಕೆಲವು ಹನಿಗಳಷ್ಟು ಎಸೆನ್ಸಿಯಲ್ ಆಯಿಲ್ ಅಗತ್ಯವಿದೆ. ಮೊದಲು ತೆಂಗಿನೆಣ್ಣೆಯನ್ನು ಸ್ವಲ್ಪ ಬಿಸಿ ಮಾಡಬೇಕು. ನೆನಪಿಡಿ, ತುಂಬಾ ಬಿಸಿಯಾಗಬಾರದು. ಇದಕ್ಕೆ ಉಪ್ಪು ಹಾಗೂ ಎಸೆನ್ಸಿಯಲ್ ಆಯಿಲ್ ಹಾಕಿ. ಈ ಮಿಶ್ರಣ ಬೆಚ್ಚಗಿರುವಾಗಲೇ ಪಾದಗಳಿಗೆ ಹಚ್ಚಿ ಕನಿಷ್ಠ 20 ನಿಮಿಷ ಮಸಾಜ್ ಮಾಡಿ. ಇದ್ರಿಂದ ಪಾದಗಳ ನೋವು ಕೂಡ ಕಡಿಮೆಯಾಗುತ್ತದೆ. ದಿನ ಬಿಟ್ಟು ದಿನ ಈ ಸ್ಕ್ರಬ್ ಬಳಸೋದ್ರಿಂದ ಉತ್ತಮ ಫಲಿತಾಂಶ ಸಿಗುತ್ತದೆ. 

ಲಿಂಬೆಹಣ್ಣು ಮತ್ತು ಸಕ್ಕರೆ ಫೂಟ್ ಸ್ಕ್ರಬ್ 
ಲಿಂಬೆಹಣ್ಣು ನೈಸರ್ಗಿಕ ಬ್ಲೀಚಿಂಗ್ ಏಜೆಂಟ್ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇನ್ನು ಸಕ್ಕರೆ ಚರ್ಮದಲ್ಲಿರುವ ನಿರ್ಜೀವ ಜೀವಕೋಶಗಳನ್ನು ತೆಗೆಯಲು ನೆರವು ನೀಡುತ್ತದೆ. ತೆಂಗಿನೆಣ್ಣೆ ಮಾಯಿಶ್ಚರೈಸ್ ರೀತಿಯಲ್ಲಿ ಕಾರ್ಯನಿರ್ವಹಿಸುವ ಮೂಲಕ ಪಾದವನ್ನು ನುಣುಪಾಗಿಸುತ್ತದೆ. ಕಾಲು ಕಪ್ ತೆಂಗಿನೆಣ್ಣೆ, 2 ಕಪ್ ಸಕ್ಕರೆ, 9-10 ಹನಿ ಲಿಂಬೆ ರಸವನ್ನು ಒಂದು ಬೌಲ್‍ಗೆ ಹಾಕಿ ಕಲಸಿ ಪಾದಗಳಿಗೆ ಹಚ್ಚಿ 10-15 ನಿಮಿಷಗಳ ಕಾಲ ಮಸಾಜ್ ಮಾಡಬೇಕು.

ವಯಸ್ಸನ್ನು ನಿಲ್ಲಿಸೋ ಮನೆಮದ್ದು, ಸಿಂಪಲ್ ಇದೆ ಟ್ರೈ ಮಾಡಿ

ಜೇನುತುಪ್ಪ ಹಾಗೂ ಸಕ್ಕರೆ ಫೂಟ್ ಸ್ಕ್ರಬ್
ಜೇನುತುಪ್ಪ ತ್ವಚೆಗೆ ಮೃದುತ್ವ ನೀಡುತ್ತದೆ. ಪಾದದ ಗಡಸು ಚರ್ಮಕ್ಕೆ ಮೃದುತ್ವ ನೀಡಲು ಜೇನುತುಪ್ಪ ಅತ್ಯುತ್ತಮ ಆಯ್ಕೆ. ಒಂದು ಬೌಲ್‍ಗೆ ಜೇನುತುಪ್ಪ, ಸಕ್ಕರೆ, ಬಾತ್ ಸಾಲ್ಟ್, ತೆಂಗಿನೆಣ್ಣೆ ಹಾಗೂ ಲಿಂಬೆರಸ ಸೇರಿಸಿ ಚೆನ್ನಾಗಿ ಕಲಸಬೇಕು. ಇದನ್ನು ಪಾದಕ್ಕೆ ಹಚ್ಚಿ 15 ನಿಮಿಷಗಳ ಕಾಲ ಮಸಾಜ್ ಮಾಡಬೇಕು. ಕೆಲವು ನಿಮಿಷಗಳ ಬಳಿಕ ನೀರಿನಿಂದ ಪಾದಗಳನ್ನು ತೊಳೆಯಬೇಕು.

ಕಾಫಿ ಸ್ಕ್ರಬ್   
ಕಾಫಿ ಪುಡಿ. ಸಕ್ಕರೆ ಹಾಗೂ ತೆಂಗಿನೆಣ್ಣೆ ಸೇರಿಸಿ ಸಿದ್ಧಪಡಿಸಿದ ಸ್ಕ್ರಬ್ ಅನ್ನು ಪಾದಗಳಿಗೆ ಹಚ್ಚಿ 15-20 ನಿಮಿಷ ಮಸಾಜ್ ಮಾಡಿ ಆ ಬಳಿಕ ತೊಳೆಯಬೇಕು. ಕಾಫಿ ಪುಡಿ ಪಾದಗಳಲ್ಲಿನ ನಿರ್ಜೀವ ಜೀವಕೋಶಗಳನ್ನು ತೆಗೆಯಲು ನೆರವು ನೀಡುತ್ತದೆ. ಇದು ಪಾದಗಳಿಗೆ ಮೃದುತ್ವ ನೀಡುತ್ತದೆ.

ಹೇರ್ ಕಂಡೀಷನರ್‍ನಿಂದ ಎಷ್ಟೆಲ್ಲ ಪ್ರಯೋಜನಗಳಿವೆ ಗೊತ್ತಾ?

ಸಕ್ಕರೆ ಮತ್ತು ಹಾಲಿನ ಫೂಟ್ ಸ್ಕ್ರಬ್
ಹಾಲು ಮತ್ತು ನೀರನ್ನು ಪೆಡಿಕ್ಯೂರ್ ಬೇಸಿನ್‍ಗೆ ಹಾಕಿ 15 ನಿಮಿಷಗಳ ಕಾಲ ಪಾದಗಳನ್ನು ಅದರಲ್ಲಿ ನೆನೆಸಿಡಿ. ಸಕ್ಕರೆ ಹಾಗೂ ತೆಂಗಿನೆಣ್ಣೆಯನ್ನು ಮಿಕ್ಸ್ ಮಾಡಿ ಪಾದಗಳಿಗೆ ಹಚ್ಚಿ ಸ್ಕ್ರಬ್ ಮಾಡಿ ತೊಳೆಯಿರಿ. ಬಳಿಕ ತೆಂಗಿನೆಣ್ಣೆ ಹಚ್ಚಿ. ಹಾಲಿನಲ್ಲಿರುವ ಲ್ಯಾಕ್ಟಿಕ್ ಆಸಿಡ್ ನಿರ್ಜೀವ ಜೀವಕೋಶಗಳನ್ನು ತೆಗೆಯುತ್ತದೆ. ತೆಂಗಿನೆಣ್ಣೆ ಪಾದಗಳಿಗೆ ಮೃದುತ್ವ ನೀಡುತ್ತದೆ.