ಈ ವಿಚಾರವನ್ನು ತಿಳಿದ ನಂತರ ಬಳಕೆದಾರರಲ್ಲಿ ಕೆಲವರು ಸಹಾನುಭೂತಿ ತೋರಿಸಿದರೆ, ಮತ್ತೆ ಕೆಲವರು ಟೀಕೆ ಮಾಡುತ್ತಿದ್ದಾರೆ.
ಆಕೆ 22 ವರ್ಷಗಳಿಂದ ಮೇಕಪ್ ಚೆನ್ನಾಗಿ ತೊಳೆಯದೆ ನಿರಂತರವಾಗಿ ಮೇಕಪ್ ಮಾಡಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಮುಖಕ್ಕೆ ತೀವ್ರ ಹಾನಿಯಾಗಿದೆ. ಈ ವಿಷಯವಾಗಿ ಆ ಮಹಿಳೆ ಸಾಮಾಜಿಕ ಮಾಧ್ಯಮದಲ್ಲಿ ಗಂಭೀರ ಚರ್ಮದ ಸಮಸ್ಯೆಯ ಕುರಿತು ಬಹಿರಂಗಪಡಿಸಿದ್ದಾರೆ. ಆ ಮಹಿಳೆ ಯಾರು? ಏನಿದು ಕಥೆ? ಮುಂದೆ ಓದಿ...
ಆ ಮಹಿಳೆ ಚೀನಾದವರು. ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ಅವರಿಗಾಗಿರುವ ಗಂಭೀರವಾದ ಚರ್ಮದ ಸಮಸ್ಯೆಯೊಂದನ್ನು ರಿವೀಲ್ ಮಾಡಿದ್ದಾರೆ. ಮಹಿಳೆ 22 ವರ್ಷಗಳಿಂದ ನಿರಂತರವಾಗಿ ಮೇಕಪ್ ಬಳಸುತ್ತಿದ್ದರು. ಆದರೆ ಅದನ್ನು ಸರಿಯಾಗಿ ತೆಗೆಯಲಿಲ್ಲ. ಪರಿಣಾಮವಾಗಿ ಮುಖವು ತೀವ್ರ ಹಾನಿಗೊಳಗಾಗಿದೆ. ಈ ವಿಚಾರವನ್ನು ತಿಳಿದ ನಂತರ ಬಳಕೆದಾರರಲ್ಲಿ ಕೆಲವರು ಸಹಾನುಭೂತಿ ತೋರಿಸಿದರೆ, ಮತ್ತೆ ಕೆಲವರು ಟೀಕೆ ಮಾಡುತ್ತಿದ್ದಾರೆ.
15ನೇ ವಯಸ್ಸಿನಿಂದಲೂ ಮೇಕಪ್ ಮಾಡುತ್ತಿರುವ ಮಹಿಳೆ
ಆ ಮಹಿಳೆಯ ಹೆಸರು ನಿಯುಯೋಮಿಯನ್. ಜಿಲಿನ್ ಪ್ರಾಂತ್ಯದ ನಿವಾಸಿ. ನಿಯುಯೋಮಿಯನ್ ಸಾಮಾಜಿಕ ಮಾಧ್ಯಮದಲ್ಲಿ ಸುಮಾರು 30 ಸಾವಿರ ಅನುಯಾಯಿಗಳನ್ನು ಹೊಂದಿದ್ದು, ಸದ್ಯ ಒಂದು ವಿಡಿಯೋ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಅವರ ಮುಖವು ಊದಿಕೊಂಡಿದ್ದು, ಕೆಂಪಾಗಿದೆ ಮತ್ತು ದದ್ದುಗಳಿಂದ ಕೂಡಿದೆ. ಇದೆಲ್ಲವೂ "ಹಾರ್ಮೋನ್ ಫೇಸ್" ದಿಂದ ಸಂಭವಿಸಿದೆ ಎಂದು ನಿಯೋಮಿಯನ್ ತಮ್ಮ ವಿಡಿಯೋದಲ್ಲಿ ಹೇಳಿದ್ದಾರೆ. ಅಂದರೆ, ಕ್ರೀಮ್ ಮತ್ತು ಸೌಂದರ್ಯವರ್ಧಕಗಳಲ್ಲಿ ಆಗಾಗ ಬದಲಾವಣೆಗಳು ಚರ್ಮದ ಸಮತೋಲನ ಹಾಳುಮಾಡುತ್ತವೆ.
ನಿಯೋಮಿಯನ್ ಹೇಳುವಂತೆ, 14 ನೇ ವಯಸ್ಸಿನಲ್ಲಿ ಮೊಡವೆಗೆ ಕ್ರೀಮ್ ಬಳಸಿದ್ದರಿಂದ ಚರ್ಮದ ಅಲರ್ಜಿಯಾಯಿತು. ಇದರ ಹೊರತಾಗಿಯೂ, ಆಕೆ 15 ನೇ ವಯಸ್ಸಿನಿಂದಲೇ ಮೇಕಪ್ ಬಳಸಲು ಪ್ರಾರಂಭಿಸಿದರು. ಮನೆಯ ಆರ್ಥಿಕ ಸ್ಥಿತಿ ಕಳಪೆಯಾಗಿತ್ತು, ಆದ್ದರಿಂದ ಅಗ್ಗದ ಲಿಕ್ವಿಡ್ ಫೌಂಡೇಶನ್ ಬಳಸಿದರು. ಇದು ಚರ್ಮವನ್ನು ಮತ್ತಷ್ಟು ಹಾನಿಗೊಳಿಸಿತು. ನಂತರ ಅವರು ಹೇರ್ ಮತ್ತು ಬ್ಯೂಟಿ ಇಂಡಸ್ಟ್ರಿ ಉದ್ಯಮಕ್ಕೆ ಸೇರಿದರು. ಇದರಿಂದ ಪ್ರತಿದಿನ ರಾಸಾಯನಿಕಗಳು ಮತ್ತು ಸೌಂದರ್ಯವರ್ಧಕಗಳನ್ನು ಬಳಸತೊಡಗಿದರು. 2011 ರಲ್ಲಿ, ಅವರು ಸುಂದರವಾಗಿ ಕಾಣಲು ಮುಖದ ಚುಚ್ಚುಮದ್ದನ್ನು ಸಹ ಪಡೆಯಲು ಪ್ರಾರಂಭಿಸಿದರು. ಆದರೆ ಶೀತ ಮತ್ತು ಬಿಸಿ ತಾಪಮಾನದಲ್ಲಿ ರಾಸಾಯನಿಕಗಳಿಗೆ ಒಡ್ಡಿಕೊಂಡ ಕಾರಣ ಸ್ಥಿತಿ ಹದಗೆಟ್ಟಿತು.
"25 ವರ್ಷ ವಯಸ್ಸಿನವರೆಗೆ, ನಾನು ಈ ಚರ್ಮದ ಸಮಸ್ಯೆಗಳನ್ನು ಹಗುರವಾಗಿ ಪರಿಗಣಿಸಿದ್ದೆ, ಸ್ವಲ್ಪ ತುರಿಕೆ ಅಥವಾ ಸುಡುವಿಕೆಯನ್ನು ಮುಲಾಮಿನಿಂದ ಗುಣಪಡಿಸಬಹುದು ಎಂದು ನಾನು ಭಾವಿಸಿದ್ದೆ, ಆದರೆ 25 ರ ನಂತರ ಎಲ್ಲವೂ ಬದಲಾಯಿತು. ಈಗ ನಾನು ರೋಸೇಸಿಯಾ ಮತ್ತು ಡೆಮೂಡೆಕ್ಸ್ ಮೈಟ್ಸ್ (Rosacea and Demodex mite infection) ಸೋಂಕಿನಿಂದ ಬಳಲುತ್ತಿದ್ದೇನೆ. ಕೆಲವೊಮ್ಮೆ ನನ್ನ ಮುಖದ ಮೇಲೆ ಸಾವಿರಾರು ಇರುವೆಗಳು ತೆವಳುತ್ತಿರುವಂತೆ ಭಾಸವಾಗುತ್ತದೆ” ಎಂದು ನಿಯೋಮಿಯನ್ ಹೇಳಿಕೊಂಡಿದ್ದಾರೆ.
ನಿಯೋಮಿಯನ್ ತನ್ನ ಚರ್ಮವನ್ನು ಸರಿಪಡಿಸಲು ಎಂದಿಗೂ ಪ್ರಯತ್ನಿಸಲಿಲ್ಲ ಎಂದು ಒಪ್ಪಿಕೊಂಡಿದ್ದಾರೆ. "ನಾನು ಪ್ರತಿ ಬಾರಿಯೂ ಹೊಸ ಕ್ರೀಮ್‌ಗಳು ಮತ್ತು ಸೀರಮ್ ಗಳನ್ನು ಪ್ರಯತ್ನಿಸುತ್ತಿದ್ದೆ. ಆದರೆ ಎಂದಿಗೂ ಒಂದನ್ನೇ ಬಳಸಲಿಲ್ಲ. ಇದು ದೊಡ್ಡ ತಪ್ಪು" ಎಂದು ತಿಳಿಸಿದ್ದಾರೆ.
ಮಹಿಳೆಯರಿಗೆ ಸಲಹೆ
ವಿಡಿಯೋದಲ್ಲಿ ನಿಯೋಮಿಯನ್ ಮಹಿಳೆಯರಿಗೆ "ಎಲ್ಲರೂ ಹೇಳುವುದನ್ನು ನಂಬಬೇಡಿ. ತ್ವರಿತ ಫಲಿತಾಂಶಗಳನ್ನು ನೀಡುವ ಉತ್ಪನ್ನಗಳು ರೋಗಲಕ್ಷಣಗಳನ್ನು ನಿಗ್ರಹಿಸುತ್ತವೆ, ಅವು ಅವುಗಳನ್ನು ಗುಣಪಡಿಸುವುದಿಲ್ಲ ಮೇಕಪ್ ತೆಗೆದುಹಾಕಲು ನಿಮ್ಮ ಮುಖವನ್ನು ತೊಳೆಯುತ್ತಲೇ ಇರಿ. ಹೊಸ ಕ್ರೀಮ್‌ಗಳನ್ನು ಪ್ರಯತ್ನಿಸಬೇಡಿ." ಎಂದು ಸಲಹೆ ನೀಡಿದ್ದಾರೆ.
ಇಷ್ಟೆಲ್ಲಾ ಆದ ಮೇಲೆ ಆಕೆ ಜನರೊಂದಿಗೆ ಸಂಹವನ ನಡೆಸಲು ಹಿಂದೇಟು ಹಾಕುತ್ತಿದ್ದು, ಒಂಟಿತನ ಅನುಭವಿಸುತ್ತಿದ್ದಾರಂತೆ. ಪ್ರಸ್ತುತ ನಿಯೋಮಿಯನ್ ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
