Asianet Suvarna News Asianet Suvarna News

ಯಾವ ಮೈ ಬಣ್ಣಕ್ಕೆ ಯಾವ ಬಣ್ಣದ ಸೀರೆ ಸೂಕ್ತ? ಇಲ್ಲಿದೆ ಟಿಪ್ಸ್

ಸೀರೆ ಏನೋ ಸಖತ್ತಾಗಿರುತ್ತೆ. ಆದರೆ ಉಟ್ಕೊಂಡು ಕನ್ನಡಿ ಎದುರು ನಿಂತರೆ ಕಣ್ಣಲ್ಲಿ ನೀರು ಬರೋದೊಂದು ಬಾಕಿ. ಕಾರಣ ಮತ್ತೇನಿಲ್ಲ, ಸೀರೆ ಚೆನ್ನಾಗಿದ್ರೂ ಅದು ಉಟ್ಟವರಿಗೆ ಚೆನ್ನಾಗಿ ಕಾಣೋದಿಲ್ಲ. ಅದಕ್ಕೆ ನಮ್ಮ ಮೈ ಬಣ್ಣಕ್ಕೆ ಯಾವ ಥರ ಸೀರೆ ಚಂದ ಅಂತ ಮೊದಲೇ ಗೊತ್ತಿದ್ರೆ ಈ ಗೋಳು ಇರೋದಿಲ್ಲ. ಇಲ್ಲಿದೆ ಅಂಥಾ ಟಿಪ್ಸ್.

Which color Saree suits for different skin tones
Author
Bengaluru, First Published Aug 12, 2022, 1:03 PM IST

ಸೀರೆ ಅಂದ್ರೆ ಹೆಣ್ಣುಮಕ್ಕಳಿಗೆ ಇಷ್ಟವಾಗದೇ ಇರೋದಕ್ಕೆ ಸಾಕಷ್ಟು ಕಾರಣ ಸಿಗುತ್ತೆ. ಆದರೆ ಅದಕ್ಕಿಂತ ಹತ್ತು ಪಟ್ಟು ಕಾರಣ ಸೀರೆಯನ್ನು ಇಷ್ಟ ಪಡೋದಕ್ಕೆ ಸಿಗುತ್ತೆ. ಆಗಸ್ಟ್ ನಿಂದ ಶ್ರಾವಣ ಮಾಸ. ಥರಾವರಿ ಡಿಸೈನ್, ಬಣ್ಣಗಳ ಸೀರೆ ಡಿಸ್ಕಂಟ್ ಟ್ಯಾಗ್ ಹೊತ್ತು ಎಲ್ಲಾ ಸೀರೆ ಅಂಗಡಿಗಳಲ್ಲೂ ಕಣ್ಣಿಗೆ ಹಬ್ಬ ಉಂಟು ಮಾಡುವಂತೆ ಪ್ರದರ್ಶನಗೊಳ್ಳುತ್ತಾ ಇದೆ. ಹೀಗಿರುವಾಗ ಆ ಸೀರೆಯ ಅಂದ ಚೆಂದಕ್ಕೆ ಮರುಳಾಗಿ ಅಂಗಡಿ ಮುಂದೆ ನಿಂತು ಸೀರೆ ಕೊಳ್ಳಲು ಮುಂದಾದಿರೋ ನೀವು ಫಿಪ್ಟಿ ಫಿಪ್ಟಿ ಅಪಾಯದಲ್ಲಿದ್ದೀರಿ. ಗಾಬರಿ ಆಗಬೇಡಿ, ಇದೇನು ಜೀವಕ್ಕೆ ಅಪಾಯ ಅಲ್ಲ. ಆದರೂ ಇಷ್ಟಪಟ್ಟು ಕೊಂಡ ಸೀರೆ ಚೆನ್ನಾಗಿ ಕಾಣೋದಿಲ್ಲ ಅಂದರೆ ಮನಸ್ಸಿಗೆ ನೋವಾಗುವ ಅಪಾಯ ಅಷ್ಟೇ. ಹೀಗೆ ಕಂಡ ಕಂಡಲ್ಲಿ ಗಾಡಿ ನಿಲ್ಲಿಸಿ ಸೀರೆ ಕೊಳ್ಳೋ ಮುಂಚೆ ಒಂದಿಷ್ಟು ಟಿಪ್ಸ್ ಫಾಲೋ ಮಾಡಿದ್ರೆ ಸೀರೆ ಕೊಂಡುಕೊಂಡು ನೀವೂ ಹ್ಯಾಪಿಯಾಗಿರಬಹುದು. ಕಷ್ಟಪಟ್ಟು ಉಳಿಸಿರೋ ಹಣದಲ್ಲಿ ಸೀರೆ ಕೊಂಡದ್ದೂ ಸಾರ್ಥಕ ಅನಿಸೋ ನೆಮ್ಮದಿಗಂತೂ ಭಂಗ ಬರೋದಿಲ್ಲ. ಸೀರೆಯ ಬಣ್ಣ ಹೇಗಿದ್ರೆ ನಮ್ಮ ಮೈ ಬಣ್ಣಕ್ಕೆ ಸರಿ ಹೊಂದುತ್ತೆ, ಯಾವ ಡಿಸೈನ್ ಯಾವ ಬಣ್ಣದವರಿಗೆ ಸೂಕ್ತ ಅನ್ನೋ ಟಿಪ್ಸ್ ಇಲ್ಲಿದೆ ನೋಡಿ.

ಎಣ್ಣೆಗೆಂಪು ಬಣ್ಣ

ಅತ್ತಲಾಗಿ ಕಪ್ಪೂ ಅಲ್ಲ, ಇತ್ತಲಾಗಿ ವೈಟೂ ಅಲ್ಲ ಅನ್ನೋ ಥರದ ಮೀಡಿಯಂ ಸ್ಕಿನ್ ಟೋನ್ ಇದು. ನಮ್ಮಲ್ಲಿ ಹೆಚ್ಚಿನ ಹೆಣ್ಣುಮಕ್ಕಳ ಚರ್ಮದ ಬಣ್ಣದ ಹೀಗೇ ಇರುತ್ತೆ. ಈ ಬಣ್ಣದ ಸ್ಕಿನ್‌ಗೆ ಕೆಲವೊಂದು ಬಣ್ಣದ ಸೀರೆಗಳು ಚೆನ್ನಾಗಿ ಕಾಣೋದಿಲ್ಲ. ಇಂಥಾ ಸ್ಕಿನ್‌ ಟೋನ್ ಹೊಂದಿದವರು ಸೀರೆ ಖರೀದಿಸುವಾಗ ಕಂದು, ಕಿತ್ತಳೆ, ಕ್ಯಾರಮೆಲ್ ಬಣ್ಣಗಳ ಸೀರೆಯನ್ನು ಅಥವಾ ಔಟ್‌ ಫಿಟ್‌ಗಳನ್ನು ಅವಾಯ್ಡ್ ಮಾಡಬಹುದು ಅಂತ ಡಿಸೈನರ್ಸ್ ಹೇಳ್ತಾರೆ. ಕೆಂಪು, ಕಡು ನೀಲಿ, ನೇರಳೆ, ಆಲಿವ್ ಹಸಿರು ಈ ಮೈ ಬಣ್ಣದವರಿಗೆ ಚೆನ್ನಾಗಿ ಕಾಣುತ್ತದೆ.

ಇದನ್ನೂ ಓದಿ: ಅಬ್ಬಬ್ಬಾ..ಜನನಾಂಗಕ್ಕೂ ಟ್ಯಾಟೂ ಹಾಕಿಸಿಕೊಂಡ ಮಹಿಳೆ!

ಗೋಧಿ ಬಣ್ಣ ಸಾಧಾರಣ ಮೈಕಟ್ಟಿನವರಿಗೆ (Olive skin tone)

ಇದು ಆಲಿವ್ ಕಲರ್ ಅಂತ ಕರೆಯೋ ಬಣ್ಣ. ಸ್ವಲ್ಪ ಗೋಧಿ ಬಣ್ಣಕ್ಕೆ ಹತ್ತಿರ. ಕೊಂಚ ಹಳದಿ ಮಿಶ್ರಿತ ಮೈ ಬಣ್ಣ. ಈ ಮೈ ಬಣ್ಣ ಹೊಂದಿರುವವರಿಗೆ ನಿಯಾನ್‌ನಿಂದ ಪಾಸ್ಟಲ್‌ಗಳವರೆಗೆ, ಲೋಹೀಯದಿಂದ ನ್ಯೂಟ್ರಲ್‌ ನಂತಹ ಯಾವುದೇ ಬಣ್ಣವನ್ನು ಧರಿಸಬಹುದು. ಇದು ಡಿಸೈನರ್ ಭಾಷೆ, ಕೇಳಿ ಬೆಚ್ಚಿಬೀಳಬೇಡಿ. ನಿಮ್ಮ ಮೈ ಬಣ್ಣಕ್ಕೆ ಸಾಮಾನ್ಯವಾಗಿ ಯಾವ ಬಣ್ಣದ ಸೀರೆಯೂ ಚೆನ್ನಾಗಿ ಕಾಣುತ್ತೆ. ಗಾಢ ಬಣ್ಣದ ಸೀರೆ ಸಖತ್ತಾಗಿ ಕಾಣುತ್ತೆ. ವೈನ್ ರೆಡ್, ಸಾಸಿವೆಯ ಹಳದಿ, ಪೀಚ್ ಪಿಂಚ್, ಹವಳದ ಬಣ್ಣ, ಆರೆಂಜ್‌ನಲ್ಲಿ ಕೆಲವು ಶೇಡ್ ಗಳು ಚೆನ್ನಾಗಿರುತ್ತವೆ.

ನಸುಗುಲಾಬಿ ಕೆನ್ನೆಯ ಚೆಲುವೆಯರಿಗೆ

ಈ ಮೈಬಣ್ಣ ಹೊಂದಿರುವವರಿಗೆ ಆಕಾಶ ನೀಲಿ, ಅಕ್ವಾ ಗ್ರೀನ್ ಅಂದರೆ ಅಕ್ವೇರಿಯಂ, ಸ್ವಿಮ್ಮಿಂಗ್ ಪೂಲ್ ಬಣ್ಣ ಇರುತ್ತಲ್ವಾ ಆ ಗ್ರೀನ್, ಬೂದು ಬಣ್ಣದ ಸೀರೆ ಉಟ್ಟರೆ ದೇವತೆ ಥರ ಕಾಣಬಹುದು. ಬಾಲಿವುಡ್‌ನಲ್ಲಿ ತಾಪ್ಸಿ ಪನ್ನು, ಕನ್ನಡದ ರಶ್ಮಿಕಾ ಮಂದಣ್ಣ ಮೊದಲಾದವರ ಸ್ಕಿನ್ ಟೋನ್(Skin tone) ಹೀಗಿದೆ.

ಇದನ್ನೂ ಓದಿ: National Handloom Day: ಕೈಮಗ್ಗದ ಸೀರೆಯಲ್ಲಿ ಮಿಂಚಿದ ಬಾಲಿವುಡ್ ತಾರೆಯರು

ಗಾಢ ಬಣ್ಣ, ಕಪ್ಪು, ಚಾಕೋಲೇಟ್ ಬಣ್ಣದ ಸುಂದರಿಯರಿಗೆ

ಇದು ಹೆಲ್ದಿ ಕಲರ್ ಅಂತರ್ಥ. ಚರ್ಮದ ಆರೋಗ್ಯ ಕಾಪಾಡುವ ಮೆಲನಿನ್ ಪ್ರಮಾಣ ಹೆಚ್ಚಿದ್ದರೆ ಚರ್ಮದ ಬಣ್ಣ ಕಪ್ಪು ಅಥವಾ ಗಾಢವಾಗಿರುತ್ತೆ. ಈ ಬಣ್ಣ ಹೊಂದಿರುವವರಿಗೆ ಅಲರ್ಜಿ ಇತ್ಯಾದಿ ಸಮಸ್ಯೆ ಬರೋದಿಲ್ಲ. ದುರಂತ ಅಂದರೆ ಈ ಬಣ್ಣವನ್ನು ದೂರುವವರೇ ಹೆಚ್ಚು ಜನ. ಆದರೆ ಈಗ ಫ್ಯಾಶನ್ ಜಗತ್ತಿನಲ್ಲಿ ಕಪ್ಪು, ಚಾಕ್ಲೇಟ್ ಬಣ್ಣದವರಿಗೆ ಹೆಚ್ಚು ಡಿಮ್ಯಾಂಡ್. ನೇರಳೆ, ಗುಲಾಬಿ, ನೀಲಿ ಬಣ್ಣಗಳು ಇವರಿಗೆ ಚೆಂದ ಕಾಣುತ್ತವೆ. ಬಿಳಿ ಅಷ್ಟಾಗಿ ಹೊಂದಿಕೊಳ್ಳೋದಿಲ್ಲ.

Follow Us:
Download App:
  • android
  • ios