ಮುಖದ ಸೌಂದರ್ಯಕ್ಕೆ ಎಲ್ಲರೂ ಮಹತ್ವ ನೀಡ್ತಾರೆ. ಆದ್ರೆ ಮುಖದ ಮೇಲೆ ಅನಗತ್ಯ ಕೂದಲು ಕಾಣಿಸಿಕೊಂಡ್ರೆ ಅದಕ್ಕೆ ಏನು ಮಾಡ್ಬೇಕು ಗೊತ್ತಾ?
ಮುಖದ ಮೇಲೆ ಸ್ವಲ್ಪ ಕೂದಲಿರೋದು ಸಹಜ. ಆದರೆ ಕೆಲವರಿಗೆ ಮೇಲಿನ ತುಟಿ, ಗಲ್ಲ, ಗಲ್ಲದ ಕೆಳಭಾಗ ಅಥವಾ ಜಾಲ್ಲೈನ್ ಬಳಿ ಹೆಚ್ಚು ಕೂದಲಿರುತ್ತೆ. ಕೆಲವೊಮ್ಮೆ ಮುಖದ ಕೂದಲು ಇದ್ದಕ್ಕಿದ್ದಂತೆ ಹೆಚ್ಚಾಗಲು ಶುರುವಾಗುತ್ತದೆ. ಇದರಿಂದ ಪದೇಪದೆ ಥ್ರೆಡಿಂಗ್ ಅಥವಾ ವ್ಯಾಕ್ಸಿಂಗ್ ಮಾಡಿಸಬೇಕಾದ ಪರಿಸ್ಥಿತಿ ಬರುತ್ತದೆ.
ಸೆಲೆಬ್ರಿಟಿ ನ್ಯೂಟ್ರಿಷನಿಸ್ಟ್ ಶ್ವೇತಾ ಶಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಮುಖದ ಮೇಲಿನ ಅನಗತ್ಯ ಕೂದಲಿನ ಬೆಳವಣಿಗೆಯನ್ನು ಕಡಿಮೆ ಮಾಡಲು ಕೆಲವು ನೈಸರ್ಗಿಕ ವಿಧಾನಗಳನ್ನು ಹೇಳಿದ್ದಾರೆ. ಅವುಗಳ ಬಗ್ಗೆ ತಿಳಿಯೋಣ.
ಸ್ಪಿಯರ್ಮಿಂಟ್ ಟೀ, ಮೆಂತ್ಯೆ-ದಾಲ್ಚಿನ್ನಿ ನೀರು
ಮುಖದ ಮೇಲೆ ಕೂದಲು ಇದ್ದಕ್ಕಿದ್ದಂತೆ ಹೆಚ್ಚಾಗಲು ಹಾರ್ಮೋನ್ಗಳ ಅಸಮತೋಲನವೂ ಕಾರಣವಾಗಬಹುದು. ವಿಶೇಷವಾಗಿ ಆಂಡ್ರೋಜನ್ ಹಾರ್ಮೋನ್ ಹೆಚ್ಚಾದಾಗ ಮಹಿಳೆಯರಲ್ಲಿ ಮುಖದ ಮೇಲೆ ಕೂದಲು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ.
ಸ್ಪಿಯರ್ಮಿಂಟ್ ಟೀ : ಪ್ರತಿದಿನ ಸಂಜೆ ಒಂದು ಗ್ಲಾಸ್ ಸ್ಪಿಯರ್ಮಿಂಟ್ ಟೀ ಕುಡಿಯುವಂತೆ ಶ್ವೇತಾ ಶಾ ಸಲಹೆ ನೀಡಿದ್ದಾರೆ.
ಮೆಂತ್ಯೆ ಮತ್ತು ದಾಲ್ಚಿನ್ನಿ ನೀರು: ಬೆಳಗ್ಗೆ ಮೆಂತ್ಯೆ ಮತ್ತು ದಾಲ್ಚಿನ್ನಿ ಹಾಕಿದ ನೀರನ್ನು ಕುಡಿಯಲು ಅವರು ಸೂಚಿಸಿದ್ದಾರೆ. ಇದಕ್ಕಾಗಿ ಒಂದು ಚಮಚ ಮೆಂತ್ಯೆ ಕಾಳು ಮತ್ತು ಒಂದು ಚಮಚ ದಾಲ್ಚಿನ್ನಿಯನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ, ನಂತರ ಸೋಸಿ ಕುಡಿಯಬಹುದು.
ಶತಾವರಿ : ರಾತ್ರಿ ಮಲಗುವ ಮುನ್ನ 500 ಮಿ.ಗ್ರಾಂ ಶತಾವರಿ ತೆಗೆದುಕೊಳ್ಳುವಂತೆ ಅವರು ಸಲಹೆ ನೀಡಿದ್ದಾರೆ.
ಆದರೆ ಶತಾವರಿ ಅಥವಾ ಯಾವುದೇ ಸಪ್ಲಿಮೆಂಟ್ ತೆಗೆದುಕೊಳ್ಳುವ ಮುನ್ನ ವೈದ್ಯರು ಅಥವಾ ತಜ್ಞರ ಸಲಹೆ ಪಡೆಯುವುದು ಮುಖ್ಯ. ವಿಶೇಷವಾಗಿ ಈಗಾಗಲೇ ಔಷಧಿ ಸೇವಿಸುತ್ತಿದ್ದರೆ, ಗರ್ಭಿಣಿಯಾಗಿದ್ದರೆ, ಮಗುವಿಗೆ ಹಾಲುಣಿಸುತ್ತಿದ್ದರೆ ಅಥವಾ ಯಾವುದೇ ಆರೋಗ್ಯ ಸಮಸ್ಯೆ ಇದ್ದರೆ ಸ್ವಯಂ ಆಗಿ ಸಪ್ಲಿಮೆಂಟ್ ತೆಗೆದುಕೊಳ್ಳಬೇಡಿ. ಮುಖದ ಮೇಲೆ ಕೂದಲು ಅತಿಯಾಗಿ ಹೆಚ್ಚಾಗುವುದರ ಜೊತೆಗೆ ಮೊಡವೆಗಳ ಸಮಸ್ಯೆಯೂ ಕಾಣಿಸಿಕೊಂಡರೆ, ಹಾರ್ಮೋನ್ ಸಂಬಂಧಿತ ಕಾರಣಗಳಿಗಾಗಿ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.


