Miss Universe: ಮಿಸ್ ಯೂನಿವರ್ಸ್ ಕಿರೀಟ ಗೆದ್ದರೆ ಸೌಂದರ್ಯ ಮತ್ತು ಖ್ಯಾತಿಯ ಜೊತೆಗೆ ಅದೃಷ್ಟವೇ ಖುಲಾಯಿಸುತ್ತಾ? ಕೋಟ್ಯಂತರ ರೂಪಾಯಿ, ಐಷಾರಾಮಿ ಜೀವನ ಸೇರಿದಂತೆ ವಿಜೇತರಿಗೆ ಸಿಗುವ ಸೌಲಭ್ಯಗಳ ಬಗ್ಗೆ ತಿಳಿದರೆ ಅಚ್ಚರಿಯಾಗುವುದು ಖಚಿತ. ಆದರೆ ಈ ಕಿರೀಟದ ಹಿಂದೆ ಇರುವ ಜವಾಬ್ದಾರಿಗಳೇನು? ಇಲ್ಲಿದೆ ಕುತೂಹಲಕಾರಿ ಮಾಹಿತಿ!

ಮಿಸ್ ಯೂನಿವರ್ಸ್ ಕಿರೀಟ ಗೆದ್ದವರ ಅದೃಷ್ಟವೇ ಬದಲಾಗುತ್ತೆ!

ಮಿಸ್ ಯೂನಿವರ್ಸ್ ಆಗುವುದು ಪ್ರತಿಯೊಬ್ಬ ಮಹಿಳೆಯ ಕನಸಾಗಿರುತ್ತದೆ. ಏಕೆಂದರೆ ಈ ಕಿರೀಟದ ಜೊತೆಗೆ ಜಗತ್ತಿನಾದ್ಯಂತ ಗುರುತಿಸುವಿಕೆ ಮತ್ತು ಖ್ಯಾತಿ ಮಾತ್ರವಲ್ಲದೆ, ವಿಜೇತರಿಗೆ ಹಲವು ಅದ್ಭುತ ಸೌಲಭ್ಯಗಳೂ ದೊರೆಯುತ್ತವೆ. ಹೀಗಾಗಿಯೇ ಪ್ರತಿವರ್ಷ ಮಿಸ್ ಯೂನಿವರ್ಸ್ ಸ್ಪರ್ಧೆಯನ್ನು ಆಯೋಜಿಸಲಾಗುತ್ತದೆ. ಈ ಬಾರಿ 75ನೇ ಮಿಸ್ ಯೂನಿವರ್ಸ್ ಕಿರೀಟವನ್ನು ಪೋರ್ಟೊ ರಿಕೊದ ಜೆನ್ನಿಫರ್ ಬ್ಯಾರೆಟೊ ಗೆದ್ದಿದ್ದಾರೆ. ಈ ಕಿರೀಟ ಗೆಲ್ಲುವ ಮೂಲಕ ಅವರು ವಿವಾಹಿತ ಮಹಿಳೆ ಹಾಗೂ ತಾಯಿಯಾಗಿ ಮಿಸ್ ಯೂನಿವರ್ಸ್ ಪಟ್ಟ ಅಲಂಕರಿಸಿದ ಮೊದಲ ಸ್ಪರ್ಧಿ ಎನಿಸಿಕೊಂಡಿದ್ದಾರೆ. ಮಿಸ್ ಯೂನಿವರ್ಸ್ ಆದ ಬಳಿಕ ಜೀವನವೇ ಬದಲಾಗುತ್ತೆ. ಅದೃಷ್ಟದ ಜೊತೆಗೆ, ಜವಾಬ್ಧಾರಿಯೂ ಹೆಚ್ಚುತ್ತದೆ. ಮಿಸ್ ಯೂನಿವರ್ಸ್ ಆದ ನಂತರ ವಿಜೇತರಿಗೆ ಏನೆಲ್ಲಾ ಸಿಗುತ್ತದೆ ಎಂಬುದನ್ನು ಈ ಲೇಖನದಲ್ಲಿ ವಿವರವಾಗಿ ತಿಳಿಯೋಣ.

ಕೋಟ್ಯಂತರ ರೂಪಾಯಿ ಬಹುಮಾನ ಮೊತ್ತ

ಮಿಸ್ ಯೂನಿವರ್ಸ್ ಕಿರೀಟ ಗೆದ್ದ ಸ್ಪರ್ಧಿಗೆ ನಗದು ಬಹುಮಾನ ನೀಡಲಾಗುತ್ತದೆ. ಮಾಧ್ಯಮ ವರದಿಗಳ ಪ್ರಕಾರ, ವಿಜೇತರಿಗೆ ಸುಮಾರು 2.5 ಲಕ್ಷ ಡಾಲರ್ ಅಂದರೆ ಭಾರತೀಯ ರೂಪಾಯಿಗಳಲ್ಲಿ ಸುಮಾರು 2.1ರಿಂದ 2.3 ಕೋಟಿ ರೂಪಾಯಿಗಳವರೆಗೆ ಬಹುಮಾನ ಮೊತ್ತ ಸಿಗಬಹುದು. ಇದರ ಜೊತೆಗೆ ಇಡೀ ಒಂದು ವರ್ಷದವರೆಗೆ ಮಾಸಿಕ ಭತ್ಯೆ ಅಥವಾ ಸಂಬಳವನ್ನೂ ನೀಡಲಾಗುತ್ತದೆ ಎಂದು ವರದಿಗಳಲ್ಲಿ ಹೇಳಲಾಗಿದೆ.

ನ್ಯೂಯಾರ್ಕ್‌ನಲ್ಲಿ ಐಷಾರಾಮಿ ಅಪಾರ್ಟ್‌ಮೆಂಟ್

ಮಿಸ್ ಯೂನಿವರ್ಸ್ ಆದ ನಂತರ ವಿಜೇತರಿಗೆ ಒಂದು ವರ್ಷದವರೆಗೆ ನ್ಯೂಯಾರ್ಕ್‌ನಲ್ಲಿ ಐಷಾರಾಮಿ ಅಪಾರ್ಟ್‌ಮೆಂಟ್ ಸೌಲಭ್ಯ ನೀಡಲಾಗುತ್ತದೆ. ಇಲ್ಲಿ ಅವರು ತಮ್ಮ ಕೆಲಸಗಳು, ಮೀಟಿಂಗ್ ಮತ್ತು ವಿವಿಧ ಕಾರ್ಯಕ್ರಮಗಳಲ್ಲಿ ಸುಲಭವಾಗಿ ಭಾಗವಹಿಸಬಹುದು.

ವಿದೇಶ ಪ್ರವಾಸ ಮಾಡುವ ಅವಕಾಶ

ಮಿಸ್ ಯೂನಿವರ್ಸ್ ಆದ ನಂತರ ವಿಜೇತರಿಗೆ ವಿವಿಧ ದೇಶಗಳಲ್ಲಿ ನಡೆಯುವ ಕಾರ್ಯಕ್ರಮಗಳು, ಫ್ಯಾಷನ್ ಇವೆಂಟ್‌ಗಳು ಮತ್ತು ಸಾಮಾಜಿಕ ಅಭಿಯಾನಗಳಲ್ಲಿ ಭಾಗವಹಿಸುವ ಅವಕಾಶ ಸಿಗುತ್ತದೆ. ಈ ಸಂದರ್ಭದಲ್ಲಿ ವಿಮಾನ ಟಿಕೆಟ್, ಹೋಟೆಲ್ ಮತ್ತು ಆಹಾರ ಸೇರಿದಂತೆ ಪ್ರಯಾಣದ ವೆಚ್ಚಗಳನ್ನು ಆಯೋಜಕರು ಭರಿಸುತ್ತಾರೆ.

ಡಿಸೈನರ್ ಬಟ್ಟೆಗಳು ಮತ್ತು ದುಬಾರಿ ಮೇಕಪ್

ಮಿಸ್ ಯೂನಿವರ್ಸ್ ಕಿರೀಟ ಗೆದ್ದ ನಂತರ ವಿಜೇತರ ವ್ಯಕ್ತಿತ್ವ ಮತ್ತು ಲುಕ್‌ಗೂ ವಿಶೇಷ ಗಮನ ನೀಡಲಾಗುತ್ತದೆ. ಕಾರ್ಯಕ್ರಮಗಳು ಮತ್ತು ಸಮಾರಂಭಗಳಲ್ಲಿ ಭಾಗವಹಿಸಲು ಅವರಿಗೆ ಡಿಸೈನರ್ ಬಟ್ಟೆಗಳು, ಶೂಗಳು ಮತ್ತು ಆಭರಣಗಳನ್ನು ನೀಡಲಾಗುತ್ತದೆ. ಇದರ ಜೊತೆಗೆ ಮೇಕಪ್ ಆರ್ಟಿಸ್ಟ್, ಹೇರ್ ಸ್ಟೈಲಿಸ್ಟ್ ಮತ್ತು ಫ್ಯಾಷನ್ ಸ್ಟೈಲಿಸ್ಟ್‌ಗಳ ಸಹಾಯವೂ ದೊರೆಯುತ್ತದೆ.

ಫಿಟ್‌ನೆಸ್ ಮತ್ತು ಆರೋಗ್ಯದ ಬಗ್ಗೆ ಕಾಳಜಿ

ಮಿಸ್ ಯೂನಿವರ್ಸ್ ವಿಜೇತರಿಗೆ ಫಿಟ್‌ನೆಸ್ ಟ್ರೈನರ್, ಡಯಟಿಷಿಯನ್ ಮತ್ತು ವೈದ್ಯಕೀಯ ಸೌಲಭ್ಯಗಳು ದೊರೆಯಬಹುದು. ಇದರಿಂದ ಬಿಡುವಿಲ್ಲದ ವೇಳಾಪಟ್ಟಿಯ ನಡುವೆಯೂ ತಮ್ಮ ಆರೋಗ್ಯ ಮತ್ತು ಫಿಟ್‌ನೆಸ್ ಕಾಪಾಡಿಕೊಳ್ಳಲು ಸಹಾಯವಾಗುತ್ತದೆ.

ಅಂತರರಾಷ್ಟ್ರೀಯ ಬ್ರ್ಯಾಂಡ್‌ಗಳ ಜೊತೆ ಕೆಲಸ ಮಾಡುವ ಅವಕಾಶ

ಮಿಸ್ ಯೂನಿವರ್ಸ್ ಕಿರೀಟ ಗೆದ್ದ ನಂತರ ವಿಜೇತರಿಗೆ ಮಾಡೆಲಿಂಗ್, ಫ್ಯಾಷನ್, ಬ್ಯೂಟಿ ಮತ್ತು ಮನರಂಜನಾ ಕ್ಷೇತ್ರಗಳಲ್ಲಿ ಹಲವು ಹೊಸ ಅವಕಾಶಗಳು ತೆರೆದುಕೊಳ್ಳುತ್ತವೆ. ದೊಡ್ಡ ಬ್ರ್ಯಾಂಡ್‌ಗಳ ಜೊತೆ ಕೆಲಸ ಮಾಡುವುದು, ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವುದು ಮತ್ತು ಅಂತರರಾಷ್ಟ್ರೀಯ ಫ್ಯಾಷನ್ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶಗಳು ಸಿಗಬಹುದು.

ಮಿಸ್ ಯೂನಿವರ್ಸ್ ಆಗುವುದು ದೊಡ್ಡ ಜವಾಬ್ದಾರಿ

ಮಿಸ್ ಯೂನಿವರ್ಸ್ ಕಿರೀಟ ಗೆದ್ದ ನಂತರ ವಿಜೇತರಿಗೆ ಹಲವು ಸೌಲಭ್ಯಗಳು ಮತ್ತು ಅಂತರರಾಷ್ಟ್ರೀಯ ಮಟ್ಟದ ಗುರುತಿಸುವಿಕೆ ಸಿಗುತ್ತದೆ. ಆದರೆ ಇದರ ಜೊತೆಗೆ ದೊಡ್ಡ ಜವಾಬ್ದಾರಿಗಳೂ ಇರುತ್ತವೆ. ಸಾಮಾಜಿಕ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವುದು, ವಿವಿಧ ದೇಶಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಸೇರಿದಂತೆ ಹಲವು ಜವಾಬ್ದಾರಿಗಳನ್ನು ಅವರು ನಿರ್ವಹಿಸಬೇಕಾಗುತ್ತದೆ.