Celebrity Style : ಸುಷ್ಮಾ ಸ್ವರಾಜ್ ಸೀರೆಗಿತ್ತು ಜ್ಯೋತಿಷ್ಯದ ನಂಟು!
ದೊಡ್ಡ ಹುದ್ದೆ ಸಿಗ್ತಿದ್ದಂತೆ ನಮ್ಮತನ ಮರೆತು ವಿದೇಶಿ ವೇಷಭೂಷಣಕ್ಕೆ ಮೊರೆ ಹೋಗುವ ಅನೇಕರು ನಮ್ಮಲ್ಲಿದ್ದಾರೆ. ಆದ್ರೆ ದಿವಂಗತ ಸುಷ್ಮಾ ಸ್ವರಾಜ್ ಇದಕ್ಕೆ ವಿರುದ್ಧವಾಗಿದ್ದರು. ಯಾವುದೇ ಸಂದರ್ಭವಿರಲಿ ಅವರು ಧರಿಸುತ್ತಿದ್ದ ಉಡುಗೆ ಭಾರತದ ಸಂಸ್ಕೃತಿಯನ್ನು ಸಾರುತ್ತಿತ್ತು. ಧರಿಸುವ ಬಣ್ಣದ ಸೀರೆ ಹಿಂದೆ ಇನ್ನೊಂದು ಗುಟ್ಟಿತ್ತು.
ಸುಷ್ಮಾ ಸ್ವರಾಜ್ (Sushma Swaraj) ಈಗ ನಮ್ಮೊಂದಿಗಿಲ್ಲ ನಿಜ. ಆದ್ರೆ ಅವರ ನೆನಪು ಅಜರಾಮರ. ಸುಷ್ಮಾ ಸ್ವರಾಜ್ ಎಲ್ಲರ ಹೃದಯದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಭಾರತ (India)ದ ಮಾಜಿ ವಿದೇಶಾಂಗ ಸಚಿವೆ ಮತ್ತು ಭಾರತೀಯ ಜನತಾ ಪಕ್ಷದ ಹಿರಿಯ ನಾಯಕಿಯಾಗಿದ್ದ ಸುಷ್ಮಾ ಸ್ವರಾಜ್ ಫೆಬ್ರವರಿ 14ರಂದು ಜನಿಸಿದ್ದರು. ಜನ್ಮ ಜಯಂತಿ ದಿನದಂದು ಪ್ರಧಾನಿ ನರೇಂದ್ರ ಮೋದಿ (Narendra Modi )ಸೇರಿದಂತೆ ಅನೇಕ ಗಣ್ಯರು ಅವರನ್ನು ನೆನಪಿಸಿಕೊಂಡಿದ್ದಾರೆ. ಭಾರತದ ಅತ್ಯುತ್ತಮ ಮತ್ತು ಪ್ರಸಿದ್ಧ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದ ಸುಷ್ಮಾ ಸ್ವರಾಜ್ ಕೇವಲ ರಾಜಕೀಯ ವಿಚಾರಕ್ಕೆ ಪ್ರಸಿದ್ದಿ ಪಡೆದಿರಲಿಲ್ಲ. ತಮ್ಮ ಸ್ವಭಾವದಿಂದ ಅವರು ಕೋಟ್ಯಂತರ ಭಾರತೀಯರ ಜೊತೆ ವಿದೇಶಿಗರ ಮನಸ್ಸು ಗೆದ್ದಿದ್ದರು. ಭಾರತದ ಸ್ಟೈಲಿಶ್ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದ ಸುಷ್ಮಾ, ಸಂಸತ್ತಿನಲ್ಲಿ ಮಾಡ್ತಿದ್ದ ಭಾಷಣವನ್ನು ಎಲ್ಲರೂ ಕಿವಿಗೊಟ್ಟು ಕೇಳ್ತಿದ್ದರು. ಪ್ರತಿಯೊಬ್ಬರ ನೋವಿಗೆ ಸ್ಪಂದಿಸುತ್ತಿದ್ದ ರಾಜಕಾರಣಿಗಳಲ್ಲಿ ಸುಷ್ಮಾ ಒಬ್ಬರು. ಸಾಮಾಜಿಕ ಜಾಲತಾಣದಲ್ಲಿಯೂ ಸಕ್ರಿಯವಾಗಿದ್ದ ನಾಯಕಿ, ವಿದೇಶದಲ್ಲಿ ಸಿಕ್ಕಿಬಿದ್ದಿದ್ದ ಅನೇಕರಿಗೆ ಭಾರತಕ್ಕೆ ಬರಲು ನೆರವಾಗಿದ್ದರು.
ಸುಷ್ಮಾ ಸ್ವರಾಜ್ ಅಂದ್ರೆ ನೆನಪಾಗುವುದು ಅವರ ದೊಡ್ಡ ಹಣೆಬೊಟ್ಟು. ಶುದ್ಧ ಭಾರತೀಯ ಉಡುಗೆಯಾದ ಸೀರೆ. ಕೊರಳಲ್ಲಿ ಕಪ್ಪು ಮುತ್ತಿನ ಮಾಲೆ, ಕೈಯಲ್ಲಿ ಗಡಿಯಾರ. ಸೀರೆಗೆ ಹೊಂದುವ ಜಾಕೆಟ್. ಇನ್ನೊಂದು ಕೈಗೆ ಚಿನ್ನದ ಬಳೆ ತೊಡುವ ಅವರ ಶೈಲಿ ಎಲ್ಲರ ಮನಗೆದ್ದಿದೆ. ಸಾಂಪ್ರದಾಯಿಕ ಸ್ವದೇಶಿ ಉಡುಪನ್ನು ಸುಷ್ಮಾ ಸ್ವರಾಜ್ ಕೊನೆಯವರೆಗೂ ಬಿಡಲಿಲ್ಲ.
ಸುಷ್ಮಾ ಸ್ವರಾಜ್ ಬಳಿ ಅನೇಕ ಬಗೆಯ ಸೀರೆಯಿತ್ತು ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಆದ್ರೆ ಸುಷ್ಮಾ ಸ್ವರಾಜ್ ಸೀರೆಗೂ ಜ್ಯೋತಿಷ್ಯದ ನಂಟಿದೆ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಸುಷ್ಮಾ ಜಿ ಜ್ಯೋತಿಷ್ಯ ಮತ್ತು ರತ್ನಗಳಲ್ಲಿ ಅಪಾರ ನಂಬಿಕೆಯನ್ನು ಹೊಂದಿದ್ದರು ಎಂಬುದು ನಿಮಗೆ ಗೊತ್ತೆ? ಯಸ್. ಜ್ಯೋತಿಷ್ಯದಲ್ಲಿ ನಂಬಿಕೆ ಹೊಂದಿದ್ದ ಸುಷ್ಮಾ ಸ್ವರಾಜ್, ದಿನಕ್ಕೆ ತಕ್ಕಂತೆ ಸೀರೆಯ ಬಣ್ಣ ಆಯ್ಕೆ ಮಾಡಿಕೊಳ್ತಿದ್ದರು. ನಿಮಗೆಲ್ಲ ತಿಳಿದಿರುವಂತೆ ವಾರದ 7 ದಿನಗಳನ್ನು ಹಿಂದೂ ಧರ್ಮದಲ್ಲಿ ಒಂದೊಂದು ದೇವರಿಗೆ ಅರ್ಪಿಸಲಾಗಿದೆ. ಸುಷ್ಮಾ ಕೂಡ ಇದನ್ನು ನಂಬಿದ್ದರು. ದಿನದ ದೇವರಿಗೆ ಪ್ರಿಯವಾದ ಬಣ್ಣದ ಸೀರೆಯನ್ನು ಅವರು ಆಯ್ಕೆ ಮಾಡಿಕೊಳ್ತಿದ್ದರು.
HIJAB ROW: ಮುಸ್ಲಿಂ ಮಹಿಳೆಯರಿಗೆ ಹಿಜಾಬ್ ಬಂದಿದ್ದಾರೂ ಎಲ್ಲಿಂದ?
ಸೋಮವಾರವನ್ನು ಚಂದ್ರದೇವ ಮತ್ತು ಶಿವನಿಗೆ ಅರ್ಪಿಸಲಾಗಿದೆ. ಆದ್ದರಿಂದ ಸುಷ್ಮಾ ಸ್ವರಾಜ್ ಅವರು ಈ ದಿನ ಬಿಳಿ ಬಣ್ಣದ ಸೀರೆಯನ್ನು ಧರಿಸುತ್ತಿದ್ದರು.
ಒಮ್ಮೆ ಪಾಕಿಸ್ತಾನ ಪ್ರವಾಸಕ್ಕೆ ಹೋದಾಗ ಹಸಿರು ಸೀರೆ ಉಟ್ಟಿದ್ದ ಸುಷ್ಮಾ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದರು. ಆದರೆ ನಂತರ ಸುಷ್ಮಾ ಅದಕ್ಕೆ ಸ್ಪಷ್ಟನೆಯನ್ನು ನೀಡಿದ್ದರು. ನಾನು ಬುಧವಾರದಂದು ಮಾತ್ರ ಹಸಿರು ಸೀರೆಯನ್ನು ಉಡುತ್ತೇನೆ ಎಂದಿದ್ದರು.
ಸುಷ್ಮಾ ಸ್ವರಾಜ್ ಹಬ್ಬಗಳನ್ನು ಅತ್ಯಂತ ಸಡಗರದಿಂದ ಆಚರಿಸುತ್ತಿದ್ದರು. ಕೆಲಸದ ಒತ್ತಡದ ಮಧ್ಯೆಯೂ ಬಿಡುವು ಮಾಡಿಕೊಂಡು ಸುಂದರ ಸೀರೆಯಲ್ಲಿ ಹಬ್ಬವನ್ನು ಆಚರಿಸುತ್ತಿದ್ದರು.
ಸೀರೆಯೊಂದಿಗೆ ಜಾಕೆಟ್-ಶಾಲು ಧರಿಸುವ ಟ್ರೆಂಡ್ : ಸೀರೆಯ ಜಾಕೆಟ್ ಧರಿಸುವ ಟ್ರೆಂಡ್ ಕೂಡ ಸುಷ್ಮಾ ಜಿಯವರಿಂದ ಪ್ರಾರಂಭವಾಯಿತು ಅಂದ್ರೆ ನೀವು ನಂಬಲೇಬೇಕು. ಅವರು ಸೀರೆಯೊಂದಿಗೆ ಜಾಕೆಟ್ ಧರಿಸುವ ರೀತಿ ಸಂಪೂರ್ಣವಾಗಿ ವಿಭಿನ್ನವಾಗಿತ್ತು. ಅವರು ಆಗಾಗ್ಗೆ ಸೀರೆಯ ಬಣ್ಣದ ಶೋಲ್ಡರ್ ಕಟ್ ಜಾಕೆಟ್ ಅನ್ನು ಧರಿಸುತ್ತಿದ್ದರು.
Home Hacks: ಹೀಗೆ ತೊಳೆದ್ರೆ ಚಿನ್ನ ಫಳಫಳ ಹೊಳೆಯುತ್ತೆ
ಇದಲ್ಲದೇ ಸೀರೆಯ ಜೊತೆ ಅದಕ್ಕೆ ಹೊಂದುವ ಶಾಲುಗಳನ್ನು ತುಂಬಾ ಸ್ಟೈಲ್ ಆಗಿ ಒಯ್ಯುತ್ತಿದ್ದರು. ಕ್ಲಾಸಿ ಸ್ಟೈಲ್ ಅನ್ನು ಇಷ್ಟಪಡುತ್ತಿದ್ದ ಸುಷ್ಮಾ ಸ್ವರಾಜ್ ಅವರಿಗೆ ರೇಷ್ಮೆ ಸೀರೆ ಎಂದರೆ ಹೆಚ್ಚು ಇಷ್ಟ. ಇದರಲ್ಲಿ ಭಾಗಲ್ಪುರಿ ರೇಷ್ಮೆ ಸೀರೆಗಳ ಜೊತೆ ವಿಶೇಷವಾದ ಬಾಂಧವ್ಯವಿತ್ತು. ಇದಲ್ಲದೆ ಕಾಟನ್ ಸೀರೆಯಲ್ಲಿಯೂ ಸುಷ್ಮಾ ಕಾಣಿಸಿಕೊಳ್ಳುತ್ತಿದ್ದರು.