ಬೀದಿ ಬದಿ ಮಕ್ಕಳಲ್ಲಿ ಕೃಷ್ಣನ ಕಂಡ ಫೋಟೋಗ್ರಾಫರ್: ಅಪುಲ್ ಆಳ್ವ ಕಾರ್ಯಕ್ಕೆ ಶ್ಲಾಘನೆ: ವೀಡಿಯೋ ವೈರಲ್
ಮಂಗಳೂರಿನ ಖ್ಯಾತ ಫೋಟೋಗ್ರಾಫರ್ ವಿಪುಲ್ ಆಳ್ವ (Vipul Alva) ಅವರು ಬೀದಿ ಬದಿಯ ಮಕ್ಕಳಲ್ಲಿ ಕೃಷ್ಣನ ಕಾಣುವ ಪ್ರಯತ್ನ ಮಾಡಿದ್ದು, ಅದು ಯಶಸ್ಸನ್ನು ಕಂಡಿದೆ. ಕೃಷ್ಣ ವೇಷದಲ್ಲಿ ತಮ್ಮ ಮಕ್ಕಳನ್ನು ನೋಡಿದ ಅಲೆಮಾರಿ ತಾಯಂದಿರ ಮೊಗದಲ್ಲಿ ನಗುವಿನ ಅಲೆ ಮೂಡಿದೆ.

ಕೃಷ್ಣಾಷ್ಟಮಿ ಬಂದಾಗಲೆಲ್ಲಾ ಪ್ರತಿ ಮನೆಯ ಮಕ್ಕಳು ಕೃಷ್ಣ ರಾಧೆಯರಾಗುತ್ತಾರೆ ಜಗದ್ಧೋದ್ದಾರಕನ ವೇಷ ಧರಿಸಿ ಬೆಣ್ಣೆ ತಿಂದು ಸಂಭ್ರಮಿಸುತ್ತಾರೆ. ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ತರುತ್ತಾರೆ. ಆದರೆ ಬೀದಿ ಬದಿ ವಾಸ ಮಾಡುವ ಅಲೆಮಾರಿ ಮಕ್ಕಳಿಗೆ ಈ ಭಾಗ್ಯವೆಲ್ಲಿ, ಮಕ್ಕಳ ತಾಯಿಯರಿಗೇನೋ ತನ್ನ ಮಗುವಿನಲ್ಲೂ ಕೃಷ್ಣನ ಕಾಣುವ ಆಸೆಯೇನೋ ಇರುತ್ತದೆ. ಆದರೆ ಈ ಸಂಭ್ರಮಕ್ಕೂ ಹಣ ಬೇಕು. ಇದರಿಂದ ಬಡ ತಾಯಿ ತಮ್ಮ ಮಕ್ಕಳಿದ್ದ ರೂಪದಲ್ಲೇ ದೇವರನ್ನು ಕಾಣುತ್ತಾ ಸಮಾಧಾನ ಮಾಡಿಕೊಳ್ಳುತ್ತಾರೆ. ಆದರೆ ಇಂತಹ ತಾಯಂದಿರ ಆಸೆಯನ್ನು ಮನದೊಳಗೆ ಕೊಲ್ಲಲು ಬಿಟ್ಟಿಲ್ಲ ಈ ಫೋಟೋಗ್ರಾಫರ್...
ಹೌದು ಮಂಗಳೂರಿನ ಖ್ಯಾತ ಫೋಟೋಗ್ರಾಫರ್ ವಿಪುಲ್ ಆಳ್ವ (Vipul Alva) ಅವರು ಬೀದಿ ಬದಿಯ ಮಕ್ಕಳಲ್ಲಿ ಕೃಷ್ಣನ ಕಾಣುವ ಪ್ರಯತ್ನ ಮಾಡಿದ್ದು, ಅದು ಯಶಸ್ಸನ್ನು ಕಂಡಿದೆ. ಕೃಷ್ಣ ವೇಷದಲ್ಲಿ ತಮ್ಮ ಮಕ್ಕಳನ್ನು ನೋಡಿದ ಅಲೆಮಾರಿ ತಾಯಂದಿರ ಮೊಗದಲ್ಲಿ ನಗುವಿನ ಅಲೆ ಮೂಡಿದೆ. ಫೇಸ್‌ಬುಕ್‌ನಲ್ಲಿ(Facebook) ಅವರು ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದು, ಅನೇಕರು ಫೋಟೋಗ್ರಾಫರ್‌ನ ವಿನೂತನ ಪ್ರಯೋಗಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಧನ್ಯವಾದ ತಿಳಿಸಿದ್ದಾರೆ.
ಅಂಗವೈಕಲ್ಯ ಮೆಟ್ಟಿನಿಂತು ಕೃಷ್ಣನಾದ ಬಾಲಕ ಮುಹಮ್ಮದ್ ಯಾಹ್ಯಾ!
ವೀಡಿಯೋದಲ್ಲೇನಿದೆ?
ಬೀದಿ ಬದಿ ಇರುವ ಮಕ್ಕಳನ್ನು ಅವವರ ಪೋಷಕರನ್ನು ಭೇಟಿಯಾದ ವಿಫುಲ್ ಅವರ ತಂಡ ತಾಯಂದಿರ ಮನವೊಲಿಸಿ ಮಕ್ಕಳಿಗೆ ಕೃಷ್ಣವೇಷ (Krishna coutume) ಹಾಕಿದ್ದಾರೆ. 50 ಸೆಕೆಂಡ್‌ಗಳ ವೀಡಿಯೋದಲ್ಲಿ ತನ್ನ ತಂಡದೊಂದಿಗೆ ಮಕ್ಕಳ ತಾಯಿಯರ ಜೊತೆ ಸೇರಿ ಬೀದಿಯ ಮಕ್ಕಳನ್ನು ಕೃಷ್ಣರಾಗಿಸುವ ದೃಶ್ಯವಿದೆ. ಓಡುವ ಮಕ್ಕಳ ಒಂದೆಡೆ ಕೂರಿಸಿ ತಲೆಗೆ ನವಿಲುಗರಿಯನ್ನು ಕಟ್ಟಿ ಕೃಷ್ಣನ ವೇಷವನ್ನು ಹಾಕಲಾಗಿದೆ. ಮಕ್ಕಳ ತಾಯಿಗೂ ಯಶೋಧೆಯಂತೆ ಸ್ವಲ್ಪ ಅಲಂಕಾರ ಮಾಡಲಾಗಿದ್ದು, ಬಾಲಕೃಷ್ಣನ ಎತ್ತಿಕೊಂಡು ಯಶೋಧೆ ಬೀದಿಯಲ್ಲಿ ನಡೆದು ಬರುತ್ತಿರುವಂತೆ, ಅಳುವ ಕಂದನ ಸಮಾಧಾನ ಮಾಡುವಂತೆ ಹೀಗೆ ಹಲವು ರೀತಿಯಲ್ಲಿ ಮಕ್ಕಳ ಹಾಗೂ ತಾಯಂದಿರ ಜೋಡಿಯ ಫೋಟೋವನ್ನು ವಿಪುಲ್ ಅಳ್ವ ಸೆರೆ ಹಿಡಿದಿದ್ದಾರೆ.
ಪ್ರತಿ ಮಗುವಿನಲ್ಲೂ ದೈವಿಕತೆ ಅನ್ವೇಷಿಸೋಣ
ವೀಡಿಯೋ ಶೇರ್ ಮಾಡಿರುವ ವಿಫುಲ್ ಆಳ್ವ ಅವರು, ಪ್ರತಿ ಮಗುವಿನಲ್ಲೂ ದೈವಿಕತೆಯನ್ನು ಅನ್ವೇಷಿಸುವುದು ಮತ್ತು ಆಚರಿಸುವುದು ಮತ್ತು ಕಡಿಮೆ ಅದೃಷ್ಟವಂತರ ನಡುವೆ ಈ ಸಂತೋಷವನ್ನು ವೀಕ್ಷಿಸುವುದು ದೈವಿಕ ಮುಗ್ಧತೆಯನ್ನು ಪ್ರಸರಣಗೊಳಿಸುವುದು ಮತ್ತು ಎಲ್ಲಾ ಸಾಮಾಜಿಕ ಗಡಿಗಳನ್ನು ಮೀರುವುದೇ ಕೃಷ್ಣನ ಮೇಲಿನ ಪ್ರೀತಿ... ಕೃಷ್ಣ ಪ್ರೀತಿ... ಹರೇ ಕೃಷ್ಣ. ನಾಡಿನೆಲ್ಲೆಡೆ ಅಷ್ಟಮಿ ಸಂಭ್ರಮ ಆದ್ರೆ ಈ ಬೀದಿಬದಿ ಮಗುವಿನ ಮುಖದಲ್ಲಿ ಕೃಷ್ಣನ ರೂಪ ಕಾಣುವ ಒಂದು ಅಪರೂಪದ ಪ್ರಯತ್ನ ಎಲ್ಲರಿಗೂ ಅಷ್ಟಮಿ ಹಬ್ಬದ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ ವಿಪುಲ್ ಆಳ್ವ.
ಸಮಾಜದ ಅತ್ಯಂತ ಕೆಳಸ್ತರದಲ್ಲಿರುವ ಆರ್ಥಿಕವಾಗಿ ದುರ್ಬಲರಾಗಿರುವ ಸಮುದಾಯದವೊಂದರ ಮಕ್ಕಳಲ್ಲಿ ಕೃಷ್ಣನ ಕಾಣುವ ಪ್ರಯತ್ನ ಮಾಡಿದ್ದ ವಿಪುಲ್ ಅವರ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದ್ದು, ಅನೇಕರು ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ಶೇರ್ ಮಾಡಿಕೊಂಡು ವೈರಲ್ ಮಾಡುತ್ತಿದ್ದಾರೆ. ಅವರ ಕಾರ್ಯಕ್ಕೆ ನಮ್ಮದೂ ಒಂದು ಸಲಾಂ...
ಅಪ್ಪ ಮುಸ್ಲಿಂ ಆದ್ರೂ ಮೂರೂ ತಮ್ಮಂದಿರ ಹಣೆಗೆ ಸಿಂಧೂರ ಇಟ್ಟು ರಾಖಿ ಹಬ್ಬ ಆಚರಿಸಿದ ನಟಿ ಸಾರಾ