"ವಡಾ ಪಾವ್ ಗರ್ಲ್" ಖ್ಯಾತಿಯ ಚಂದ್ರಿಕಾ ದೀಕ್ಷಿತ್, ರಾಮ-ಸೀತೆಯ ಚಿತ್ರವಿದ್ದ ಸೀರೆಯಿಂದ ಏಕ್ತಾ ಕಪೂರ್ ಮುಖ ಒರೆಸಿದ ಬಿಗ್‌ಬಾಸ್‌ ಸ್ಪರ್ಧಿ ತಾನ್ಯಾ ಮಿತ್ತಲ್‌ ವಿರುದ್ಧ ಕಿಡಿಕಾರಿದ್ದಾರೆ. ಇದೇ ಕೆಲಸವನ್ನು ತಾನು ಮಾಡಿದ್ದರೆ, ಸೋಷಿಯಲ್ ಮೀಡಿಯಾದಲ್ಲಿ ತನ್ನನ್ನು ಜೀವಂತ ಸಮಾಧಿ ಮಾಡುತ್ತಿದ್ದರು ಎಂದು ಚಂದ್ರಿಕಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನವದೆಹಲಿ (ಮಾ.16): ವಿವಾದಗಳ ಮೂಲಕವೇ ಸುದ್ದಿಯಲ್ಲಿರುವ "ವಡಾ ಪಾವ್ ಗರ್ಲ್" ಖ್ಯಾತಿಯ ಚಂದ್ರಿಕಾ ದೀಕ್ಷಿತ್, ಈಗ ಬಿಗ್‌ಬಾಸ್‌ ಸ್ಪರ್ಧಿ ಹಾಗೂ ಇನ್‌ಫ್ಲುಯೆನ್ಸರ್‌ ತಾನ್ಯಾ ಮಿತ್ತಲ್‌ ವಿರುದ್ಧ ಕಿಡಿಕಾರಿದ್ದಾರೆ. ತಾನ್ಯಾ ಮಿತ್ತಲ್‌ ಅವರ ವಿಡಿಯೋವೊಂದನ್ನು ಪೋಸ್ಟ್‌ ಮಾಡಿರುವ ಚಂದ್ರಿಕಾ ದೀಕ್ಷಿತ್‌, ಆಕೆಯ ವರ್ತನೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಹಾಗೇನಾದರೂ ಇದೇ ಕೆಲಸ ನಾನು ಮಾಡಿದ್ದರೆ, ಸೋಶಿಯಲ್‌ ಮೀಡಿಯಾದ ಜನ ನನ್ನನ್ನು ಜೀವಂತವಾಗಿ ಹೂತುಹಾಕುತ್ತಿದ್ದರು ಎಂದು ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಏನಿದು ಘಟನೆ?

ಇತ್ತೀಚೆಗೆ ನಿರ್ಮಾಪಕಿ ಏಕ್ತಾ ಕಪೂರ್ ಅವರ ಕಾರ್ಯಕ್ರಮವೊಂದರಲ್ಲಿ ತಾನ್ಯಾ ಮಿತ್ತಲ್ ಭಾಗವಹಿಸಿದ್ದರು. ಈ ವೇಳೆ ತಾನ್ಯಾ ಕೇಸರಿ ಬಣ್ಣದ ವಿಶೇಷ ಸೀರೆಯನ್ನು ಧರಿಸಿದ್ದರು. ಆ ಸೀರೆಯ ಸೆರಗಿನ ಮೇಲೆ ರಾಮ ಮತ್ತು ಸೀತೆಯ ಚಿತ್ರಗಳನ್ನು ಮುದ್ರಿಸಲಾಗಿತ್ತು. ಕಾರ್ಯಕ್ರಮದ ನಡುವೆ ಏಕ್ತಾ ಕಪೂರ್ ಅವರ ಮುಖದ ಮೇಲೆ ಏನೋ ಅಂಟಿಕೊಂಡಿದ್ದನ್ನು ಗಮನಿಸಿದ ತಾನ್ಯಾ, ತಕ್ಷಣವೇ ತಮ್ಮ ಸೀರೆಯ ಸೆರಗಿನಿಂದ ಏಕ್ತಾ ಅವರ ಮುಖವನ್ನು ಒರೆಸಿದ್ದಾರೆ. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಹಲವರು ತಾನ್ಯಾ ಅವರ ಮೃದು ಸ್ವಭಾವವನ್ನು ಮತ್ತು ಏಕ್ತಾ ಅವರ ಮೇಲಿರುವ ಕಾಳಜಿಯನ್ನು ಶ್ಲಾಘಿಸಿದ್ದರು. ಆದರೆ, ಚಂದ್ರಿಕಾ ದೀಕ್ಷಿತ್‌ಗೆ ಇದು ಅಪಚಾರವಾಗಿ ಕಂಡಿದೆ.

ತಾನ್ಯಾ ಮಿತ್ತಲ್ ವಿರುದ್ಧ ಚಂದ್ರಿಕಾ ಕಿಡಿ

ಈ ಬಗ್ಗೆ ವಿಡಿಯೋ ಹಂಚಿಕೊಂಡಿರುವ ಚಂದ್ರಿಕಾ, "ತಾನ್ಯಾ ಮಿತ್ತಲ್ ಅವರ ಮೇಲೆ ನನಗೆ ವೈಯಕ್ತಿಕ ದ್ವೇಷವಿಲ್ಲ. ಆದರೆ ಒಂದು ವಿಷಯ ನನ್ನನ್ನು ಕಾಡುತ್ತಿದೆ. ಆಕೆ ಕಾರ್ಯಕ್ರಮದ ಮಧ್ಯೆ ಬೇರೆಯವರ ಮುಖ ಒರೆಸುತ್ತಿದ್ದರು, ಅದು ಒಳ್ಳೆಯ ಕೆಲಸವೇ ಇರಬಹುದು. ಆದರೆ, ಆ ಸೆರಗಿನ ಮೇಲೆ ರಾಮ-ಸೀತೆಯ ಫೋಟೋ ಇತ್ತು ಎಂಬುದು ನೆನಪಿರಲಿ" ಎಂದಿದ್ದಾರೆ.

ಮುಂದುವರಿದು ಮಾತನಾಡಿದ ಅವರು, "ತಾನ್ಯಾ ಅವರೇ, ಒಂದೋ ನೀವು ಪ್ರಜ್ಞಾವಸ್ಥೆಯಲ್ಲಿ ಇರಲಿಲ್ಲ ಅಥವಾ ಅವರು ದೊಡ್ಡ ನಿರ್ಮಾಪಕಿ ಏಕ್ತಾ ಕಪೂರ್ ಎಂಬ ಕಾರಣಕ್ಕೆ ಎಲ್ಲವೂ ಸರಿ ಎಂದು ನೀವು ಭಾವಿಸಿದ್ದೀರಾ? ರಾಮ-ಸೀತೆ ಇರುವ ಸೆರಗಿನಿಂದ ಬೆವರಿನ ಮುಖವನ್ನು ಒರೆಸಲಾಗುತ್ತಿದೆ. ಆದರೂ ಯಾರೂ ನಿಮ್ಮನ್ನು ಪ್ರಶ್ನಿಸುತ್ತಿಲ್ಲ, ಹೊಗಳುತ್ತಿದ್ದಾರೆ. ಸತ್ಯ ಹೇಳಬೇಕೆಂದರೆ, ಇದೇ ಕೆಲಸವನ್ನು ನಾನು ಮಾಡಿದ್ದರೆ ಅಥವಾ ನನ್ನ ಬೆವರನ್ನು ಆ ಸೆರಗಿನಿಂದ ಒರೆಸಿಕೊಂಡಿದ್ದರೆ, ಈ ಮೀಡಿಯಾದವರು ನನ್ನನ್ನು ಜೀವಂತ ಬಿಡುತ್ತಿರಲಿಲ್ಲ. ನನ್ನನ್ನು ಸಾಯಿಸಿ ಮಣ್ಣು ಮಾಡುತ್ತಿದ್ದರು" ಎಂದು ಆಕ್ರೋಶ ಹೊರಹಾಕಿದ್ದಾರೆ.

ಸುದ್ದಿಯಲ್ಲಿರುವ ಚಂದ್ರಿಕಾ

ಚಂದ್ರಿಕಾ ದೀಕ್ಷಿತ್ ಇತ್ತೀಚೆಗಷ್ಟೇ ತಮ್ಮ ವೈವಾಹಿಕ ಜೀವನದ ಬಿರುಕಿನಿಂದಾಗಿ ಸುದ್ದಿಯಾಗಿದ್ದರು. ಪತಿ ಯುಗಮ್ ಗೆರಾ ವಿರುದ್ದ ಅವರು ಅಕ್ರಮ ಸಂಬಂಧದ ಆರೋಪ ಮಾಡಿದ್ದರು ಪ್ರಸ್ತುತ ಚಂದ್ರಿಕಾ ಅವರು ಪತಿಯೊಂದಿಗೆ ಮತ್ತೆ ಒಂದಾಗುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ವಿಶೇಷವೆಂದರೆ, ಚಂದ್ರಿಕಾ ಅವರಂತೆ ತಾನ್ಯಾ ಮಿತ್ತಲ್ ಕೂಡ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದರು. ಈಗ ತಾನ್ಯಾ ಅವರು ಏಕ್ತಾ ಕಪೂರ್ ಅವರ ಹೊಸ ಶೋ ಮೂಲಕ ನಟನಾ ಕ್ಷೇತ್ರಕ್ಕೂ ಬರುತ್ತಿದ್ದಾರೆ.

View post on Instagram