ಕೊರೋನಾ ವೈರಸ್ ಜಗತ್ತಿನುದ್ದಗಲಕ್ಕೂ ಹರಡಲು ಆರಂಭಿಸಿದ ಬಳಿಕ ಲಾಕ್‌ಡೌನ್ ಕಾರಣದಿಂದಾಗಿ ಎಲ್ಲರೂ ಮನೆಯೊಳಗೇ ಉಳಿದಿದ್ದಾರೆ. ತೀರಾ ಅಗತ್ಯವಲ್ಲದೆ ಯಾರೂ ಕೂಡಾ ಮನೆಯಿಂದ ಹೊರಗೆ ಕಾಲಿಡುವ ಧೈರ್ಯ ಮಾಡುತ್ತಿಲ್ಲ. ಹಾಗೊಂದು ವೇಳೆ ಹೊರ ಹೋಗಬೇಕೆಂದರೂ ಮಾಸ್ಕ್ ಕಡ್ಡಾಯಗೊಳಿಸಿ ಸರ್ಕಾರ ಆದೇಶ ಹೊರಡಿಸಿರುವುದು ಗೊತ್ತೇ ಇದೆ. ಇಂಥ ಸಂದರ್ಭದಲ್ಲಿ ಮಹಿಳೆಯರ ಕಡೆಗಣನೆಗೆ ಒಣಗಾಗಿರುವುದು ಲಿಪ್‌ಸ್ಟಿಕ್. ಕಾಣುವುದೇ  ಇಲ್ಲ ಎಂದ ಮೇಲೆ ಹಚ್ಚಿ ಉಪಯೋಗವಾದರೂ ಏನು? ಹಾಗಾಗಿ, ಈಗ ಯುವತಿಯರು ಕಣ್ಣಿನ ಮೇಕಪ್‌ಗೆ ಮಾತ್ರ ಹೆಚ್ಚಿನ ಮಹತ್ವ ಕೊಡುತ್ತಿದ್ದಾರೆ. ಅಷ್ಟೇ ಅಲ್ಲ, ಮಾಸ್ಕ್‌ನ್ನೇ ಫ್ಯಾಷನ್ ಆ್ಯಕ್ಸೆಸರಿಯಾಗಿ ಬಳಸಲು ಆರಂಭಿಸಿದ್ದಾರೆ. 

ಲಾಕ್ಡೌನ್ ಮುಗಿದರೂ ಬಹುತೇಕ ಕಂಪನಿಗಳು ವರ್ಕ್ ಫ್ರಂ ಹೋಂ ಆಯ್ಕೆ ಮುಂದುವರಿಸಲು ಬಯಸಿವೆ. ಹಾಗೊಂದು ವೇಳೆ ಕಚೇರಿಗೆ ಬರಬೇಕೆಂದರೂ ಮಾಸ್ಕ್ ಕಡ್ಡಾಯಗೊಳಿಸಿವೆ. ಹೀಗಾಗಿ, ಈ ಲಿಪ್‌ಸ್ಟಿಕ್ ಕಡೆಗಣನೆ ಇಂದು ನಾಳೆಗೆ ಮುಗಿಯುವಂತೆ ಕಾಣುತ್ತಿಲ್ಲ. ಇನ್ನೊಂದು ವರ್ಷವಾದರೂ ಮುಂದುವರಿಯುವ ಸೂಚನೆ ಇದೆ. ಇದನ್ನು ಕಾಸ್ಮೆಟಿಕ್ ಕಂಪನಿಗಳೂ ಸೂಕ್ಷ್ಮವಾಗಿ ಗಮನಿಸಿವೆ. ಹಾಗಾಗಿ, ಅವೆಲ್ಲ ಗ್ರಾಹಕರಲ್ಲಿ ಐಲೈನರ್ಸ್, ಮಸ್ಕಾರಾ, ಐ ಶಾಡೋಗಳ ಬಗ್ಗೆ ಹೆಚ್ಚು ಪ್ರಚಾರ ಮಾಡಲು ತೊಡಗಿವೆ. 

ತಾಯಿಯಾದ ಮೇಲೂ ತ್ವಚೆಯ ರಂಗು ಕಾಪಾಡಿಕೊಳ್ಳುವುದು ಹೇಗೆ?

ಕಣ್ಣುಗಳ ಮೇಕಪ್‌ಗೆ ಗಮನ
ಈ ಬದಲಾದ ಟ್ರೆಂಡ್ ಬಗ್ಗೆ ಮಾತನಾಡುವ ಲೋರಿಯಲ್ ಪ್ಯಾರಿಸ್‌ನ ನಿರ್ದೇಶಕಿ ಕವಿತಾ ಆಂಗ್ರೆ, 'ಮನೆಯಲ್ಲೇ ಕೆಲಸ ಮಾಡುತ್ತಿರುವ ಜನರಿಗೆ ಲಿಪ್‌ಸ್ಟಿಕ್ ಬಳಸುವ ಅಗತ್ಯವೇ ಬೀಳುತ್ತಿಲ್ಲ. ಕೇವಲ ವಿಡಿಯೋ ಕಾಲ್ ಪ್ರೆಸೆಂಟೇಶನ್ ಇದ್ದಾಗ ಅವರು ಲಿಪ್‌ಸ್ಟಿಕ್ ಬಳಸುತ್ತಿದ್ದಾರೆ. ಹಾಗಾಗಿ, ಐ ಮೇಕಪ್ ಕಡೆ ಯುವತಿಯರ ಗಮನ ಹೆಚ್ಚು ಹರಿಯುವುದನ್ನು ಮನಗಂಡಿದ್ದೇವೆ' ಎನ್ನುತ್ತಾರೆ. 


ಹೌದು, ಕಣ್ಣುಗಳು ಎಲ್ಲರನ್ನೂ ಆಕರ್ಷಿಸುವಲ್ಲಿ, ಮಾತನಾಡುವಲ್ಲಿ ತುಟಿಗಳಿಗಿಂತ ಯಾವಾಗಲೂ ಒಂದು  ಕೈ ಮುಂದೆಯೇ. ಈಗ ಮಾಸ್ಕ್ ಬೇರೆ ತೊಟ್ಟುಕೊಳ್ಳುವಾಗ ಕಣ್ಣಿನಲ್ಲೇ ಭಾವನೆಗಳನ್ನು ಎಕ್ಸ್‌ಪ್ರೆಸ್ ಮಾಡುವುದು ಹೆಚ್ಚುತ್ತದೆ. ಅಂದ ಮೇಲೆ ಎಲ್ಲರ ಗಮನ ಕಣ್ಣುಗಳ ಮೇಲೇ ಹೆಚ್ಚಾಗಿ ಇರುತ್ತದೆ. ಸಹಜವಾಗಿಯೇ ಕಣ್ಣುಗಳ ಅಂದ ಹೆಚ್ಚಿಸಿಕೊಳ್ಳುವತ್ತ ಯುವತಿಯರು ಹೆಚ್ಚಿನ ಪ್ರಯತ್ನ ಹಾಕುತ್ತಾರೆ. 

ಲಿಪ್ ಮೇಕಪ್ ಶೇ.32
ಕಾಸ್ಮೆಟಿಕ್ ಮಾರುಕಟ್ಟೆಯಲ್ಲಿ ಐ ಮೇಕಪ್ ಶೇ.36 ಪಾಲನ್ನು ಹೊಂದಿದ್ದರೆ, ನಂತರದ ಸ್ಥಾನದಲ್ಲಿರುವ ಲಿಪ್‌ಸ್ಟಿಕ್ ಮೇಕಪ್ ಶೇ.32 ಪಾಲು ಹೊಂದಿದೆ. ಅಂದರೆ ಮುಖದ ಅಂದ ಹೆಚ್ಚಿಸಲು ಐ ಲೈನರ್ ಹಾಗೂ ಲಿಪ್‌ಸ್ಟಿಕ್‌ಗಳ ಪಾತ್ರವೇ ಹೆಚ್ಚು. ಇದೀಗ  ಟಾಪ್ 5 ಕೆಟಗರಿಯಲ್ಲಿ ಐ ಶಾಡೋ ಮಾರಾಟ ಟಾಪ್ 3ಗೆ ಏರಿದೆಯಂತೆ. 'ಮಹಿಳೆಯರಿಗೆ ತಮ್ಮ ಮೇಕಪ್ ಅಭ್ಯಾಸದ ಜೊತೆಗೊಂದು ವಿಶೇಷ ಸಂಬಂಧವೇರ್ಪಟ್ಟಿರುತ್ತದೆ. ಕೇವಲ ಸಾಮಾಜಿಕವಲ್ಲ, ಭಾವನಾತ್ಮಕವಾಗಿಯೂ ಅವರು ಮೇಕಪ್‌ನೊಂದಿಗೆ ಗುರುತಿಸಿಕೊಳ್ಳುತ್ತಿರುತ್ತಾರೆ. ಹಾಗಾಗಿ, ಲಿಪ್‌ಸ್ಟಿಕ್ ಮಾರುಕಟ್ಟೆ ಸುಲಭವಾಗಿ ಬಿದ್ದುಹೋಗುವಂಥದ್ದಲ್ಲ. ಸಧ್ಯ ಮಾರಾಟ ಕುಸಿದಿದೆಯಾದರೂ ಇದು ಖಂಡಿತಾ ಚೇತರಿಸಿಕೊಳ್ಳುತ್ತದೆ' ಎನ್ನುವುದು ನೈಕಾ ಕಂಪನಿಯ ಭರವಸೆ. 

ಅನನ್ಯಾ ಪಾಂಡೆ ಆನ್‌ಲೈನ್‌ ವರ್ಕೌಟ್‌; ಯಾರಾದ್ರೂ ಪುಶ್‌ ಮಾಡೋರು ಬೇಕಂತ ...

ಇಷ್ಟಕ್ಕೂ ಮನುಷ್ಯ ಸಾಮಾಜಿಕ ಜೀವಿ. ಲಾಕ್‌ಡೌನ್, ಕೊರೋನಾ ಭಯವೆಲ್ಲ ತಾತ್ಕಾಲಿಕವಷ್ಟೇ. ಮತ್ತೆ ಎಲ್ಲರೂ ಜನರೊಂದಿಗೆ  ಬೆರೆಯಲೇ ಬೇಕು. ಹಾಗೆ ಬೆರೆಯಲು ಹೊಸ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಲೇ ಇರುತ್ತೇವೆ. ಅಂದ ಮೇಲೆ ಒಂದಿಲ್ಲೊಂದು ರೀತಿಯಲ್ಲಿ ಲಿಪ್‌ಸ್ಟಿಕ್ ಕೂಡಾ ತನ್ನ ಗತವೈಭವವನ್ನು ಮರಳಿ ಸಾಧಿಸಲೇಬೇಕು. ಇಷ್ಟಕ್ಕೂ ಲಿಪ್‌ಸ್ಟಿಕ್ ಎಂಬುದು ಕೇವಲ ಮೇಕಪ್ ಅಲ್ಲ, ಅದು ಬಹಳಷ್ಟು ಹುಡುಗಿಯರಿಗೆ ಮೂಡ್ ಬೂಸ್ಟರ್. 

ಲಿಪ್‌ಸ್ಟಿಕ್‌ನಿಂದ ಲಿಪ್‌ಕೇರ್‌ನತ್ತ
ಈ ಕೊರೋನಾ ಭಯವು ಜನರಲ್ಲಿ ಸ್ವಚ್ಛತೆ ಹಾಗೂ ವೈಯಕ್ತಿಕ ಕಾಳಜಿಯ ಬಗ್ಗೆ ಹೆಚ್ಚು ಗಮನ ಹರಿಸುವಂತೆ ಮಾಡಿದೆ. ಹಾಗಾಗಿ, ಜನರು ಲಿಪ್‌ಸ್ಟಿಕ್ ಬಳಕೆ ಬಿಟ್ಟರೂ ತುಟಿಗಳನ್ನು ಮಾಯಿಶ್ಚರ್ ಮಾಡುವ ಲಿಪ್‌ಕೇರ್ ಬಳಕೆ ಹೆಚ್ಚಿಸುತ್ತಾರೆ. ಜೊತೆಗೆ ಫೇಸ್‌ಕ್ರೀಂ, ಫೇಸ್‌ವಾಶ್‌, ಶಾಂಪೂಗಳ ಬಳಕೆಯೂ ಹೆಚ್ಚಲಿದೆ ಎಂಬುದು ಬಹುತೇಕ ಕಾಸ್ಮೆಟಿಕ್ ಕಂಪನಿಗಳ ಲೆಕ್ಕಾಚಾರ.