ನಾವು ಇಂದಿಗೂ ಕೆಲವೊಂದು ಆಚರಣೆಗಳನ್ನು ಅದರ ಹಿಂದಿನ ವೈಜ್ಞಾನಿಕ ಕಾರಣಗಳನ್ನು ತಿಳಿಯದೆ ಅನುಸರಿಸುತ್ತೇವೆ. ಕೆಲವೊಂದು ಆಚರಣೆಗಳ ಹಿಂದೆ ವೈಜ್ಞಾನಿಕ ಕಾರಣಗಳಿರುತ್ತವೆ, ಇನ್ನೂ ಕೆಲವು ಆಚರಣೆಗಳನ್ನು ಹಿರಿಯರು ಅನುಸರಿಸುತ್ತಿದ್ದರು ಎಂಬ ಕಾರಣಕ್ಕೆ ಮಾಡುತ್ತೇವೆ. ಹಳ್ಳಿಗಳಲ್ಲಿ ಇಂದಿಗೂ ಸೂರ್ಯಾಸ್ತದ ಬಳಿಕ ಕೂದಲು ಬಾಚುವುದು ನಿಷಿದ್ಧ. ಅದೇರೀತಿ ರಾತ್ರಿ ವೇಳೆಯಲ್ಲಿ ಮಹಿಳೆಯರು ಕೂದಲನ್ನು ಇಳಿಬಿಡಬಾರದು ಎಂದು ಕೂಡ ಮನೆಯ ಹಿರಿಯರು ಎಚ್ಚರಿಸುತ್ತಾರೆ. ಅಮ್ಮ ಹೇಳಿದಳು ಎಂಬ ಕಾರಣಕ್ಕೆ ಮಗಳು ಕೂಡ ರಾತ್ರಿ ಕೂದಲು ಬಾಚುವುದಿಲ್ಲ. ಹಾಗಾದ್ರೆ ಹಾಗೇ ಹೇಳಲು ಕಾರಣವೇನು? ಅದರ ಹಿಂದಿರುವ ನಂಬಿಕೆಗಳೇನು?

ಕೂದಲು ಉದುರಬಾರದು ಅಂದ್ರೆ ಈ ಅಭ್ಯಾಸವನ್ನು ಬಿಟ್ಟುಬಿಡಿ!

ಸೂರ್ಯಾಸ್ತದ ಬಳಿಕ ಕೂದಲು ಬಾಚಬಾರದು: ದುಷ್ಟ ಶಕ್ತಿಗಳು ಸೂರ್ಯಾಸ್ತದ ಬಳಿಕ ತಿರುಗಾಡಲು ಪ್ರಾರಂಭಿಸುತ್ತವೆ. ಕತ್ತಲಿನಲ್ಲಿ ಇವು ಹೆಚ್ಚು ಪ್ರಭಾವಶಾಲಿಯಾಗಿದ್ದು, ಸುಂದರ ಮತ್ತು ಉದ್ದವಾದ ಕೇಶರಾಶಿ ಹೊಂದಿರುವ ಮಹಿಳೆಯರತ್ತ ಆಕರ್ಷಿತವಾಗುತ್ತವೆ ಎಂಬ ನಂಬಿಕೆಯಿಂದ ಸೂರ್ಯಾಸ್ತದ ಬಳಿಕ ಕೂದಲು ಬಾಚಬಾರದು ಎನ್ನುತ್ತಾರೆ.

ಓಪನ್ ಹೇರ್ ಏಕೆ ಬೇಡ?: ಸೂರ್ಯಾಸ್ತದ ಬಳಿಕ ಹಾಗೂ ಪೂಜೆಯ ಸಮಯದಲ್ಲಿ ಕೂದಲನ್ನು ಇಳಿ ಬಿಡದೆ ಕಟ್ಟಿಕೊಳ್ಳುವಂತೆ ಹಿರಿಯರು ಹೆಣ್ಣುಮಕ್ಕಳಿಗೆ ಸೂಚಿಸುತ್ತಾರೆ. ಕೂದಲನ್ನು ಇಳಿಬಿಡುವುದರಿಂದ ದುಷ್ಟ ಶಕ್ತಿಗಳು ಕುಟುಂಬದ ಮೇಲೆ ಕೆಟ್ಟ ದೃಷ್ಟಿ ಬೀರುತ್ತವೆ ಎಂಬುದು ಅವರ ನಂಬಿಕೆ.

ಕೂದಲು ಎಸೆಯುವಾಗ ಕೇರ್‍ಫುಲ್ ಆಗಿರಬೇಕು: ಕೂದಲು ಬಾಚಿದ ಬಳಿಕ ಅದನ್ನು ಸುರಕ್ಷಿತವಾದ ಜಾಗದಲ್ಲಿ ಎಸೆಯಬೇಕು. ಈ ಜಾಗದ ಬಗ್ಗೆ ಹೊರಗಿನವರಿಗೆ ತಿಳಿದಿರಬಾರದು. ಏಕೆಂದರೆ ಒಂದು ವೇಳೆ ನಿಮ್ಮ ಕೂದಲು ಮಾಟ ಮಂತ್ರ ಮಾಡುವ ವ್ಯಕ್ತಿಗಳ ಕೈಗೆ ಸಿಕ್ಕಿದರೆ ನಿಮಗೆ ಕೆಟ್ಟದಾಗುತ್ತದೆ ಎಂಬ ನಂಬಿಕೆ.

ಹುಣ್ಣಿಮೆ ರಾತ್ರಿ ಕೂದಲು ಬಾಚಬಾರದು: ಹುಣ್ಣಿಮೆ ದಿನ ಕಿಟಕಿ ಸಮೀಪ ನಿಂತು ಕೂದಲು ಬಾಚಬಾರದು. ಹೀಗೆ ಮಾಡುವುದರಿಂದ ನೀವು ದುಷ್ಟ ಶಕ್ತಿಗಳಿಗೆ ಆಹ್ವಾನ ನೀಡಿದಂತಾಗುತ್ತದೆ ಎಂಬ ನಂಬಿಕೆ ಕೆಲವರಲ್ಲಿದೆ.

ಬೀಟ್ರೂಟ್‌ನಿಂದ ಕೂದಲನ್ನು ಕಲರ್ ಮಾಡಿಕೊಳ್ಳುವುದು ಹೀಗೆ!

ಮುಟ್ಟಿನ ದಿನ ತಲೆಬಾಚಬಾರದು: ಮುಟ್ಟಿನ ಮೊದಲ ದಿನ ತಲೆಬಾಚಿದರೆ ಆ ಮಹಿಳೆಗೆ ಹುಚ್ಚು ಹಿಡಿಯುವ ಸಾಧ್ಯತೆ ಅಧಿಕ ಎಂದು ಕೆಲವರು ಹೇಳುತ್ತಾರೆ. ಇನ್ನು ಮುಟ್ಟಿನ ದಿನಗಳಲ್ಲಿ ರಾತ್ರಿ ಸ್ನಾನ ಮಾಡಬಾರದು. ಏಕೆಂದರೆ ರಾತ್ರಿ ಸ್ನಾನ ಮಾಡುವುದರಿಂದ ಹೆಚ್ಚಿನ ರಕ್ತಸ್ರಾವವಾಗುತ್ತದೆ ಎಂಬ ನಂಬಿಕೆಯಿದೆ.

ಬಾಚಣಿಗೆ ಬೀಳಿಸಬಾರದು: ಕೂದಲನ್ನು ಬಾಚುವಾಗ ಬಾಚಣಿಗೆಯನ್ನು ಕೆಳಗೆ ಬೀಳಿಸಿದರೆ ನೀವು ಸದ್ಯದಲ್ಲೇ ಕೆಟ್ಟ ಸುದ್ದಿಯನ್ನು ಕೇಳುತ್ತೀರಿ ಎನ್ನುತ್ತಾರೆ.

ಮನೆ ಸುತ್ತಮುತ್ತ ಕೂದಲಿರಬಾರದು: ಮನೆಯ ಸುತ್ತಮುತ್ತ ಕೂದಲನ್ನು ಎಸೆಯಬಾರದು. ಇದರಿಂದ ಮನೆಯ ಸದಸ್ಯರ ನಡುವೆಯೇ ಜಗಳವೇರ್ಪಡುವ ಸಾಧ್ಯತೆಯಿದೆ ಎಂದು ನಂಬಲಾಗುತ್ತದೆ. 

ಕೂದಲು ಮತ್ತು ಉಗುರು ಸೇರಬಾರದು: ಮನೆಯೊಳಗಡೆ ಕೂದಲು ಮತ್ತು ಉಗುರು ಒಟ್ಟಿಗೆ ಸೇರಬಾರದು. ಸೇರಿದರೆ ಆ ಮನೆಗೆ ಕೆಟ್ಟದ್ದಾಗುತ್ತದೆ ಎಂಬ ನಂಬಿಕೆಯಿದೆ. ಇದೇ ಕಾರಣಕ್ಕೆ ಕತ್ತರಿಸಿದ ಉಗುರನ್ನು ಜೋಪಾನವಾಗಿ ಒಟ್ಟು ಸೇರಿಸಿ ಹೊರಗೆ ಎಸೆಯಬೇಕು ಎಂದು ಹಿರಿಯರು ಹೇಳುವುದು. ಕೂದಲು ಬಾಚಿದ ಬಳಿಕ ಅದನ್ನು ಕೂಡ ಹೊರಗೆ ಎಸೆಯಬೇಕು ಎನ್ನುತ್ತಾರೆ. ಆರೋಗ್ಯದ ದೃಷ್ಟಿಯಿಂದ ನೋಡಿದರೆ ಕೂದಲು ಮತ್ತು ಉಗುರು ಎರಡೂ ಹಾನಿಕಾರಕ.

ನಿಮ್ಮ ಮನೆಯಲ್ಲೊಂದು ಬೋಳುಗುಂಡ ಇದ್ಯಾ? ಕೂದಲು ಉದುರುವುದಕ್ಕೆ ಕಾರಣಗಳಿವು

ವೈಜ್ಞಾನಿಕ ಕಾರಣವೂ ಇದೆ: ಕೂದಲು ಆರೋಗ್ಯಕ್ಕೆ ಹಾನಿಕಾರಕ. ಮನೆಯೊಳಗೆ ಕೂದಲು ಬಿದ್ದಿದ್ದರೆ ಅದು ಆಹಾರದೊಂದಿಗೆ ಸೇರಿ ಹೊಟ್ಟೆ ಸೇರುವ ಸಾಧ್ಯತೆಯಿದೆ. ಇದರಿಂದ ಮನೆಯ ಸದಸ್ಯರಿಗೆ ಅನಾರೋಗ್ಯ ಕಾಡಬಹುದು. ಕೂದಲು ವಿಷಕಾರಿ ಎಂಬ ಅಂಶವನ್ನು ಅನೇಕ ಅಧ್ಯಯನಗಳು ಸಾಬೀತುಪಡಿಸಿವೆ. ಮಾನವನ ಕೂದಲು ಕೆರಟಿನ್ ಎಂಬ ಪ್ರೋಟೀನ್‍ನಿಂದ ಮಾಡಲ್ಪಟ್ಟಿರುತ್ತದೆ. ಉಗುರು ಮತ್ತು ಚರ್ಮದ ಹೊರಪದರಲ್ಲಿ ಕೂಡ ಕೆರಟಿನ್ ಇರುತ್ತದೆ. ಈ ಕೆರಟಿನ್ ನೇರವಾಗಿ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರದಿರಬಹುದು. ಆದರೆ, ಆಹಾರದೊಂದಿಗೆ ಸೇರಿ ಅದನ್ನು ವಿಷಕಾರಿಯನ್ನಾಗಿ ಮಾಡಬಲ್ಲದು.

ಇದರಿಂದ ಟೈಫಾಯಿಡ್, ಕಾಮಾಲೆ, ಕಾಲರದಂತಹ ರೋಗಗಳುಂಟಾಗುವ ಸಾಧ್ಯತೆಯಿದೆ. ಆಹಾರದಲ್ಲಿ ಮೈಕ್ರೋಆರ್ಗನಿಸಂಗಳು ಬೆಳೆಯಲು ಕೂದಲು ಕಾರಣವಾಗಬಲ್ಲದು. ಕೂದಲಿಗೆ ಅಂಟಿಕೊಂಡಿರುವ ಎಣ್ಣೆ, ಬೆವರು, ಕೆಮಿಕಲ್ಸ್‍ಗಳು ಆಹಾರವನ್ನು ವಿಷಕಾರಿಯನ್ನಾಗಿ ಮಾಡಬಲ್ಲವು. ರಿಂಗ್‍ವಾರ್ಮ್‍ನಂತಹ ಫಂಗಸ್‍ಗೆ ಸಂಬಂಧಿಸಿದ ಕಾಯಿಲೆಗಳು ಕೂಡ ಕೂದಲಿನಿಂದ ವರ್ಗಾವಣೆಯಾಗುವ ಸಾಧ್ಯತೆಗಳಿವೆ ಎಂಬುದನ್ನು ವೈದ್ಯಕೀಯ ವಿಜ್ಞಾನ ಸಾಬೀತುಪಡಿಸಿದೆ.