ಭಾರತವು ಜಾಗತಿಕ ಫ್ಯಾಷನ್ ಉದ್ಯಮದ ಪ್ರಮುಖ ಕೇಂದ್ರವಾಗಿ ಬೆಳೆಯುತ್ತಿದ್ದು, ವಿಶ್ವದ ಅಗ್ರ ಬ್ರ್ಯಾಂಡ್‌ಗಳು ಇಲ್ಲಿಗೆ ಲಗ್ಗೆ ಇಡುತ್ತಿವೆ. ಮೆಟ್ರೋ ನಗರಗಳಷ್ಟೇ ಅಲ್ಲದೆ, ಸಣ್ಣ ನಗರಗಳಿಂದಲೂ ಪ್ರೀಮಿಯಂ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ರಿಲಯನ್ಸ್‌ನಂತಹ ಭಾರತೀಯ ಕಂಪನಿಗಳು ಈ ವಿಸ್ತರಣೆಗೆ ಸಹಕರಿಸುತ್ತಿವೆ.

ಭಾರತವು ಜಾಗತಿಕ ಫ್ಯಾಷನ್ ಉದ್ಯಮದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಶಕ್ತಿ ಕೇಂದ್ರವಾಗಿ ಹೊರಹೊಮ್ಮುತ್ತಿದೆ. ವಿಶ್ವದ ಅಗ್ರ 50 ಫ್ಯಾಷನ್ ಬ್ರ್ಯಾಂಡ್‌ಗಳಲ್ಲಿ ಶೇ. 90ರಷ್ಟು ಸಂಸ್ಥೆಗಳು ಈಗಾಗಲೇ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿವೆ ಇನ್ನು ಕೆಲವು ಪ್ರವೇಶಿಸಲು ಸನ್ನದ್ಧವಾಗಿದೆ. ಪ್ರಸ್ತುತ ಭಾರತದ ಲೈಫ್‌ಸ್ಟೈಲ್ ಮಾರುಕಟ್ಟೆಯ ಮೌಲ್ಯವು ಸುಮಾರು 130 ಬಿಲಿಯನ್ ಡಾಲರ್ ಅಂದರೆ ಅಂದಾಜು ₹12.38 ಲಕ್ಷ ಕೋಟಿ ತಲುಪಿದ್ದು, ಈ ಬೃಹತ್ ಮಾರುಕಟ್ಟೆಯಲ್ಲಿ ಫ್ಯಾಷನ್ ರಂಗ ಒಂದೇ ಶೇ. 80ರಷ್ಟು ಪಾಲನ್ನು ಆಕ್ರಮಿಸಿಕೊಂಡಿದೆ.

ಸಣ್ಣ ನಗರಗಳಲ್ಲಿ ಹೆಚ್ಚುತ್ತಿರುವ ಬೇಡಿಕೆ

ಅಂತರರಾಷ್ಟ್ರೀಯ ಬ್ರ್ಯಾಂಡ್‌ಗಳ ಈ ಅಭೂತಪೂರ್ವ ವಿಸ್ತರಣೆಯು ಕೇವಲ ದೆಹಲಿ, ಮುಂಬೈ, ಬೆಂಗಳೂರಿನಂತಹ ಮೆಟ್ರೋ ನಗರಗಳಿಗೆ ಮಾತ್ರ ಸೀಮಿತವಾಗಿಲ್ಲ. ಇ-ಕಾಮರ್ಸ್ ದೈತ್ಯ ಸಂಸ್ಥೆಯಾದ ಮಿಂತ್ರಾ ನೀಡಿರುವ ವರದಿಯ ಪ್ರಕಾರ, ಜಾಗತಿಕ ಫ್ಯಾಷನ್ ಉತ್ಪನ್ನಗಳಿಗೆ ಒಟ್ಟು ಬೇಡಿಕೆಯಲ್ಲಿ ಶೇ. 45ರಷ್ಟು ಪಾಲು ಟೈಯರ್-2 ಮತ್ತು ಸಣ್ಣ ನಗರಗಳಿಂದಲೇ ಬರುತ್ತಿದೆ. ಅಂದರೆ, ಅಂತರರಾಷ್ಟ್ರೀಯ ಉಡುಪು ಹಾಗೂ ಆಕ್ಸೆಸರೀಸ್‌ಗಳನ್ನು ಖರೀದಿಸುವ ಪ್ರತಿ ಮೂವರು ಗ್ರಾಹಕರಲ್ಲಿ ಒಬ್ಬರು ಸಣ್ಣ ಪಟ್ಟಣಕ್ಕೆ ಸೇರಿದವರಾಗಿದ್ದಾರೆ.

ಪ್ರೀಮಿಯಂ ಗ್ರಾಹಕರ ನೆಲೆ

ಸಾಮಾನ್ಯವಾಗಿ ವಿದೇಶಿ ಕಂಪನಿಗಳು ಭಾರತೀಯ ಮಾರುಕಟ್ಟೆಗೆ ಕಾಲಿಡುವಾಗ ಗ್ರಾಹಕರನ್ನು ಆಕರ್ಷಿಸಲು ಬೆಲೆಗಳನ್ನು ತಗ್ಗಿಸುವುದು ವಾಡಿಕೆ. ಆದರೆ, ಈ ಫ್ಯಾಷನ್ ಕ್ಷೇತ್ರದಲ್ಲಿ ಸಂಪೂರ್ಣ ಭಿನ್ನವಾದ ಚಿತ್ರಣ ಕಾಣುತ್ತಿದೆ. ಜಾಗತಿಕ ಕಂಪನಿಗಳು ಬೆಲೆ ಕಡಿತ ಮಾಡುವ ಬದಲು ತಮ್ಮ ಉನ್ನತ ಮಟ್ಟದ ಪ್ರೀಮಿಯಂ ಸ್ಥಾನಮಾನವನ್ನು ಹಾಗೆಯೇ ಕಾಯ್ದುಕೊಂಡಿವೆ. ಉದಾಹರಣೆಗೆ, ಅಮೆರಿಕದ ಸ್ಕಿಮ್ಸ್ ಮತ್ತು ಬ್ರಿಟನ್‌ನ ಬೆನ್ ಶೆರ್ಮನ್ ಸಂಸ್ಥೆಗಳು ತಮ್ಮ ಜಾಗತಿಕ ಪ್ರೀಮಿಯಂ ದರದಲ್ಲೇ ಭಾರತದಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿವೆ. ಫೆಂಟಿ ಬ್ಯೂಟಿಯ ಕೆಲವು ಉತ್ಪನ್ನಗಳು ವಿದೇಶಿ ದರಗಳಿಗಿಂತಲೂ ಭಾರತದಲ್ಲಿ ಹೆಚ್ಚಿನ ಬೆಲೆ ಹೊಂದಿವೆ. ಇದರಿಂದ ವಿದೇಶಿ ಕಂಪನಿಗಳು ಭಾರತವನ್ನು ಕೇವಲ ರಿಯಾಯಿತಿ ಹುಡುಕುವವರ ಮಾರುಕಟ್ಟೆಯಾಗಿ ನೋಡದೆ, ಪ್ರೀಮಿಯಂ ಗ್ರಾಹಕರ ನೆಲೆ ಎಂಬ ಭರವಸೆಯೊಂದಿಗೆ ಸಾಗುತ್ತಿರುವುದು ಸ್ಪಷ್ಟವಾಗುತ್ತದೆ.

ಕೊರೊನಾ ಬಳಿಕ ವಿದೇಶಿ ಬ್ರ್ಯಾಂಡ್‌ಗಳ ಶರವೇಗದ ಎಂಟ್ರಿ!

ಕೊರೊನಾ ಸಾಂಕ್ರಾಮಿಕದ ನಂತರ ವಿದೇಶಿ ಬ್ರ್ಯಾಂಡ್‌ಗಳು ಭಾರತದ ಮಾರುಕಟ್ಟೆಗೆ ಪ್ರವೇಶಿಸಿರುವ ವೇಗ ದುಪ್ಪಟ್ಟಾಗಿದೆ. ಕೊರೊನಾ ಪೂರ್ವದಲ್ಲಿ ವರ್ಷಕ್ಕೆ ಸರಾಸರಿ 12 ವಿದೇಶಿ ಫ್ಯಾಷನ್ ಕಂಪನಿಗಳು ಭಾರತಕ್ಕೆ ಕಾಲಿಡುತ್ತಿದ್ದವು. ಈ ಸಂಖ್ಯೆಯು 2024ರಲ್ಲಿ 27ಕ್ಕೇರಿದರೆ, 2025ರಲ್ಲಿ 30 ನೂತನ ಬ್ರ್ಯಾಂಡ್‌ಗಳು ದೇಶಕ್ಕೆ ಪ್ರವೇಶಿಸಿವೆ. ಸ್ಪೇನ್ ಮೂಲದ ದೇಸಿಗ್ವಾಲ್ ಕಂಪನಿಯು ಆನ್‌ಲೈನ್ ಮೂಲಕ ತನ್ನ ಎಲ್ಲಾ ಉತ್ಪನ್ನಗಳ ವಿಸ್ತರಣೆಗೆ ಮುಂದಾಗಿದ್ದರೆ, ಹೆಚ್‌ಆಂಡ್‌ಎಮ್‌ಗೆ ಪ್ರತಿಸ್ಪರ್ಧಿಯಾಗಿರುವ ಸ್ಪೇನ್‌ನ ಬರ್ಷ್ಕಾ ಮುಂಬೈನಲ್ಲಿ ತನ್ನ ಮೊದಲ ಮಳಿಗೆಯನ್ನು ತೆರೆದಿದೆ. ಬ್ರಿಟನ್‌ನ ಬೆನ್ ಶೆರ್ಮನ್ ಸೂರತ್‌ನಲ್ಲಿ ಮೊದಲ ಎಕ್ಸ್‌ಕ್ಲೂಸಿವ್ ಸ್ಟೋರ್ ಆರಂಭಿಸಿದ್ದರೆ, ಫ್ರಾನ್ಸ್‌ನ ಪ್ರಸಿದ್ಧ ಗ್ಯಾಲರೀಸ್ ಲಫಯೆಟ್ಟೆ ಮತ್ತು ಇಟಲಿಯ OVS ಸಂಸ್ಥೆಗಳು ದೆಹಲಿ ಹಾಗೂ ಮುಂಬೈನಲ್ಲಿ ಪ್ರವೇಶ ಪಡೆದಿವೆ.

ರಿಲಯನ್ಸ್ ಕಂಪೆನಿಯಿಂದಲೇ ಹೆಚ್ಚು ಪರಿಚಯ!

ಈ ಬೃಹತ್ ಜಾಗತಿಕ ಜಾಲ ನಿರ್ಮಾಣಕ್ಕೆ ಭಾರತದ ಪ್ರಮುಖ ಚಿಲ್ಲರೆ ವ್ಯಾಪಾರ ದೈತ್ಯರು ಬಲವಾದ ನೆರವು ನೀಡಿದ್ದಾರೆ. ರಿಲಯನ್ಸ್ ಬ್ರಾಂಡ್ಸ್ ಸಂಸ್ಥೆಯು ಬಾಲೆನ್ಸಿಯಾಗ, ಅರ್ಮಾನಿ, ಡೀಸೆಲ್ ಮತ್ತು ಗ್ಯಾಪ್ ಸೇರಿದಂತೆ 90ಕ್ಕೂ ಹೆಚ್ಚು ಜಾಗತಿಕ ಬ್ರ್ಯಾಂಡ್‌ಗಳನ್ನು ಭಾರತಕ್ಕೆ ತಂದಿದೆ. ಆದಿತ್ಯ ಬಿರ್ಲಾ ಫ್ಯಾಷನ್ ಸಂಸ್ಥೆಯು ರಾಲ್ಫ್ ಲಾರೆನ್, ಹ್ಯಾಕೆಟ್ ಲಂಡನ್ ಜತೆ ಪಾಲುದಾರಿಕೆ ಹೊಂದಿದ್ದರೆ, ಮಿಂತ್ರಾ ಮತ್ತು ನೈಕಾ ಆನ್‌ಲೈನ್ ವೇದಿಕೆಗಳು 500ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಫ್ಯಾಷನ್ ಮತ್ತು ಸೌಂದರ್ಯ ಬ್ರ್ಯಾಂಡ್‌ಗಳನ್ನು ಭಾರತೀಯ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುತ್ತಿವೆ.