ನವದೆಹಲಿ(ಸೆ.15): ಭಾರತದಲ್ಲಿ ಕೊರೋನಾ ವೈರಸ್‌ ಆಟಾಟೋಪ ದಿನೇ ದಿನೇ ಆತಂಕಕಾರಿಯಾಗಿ ಹೆಚ್ಚುತ್ತಿದೆ. ಈ ನಡುವೆ ಲಾಕ್‌ಡೌನ್‌ನಿಂದ ಸ್ಥಗಿತಗೊಂಡಿದ್ದ ಉದ್ಯಮಗಳೆಲ್ಲ ನಿಧಾನವಾಗಿ ಪುನಾರಂಭವಾಗಿ ಎಲ್ಲವೂ ಸಹಜ ಸ್ಥಿತಿಗೆ ಮರಳುತ್ತಿದೆ. ಜನರ ಓಡಾಟ, ಗುಂಪುಗೂಡುವಿಕೆಯೂ ಹೆಚ್ಚುತ್ತಿದೆ. ಹಾಗಾಗಿ ಕೊರೋನಾ ವೈರಸ್‌ ನಿಗ್ರಹಕ್ಕೆ ಬರದೇ ಇರುವುದರಿಂದ ಕೇಂದ್ರ ಸರ್ಕಾರ ಮತ್ತೊಮ್ಮೆ ದೇಶಾದ್ಯಂತ ಲಾಕ್‌ಡೌನ್‌ ಘೋಷಿಸಲಿದೆ. ಸೆಪ್ಟೆಂಬರ್‌ 25ರಿಂದ 46 ದಿನ ದೇಶಾದ್ಯಂತ ಲಾಕ್‌ಡೌನ್‌ ಜಾರಿಯಾಗಲಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಹೆಸರಿನಲ್ಲಿ ಸುತ್ತೋಲೆಯೊಂದನ್ನು ಪೋಸ್ಟ್‌ ಮಾಡಿ ಹೀಗೆ ಹೇಳಲಾಗುತ್ತಿದೆ. ಅದರಲ್ಲಿ ದೇಶದಲ್ಲಿ ಕೋವಿಡ್‌ ಪ್ರಕರಣಗಳು ಶೀಘ್ರಗತಿಯಲ್ಲಿ ಏರಿಕೆಯಾಗುತ್ತಿರುವುದರಿಂದ ಮತ್ತೊಮ್ಮೆ ಸೆ.25ರಿಂದ 46 ದಿನಗಳ ಕಾಲ ಲಾಕ್‌ಡೌನ್‌ ಜಾರಿ ಮಾಡಬೇಕೆಂದು ಪ್ರಧಾನಿ ಕಚೇರಿ ಮತ್ತು ಕೇಂದ್ರ ಗೃಹ ಸಚಿವಾಲಯಕ್ಕೆ ಶಿಫಾರಸು ಮಾಡಲಾಗಿದೆ ಎಂದು ಹೇಳಲಾಗಿದೆ.

ಆದರೆ ನಿಜಕ್ಕೂ ಸೆ.25ರಿಂದ ಮತ್ತೆ ಲಾಕ್‌ಡೌನ್‌ ಜಾರಿಯಾಗುತ್ತಿದೆಯೇ ಎಂದು ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ ಎಂಬುದು ಖಚಿತವಾಗಿದೆ. ಈ ಸುದ್ದಿ ವೈರಲ್‌ ಆಗುತ್ತಿದ್ದಂತೆಯೇ ಕೇಂದ್ರ ಸರ್ಕಾರದ ನೋಡಲ್‌ ಸಂಸ್ಥೆಯಾಗಿರುವ ಪ್ರೆಸ್‌ ಇನ್ಫಾರ್ಮೇಶನ್‌ ಬ್ಯೂರೋ (ಪಿಐಬಿ) ಈ ಬಗ್ಗೆ ಸ್ಪಷ್ಟೀಕರಣ ನೀಡಿ, ಕೇಂದ್ರ ಸರ್ಕಾರ ಅಧಿಕೃತವಾಗಿ ಇಂಥ ಯಾವುದೇ ಆದೇಶ ಹೊರಡಿಸಿಲ್ಲ, ಎನ್‌ಡಿಆರ್‌ಎಫ್‌ ಸಹ ಇಂಥ ಯಾವುದೇ ಶೀಪಾರಸು ಮಾಡಿಲ್ಲ ಎಂದು ಹೇಳಿದೆ. ಹಾಗಾಗಿ ಮತ್ತೊಮ್ಮೆ ಲಾಕ್‌ಡೌನ್‌ ಎಂಬ ಸುದ್ದಿ ಸುಳ್ಳು.