Fact Check: ಬ್ಯಾಂಕ್ ಆಫ್ ಇಂಗ್ಲೆಂಡ್ ಗವರ್ನರಾಗಿ ರಘುರಾಮ್ ರಾಜನ್ ನೇಮಕವಾಗಿಲ್ಲ: ವೈರಲ್ ಮೆಸೇಜ್ ಸುಳ್ಳು!
ರಘುರಾಮ್ ರಾಜನ್ ಅವರನ್ನು ಬ್ಯಾಂಕ್ ಆಫ್ ಇಂಗ್ಲೆಂಡ್‌ನ ಗವರ್ನರ್ ಆಗಿ ನೇಮಿಸಲಾಗಿದೆ ಎಂಬ ಹೇಳಿಕೆಗಳು ಸುಳ್ಳು ಎಂದು ಫ್ಯಾಕ್ಟ್ ಚೆಕ್‌ನಲ್ಲಿ ತಿಳಿದುಬಂದಿದೆ. 2019 ರಲ್ಲಿ ಈ ಹುದ್ದೆಗೆ ರಾಜನ್ ರೇಸ್‌ನಲ್ಲಿದ್ದರು ಎಂದು ವರದಿಯಾಗಿತ್ತಯ ಆದರೆ ಅವರು ಕೆಲಸಕ್ಕೆ ಅರ್ಜಿ ಸಲ್ಲಿಸಿಲ್ಲ ಎಂದು ತಿಳಿಸಿದ್ದರು
Fact Check: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (RBI) ಮಾಜಿ ಗವರ್ನರ್ ರಘುರಾಮ್ ರಾಜನ್ (Raghuram Rajan) ಅವರನ್ನು ಈಗ ಬ್ಯಾಂಕ್ ಆಫ್ ಇಂಗ್ಲೆಂಡ್‌ನ ಗವರ್ನರ್ ಆಗಿ ನೇಮಿಸಲಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ವೊಂದು ಹರಿದಾಡುತ್ತಿದೆ. ಬ್ಯಾಂಕ್ ಆಫ್ ಇಂಗ್ಲೆಂಡ್‌ನ ಗವರ್ನರ್ ಆಗಿ ನೇಮಕಗೊಂಡಿದ್ದಕ್ಕಾಗಿ ರಾಜನ್ ಅವರನ್ನು ಅಭಿನಂದಿಸುವ ಸಂದೇಶಗಳನ್ನು ಫೇಸ್‌ಬುಕ್, ವಾಟ್ಸಾಪ್ ಹಾಗೂ ಟ್ವೀಟರ್‌ನಲ್ಲಿ ಹಲವು ಹಂಚಿಕೊಂಡಿದ್ದಾರೆ ಮತ್ತು ಭಾರತ ಸರ್ಕಾರದೊಂದಿಗೆ ಕೆಲಸ ಮಾಡಲು ಅವರಿಗೆ ಹೆಚ್ಚಿನ ಅವಕಾಶಗಳನ್ನು ನೀಡಲಾಗಿಲ್ಲ ಎಂದು ಕೆಲವರು ವಿಷಾದ ವ್ಯಕ್ತಪಡಿಸಿದ್ದಾರೆ.
ಆದರೆ ಫ್ಯಾಕ್ಟ್‌ಚೆಕ್‌ನಲ್ಲಿ ಈ ಹೇಳಿಕೆ ಸುಳ್ಳು ಎಂದು ತಿಳಿದುಬಂದಿದೆ. ಆಂಡ್ರ್ಯೂ ಬೈಲಿ (Andrew Bailey) ಬ್ಯಾಂಕ್ ಆಫ್ ಇಂಗ್ಲೆಂಡ್‌ನ ಪ್ರಸ್ತುತ ಗವರ್ನರ್ ಆಗಿದ್ದು, ಅವರ ಅಧಿಕಾರಾವಧಿಯು ಮಾರ್ಚ್ 2028 ರವರೆಗೆ ಮುಂದುವರಿಯುತ್ತದೆ. 2019 ರಲ್ಲಿ, ರಾಜನ್ ಈ ಹುದ್ದೆಗೆ ಮುಂಚೂಣಿಯಲ್ಲಿದ್ದರು ಎಂದು ಕೆಲ ವರದಿಗಳು ತಿಳಿಸಿದ್ದವು. ಆದರೆ ಆ ಸಮಯದಲ್ಲಿ ರಾಜನ್ ಸಂದರ್ಶನವೊಂದರಲ್ಲಿ ಅವರು ಈ ಹುದ್ದೆಗೆ ಅರ್ಜಿ ಸಲ್ಲಿಸಿಲ್ಲ ಎಂದು ತಿಳಿಸಿದ್ದರು.
Claim: "ಬ್ಯಾಂಕ್ ಆಫ್ ಇಂಗ್ಲೆಂಡ್‌ನ ಗವರ್ನರ್ ಆಗಿ ನೇಮಕಗೊಂಡ ಶ್ರೀ ರಘುರಾಮ್ ರಾಜನ್ ಜೀ ಅವರಿಗೆ ಅಭಿನಂದನೆಗಳು" ಎಂದು ಸಾಮಾಜಿಕ ಜಾಲತಾಣಗಳಲ್ಲಿನ ಪೋಸ್ಟ್‌ಗಳಲ್ಲಿ ಹೇಳಲಾಗಿದೆ. ಜತೆಗೆ ಪ್ರತಿಭಾ ಪಲಾಯನ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಬರೆಯಲಾಗಿದೆ.
ಇದೇ ರೀತಿಯ ಪೋಸ್ಟ್‌ಗಳು ಫೇಸ್‌ಬುಕ್ ಹಾಗೂ ವಾಟ್ಸಾಪ್‌ಗಳಲ್ಲಿ ಹರಿದಾಡುತ್ತಿವೆ. ಇಂಥಹ ಪೋಸ್ಟ್‌ಗಳನ್ನು ನೀವು ಇಲ್ಲಿ ಮತ್ತು ಇಲ್ಲಿ ನೋಡಬಹುದು
Fact Check: ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ಪೋಸ್ಟ್ ಬಗ್ಗೆ ನಾವು ಹುಡುಕಿದಾಗ, ಯುಕೆ ಸೆಂಟ್ರಲ್ ಬ್ಯಾಂಕ್‌ನ ಹೊಸ ಗವರ್ನರ್ ಆಗಿ ರಾಜನ್ ಅವರ ನೇಮಕಾತಿ ದೃಢೀಕರಿಸುವ ಯಾವುದೇ ವಿಶ್ವಾಸಾರ್ಹ ಸುದ್ದಿ ವರದಿ ಕಂಡುಬಂದಿಲ್ಲ. ಒಂದು ವೇಳೆ ರಾಜನ್ ಗವರ್ನರ್ ಆಗಿ ನೇಮಕಗೊಂಡಿದ್ದರೆ ಈ ಸುದ್ದಿ ಭಾರತ ಮತ್ತು ಇಂಗ್ಲೆಂಡ್‌ನಲ್ಲಿ ಪ್ರಮುಖ ಸುದ್ದಿಯಾಗಿರುತಿತ್ತು.
ಬ್ಯಾಂಕಿನ ವೆಬ್‌ಸೈಟ್ ಆಂಡ್ರ್ಯೂ ಬೈಲಿಯವರನ್ನು ಗವರ್ನರ್ ಎಂದು ಪಟ್ಟಿ ಮಾಡಿದೆ. ಅವರನ್ನು ಮಾರ್ಚ್ 16, 2020 ರಂದು ನೇಮಿಸಲಾಯಿತು ಮತ್ತು ಅವರ ಗವರ್ನರ್ ಅವಧಿಯು ಮಾರ್ಚ್ 15, 2028 ರಂದು ಕೊನೆಗೊಳ್ಳಲಿದೆ. ಅಲ್ಲದೇ ಬ್ಯಾಂಕ್‌ನ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಿದಂತೆ ಈ ಹಿಂದಿನ ಗವರ್ನರ್‌ಗಳ ಪಟ್ಟಿಯಲ್ಲಿ ರಾಜನ್ ಅವರ ಹೆಸರು ಕಂಡುಬಂದಿಲ್ಲ.
2019 ರಲ್ಲಿ ಯುಕೆ ಸೆಂಟ್ರಲ್ ಬ್ಯಾಂಕ್‌ನ ಆಗಿನ ಗವರ್ನರ್ ಆಗಿದ್ದ ಮಾರ್ಕ್ ಕಾರ್ನಿ ನಂತರ ಹುದ್ದೆಗೇರಲು ರಾಜನ್ ಪ್ರಮುಖ ಸ್ಪರ್ಧಿಗಳಲ್ಲಿ ಒಬ್ಬರು ಎಂದು ಕೆಲ ವರದಿಗಳು ತಿಳಿಸಿದ್ದವು (1) (2). ಆದರೆ ಜುಲೈ 2019 ರಲ್ಲಿ ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ, ರಾಜನ್ ಅವರು ಯುಕೆ ಕೇಂದ್ರ ಬ್ಯಾಂಕ್‌ನಲ್ಲಿ ಉನ್ನತ ಹುದ್ದೆಗೆ ಅರ್ಜಿ ಸಲ್ಲಿಸಿಲ್ಲ ಎಂದು ಹೇಳಿದರು.
"ಹಾರ್ಡ್ ಟಾಕ್" ನಲ್ಲಿ (BBC HARDtalk), ಕೇಂದ್ರೀಯ ಬ್ಯಾಂಕಿಂಗ್ "ಇತ್ತೀಚಿನ ದಿನಗಳಲ್ಲಿ ಹೆಚ್ಚು ರಾಜಕೀಯವಾಗಿದೆ" ಎಂದು ರಾಜನ್ ಆಂಕರ್ ಸಾರಾ ಮಾಂಟೆಗ್ಗೆ ಹೇಳಿದರು. "ದೇಶವು ಆ ದೇಶದೊಳಗಿನ ರಾಜಕೀಯ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ಮತ್ತು ಅದನ್ನು ಹೇಗೆ ಮುಂದುವರಿಸಬೇಕೆಂದು ತಿಳಿದಿರುವವರನ್ನು ಹೊಂದಿದ್ದರೆ ಅದು ಉತ್ತಮವಾಗಿರುತ್ತದೆ" ಎಂದು ರಾಜನ್ ಹೇಳಿದ್ದರು.
"ನಾನು ಹೊರಗಿನವನಾಗಿದ್ದೇನೆ ಎಂಬುದು ಸ್ಪಷ್ಟವಾಗಿದೆ ಮತ್ತು ಆ ದೇಶದ ರಾಜಕೀಯ ಏರಿಳಿತಗಳ ಮತ್ತು ಹರಿವಿನ ಬಗ್ಗೆ ನನಗೆ ಬಹಳ ಕಡಿಮೆ ತಿಳುವಳಿಕೆ ಇದೆ." ಎಂದು ಅವರು ಹೇಳಿದ್ದರು. ಈ ಸಂದರ್ಶನವನ್ನು ಭಾರತೀಯ ಮಾಧ್ಯಮಗಳೂ ವರದಿ ಮಾಡಿದ್ದವು.
ಹೀಗಾಗಿ, ರಾಜನ್ ಈಗ ಬ್ಯಾಂಕ್ ಆಫ್ ಇಂಗ್ಲೆಂಡ್‌ನಲ್ಲಿ ಟಾಪ್ ಬಾಸ್ ಆಗಲಿದ್ದಾರೆ ಎಂಬ ಹೇಳಿಕೆಯು ಸುಳ್ಳು ಎಂದು ಫ್ಯಾಕ್ಟ್ ಚೆಕ್‌ನಲ್ಲಿ ಸಾಬೀತಾಗಿದೆ.