ನವದೆಹಲಿ(ಜೂ.18): ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಕಾಲಿಗೆರಗಿ ನಮಸ್ಕರಿಸಿದ್ದಾರೆ ಎನ್ನುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಫೋಟೋದಲ್ಲಿ ಕೇಸರಿ ಬಣ್ಣದ ಪೇಟಾ ಮತ್ತು ದೋತಿ ಧರಿಸಿರುವ ವ್ಯಕ್ತಿಯೊಬ್ಬರು ಸೋನಿಯಾ ಗಾಂಧಿಯವರ ಕಾಲಿಗೆರಗಿ ನಮಸ್ಕರಿಸುತ್ತಿದ್ದಾರೆ. ಮತ್ತು ಸೋನಿಯಾ ಗಾಂಧಿ ಹಿಂದೆ ರಾಹುಲ್‌ ಗಾಂಧಿ ಸೇರಿದಂತೆ ಮತ್ತಿತರ ಕಾಂಗ್ರೆಸ್‌ ಮುಖಂಡರಿದ್ದಾರೆ.

ಈ ಫೋಟೋವನ್ನು ಪೋಸ್ಟ್‌ ಮಾಡಿ ಸಿಂಗ್‌ ತಮಗಿಂತಲೂ ಕಿರಿಯರಾದ ಸೋನಿಯಾ ಗಾಂಧಿ ಅವರ ಕಾಲು ಮುಟ್ಟಿನಮಸ್ಕರಿಸಿರುವುದನ್ನು ಖಂಡಿಸಿದ್ದಾರೆ ಮತ್ತು ಸೋನಿಯಾ ಹಿಂದಕ್ಕೆ ನಿಂತು ಹುಸಿನಗುತ್ತಿರುವ ರಾಹುಲ್‌ ಗಾಂಧಿ ಅವರನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಸದ್ಯ ಈ ಫೋಟೋ ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗುತ್ತಿದೆ.

ಆದರೆ ನಿಜಕ್ಕೂ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಕಾಲಿಗೆರಗಿ ನಮಸ್ಕರಿಸಿದರೇ ಎಂದು ಪರಿಶೀಲಿಸಿದಾಗ ಇದು ಸುಳ್ಳು ಸುದ್ದಿ, ಫೋಟೋದಲ್ಲಿ ಸೋನಿಯಾ ಗಾಂಧಿ ಕಾಲಿಗೆರಗಿರುವ ವ್ಯಕ್ತಿ ಸಿಂಗ್‌ ಅಲ್ಲ ಎಂದು ತಿಳಿದುಬಂದಿದೆ. ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲಿಸಿದಾಗ 2011ರ ಭಾರತೀಯ ಯುವ ಕಾಂಗ್ರೆಸ್‌ ಸಮಾವೇಶದ ಫೋಟೋ ಇದು ಎಂದು ತಿಳಿದುಬಂದಿದೆ. ಈ ಸಮಾವೇಶದಲ್ಲಿ ಕಾಂಗ್ರೆಸ್‌ ಕಾರ‍್ಯಕರ್ತರೊಬ್ಬರು ಸೋನಿಯಾ ಗಾಂಧಿ ಕಾಲಿಗೆ ಬಿದ್ದು ನಮಸ್ಕರಿಸಿದ್ದರು. ಇದೇ ಸಮಾರಂಭದ ಇನ್ನೊಂದು ಫೋಟೋದಲ್ಲಿ ಮನಮೋಹನ್‌ ಸಿಂಗ್‌ ನೀಲಿ ಬಣ್ಣದ ಪೇಟಾ ಧರಿಸಿರುವುದು ಕಂಡುಬಂದಿದೆ. ಹಾಗಾಗಿ ಫೋಟೋದಲ್ಲಿ ಕಾಲಿಗೆ ನಮಸ್ಕರಿಸುತ್ತಿರುವ ವ್ಯಕ್ತಿ ಸಿಂಗ್‌ ಅಲ್ಲ ಎಂಬುದು ಸ್ಪಷ್ಟ.