ಮುಂಬೈ ಮತ್ತು ಹೈದರಾಬಾದ್‌ ಆಸ್ಪತ್ರೆಗಳಲ್ಲಿ ಕೊರೋನಾ ರೋಗಿಗಳಿಗೆ ಹಾಸಿಗೆ ಲಭ್ಯವಾಗದೆ ಆಸ್ಪತ್ರೆ ಆವರಣಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ವಿಡಿಯೋ ವೈರಲ್ ಆಗಿದೆ. ಇದು ನಿಜಾನಾ? ಇಲ್ಲಿದೆ ವಿವರ

ಮುಂಬೈ(ಜು.02): ದೇಶದಲ್ಲಿ ಕೊರೋನಾ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆಸ್ಪತ್ರೆಗಳು ಮತ್ತು ವೆಂಟಿಲೇಟರ್‌ ಕೊರತೆ ಉಂಟಾಗಬಹುದು ಎಂಬ ಊಹಾಪೋಹಗಳು ಎದ್ದಿವೆ. ಈ ನಡುವೆ ಮುಂಬೈ ಮತ್ತು ಹೈದರಾಬಾದ್‌ ಆಸ್ಪತ್ರೆಗಳಲ್ಲಿ ಕೊರೋನಾ ರೋಗಿಗಳಿಗೆ ಹಾಸಿಗೆ ಲಭ್ಯವಾಗದೆ ಆಸ್ಪತ್ರೆ ಆವರಣಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

ಒಂದು ನಿಮಿಷ ಇರುವ ವಿಡಿಯೋದಲ್ಲಿ ಆಸ್ಪತ್ರೆಯ ಆವರಣದಲ್ಲಿಯೇ ರೋಗಿಗಳನ್ನು ಮಲಗಿಸಿ ಚಿಕಿತ್ಸೆ ನೀಡುವ ದೃಶ್ಯವಿದೆ. ಈ ವಿಡಿಯೋ ಆತಂಕ ಉಂಟುಮಾಡುವಂತಿದೆ.

ಆದರೆ ನಿಜಕ್ಕೂ ಹೈದರಾಬಾದ್‌ ಮತ್ತು ಮುಂಬೈಗಳಲ್ಲಿ ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡಲು ಹಾಸಿಗೆಗಳ ಕೊರತೆ ಉಂಟಾಗಿದೆಯೇ ಎಂದು ಪರಿಶೀಲಿಸಿದಾಗ ವೈರಲ್‌ ವಿಡಿಯೋ ಭಾರತದ್ದಲ್ಲ ಎಂದು ತಿಳಿದುಬಂದಿದೆ. ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲಿಸಿದಾಗ ಪಾಕಿಸ್ತಾನದ ಸುದ್ದಿಸಂಸ್ಥೆಯೊಂದು ಜೂನ್‌ 15ರಂದು ಲಾಹೋರ್‌ ಆಸ್ಪತ್ರೆಯೊಂದರ ಕುರಿತು ಮಾಡಿದ್ದ ವರದಿ ಪತ್ತೆಯಾಗಿದೆ.

Scroll to load tweet…

ಅದರಂತೆ ಆಸ್ಪತ್ರೆಯಲ್ಲಿ ಶಾರ್ಟ್‌ ಸಕ್ರ್ಯೂಟ್‌ ಉಂಟಾದ ಪರಿಣಾಮ ರೋಗಿಗಳನ್ನೆಲ್ಲಾ ಹೊರಕ್ಕೆ ಸಾಗಿಸಿ ಆವರಣದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆ ವಿಡಿಯೋ ಬಳಸಿ ಕೊರೋನಾ ರೋಗಿಗಳಿಗೆ ಹಾಸಿಗೆ ಲಭ್ಯವಾಗದೆ, ಆಸ್ಪತ್ರೆ ಆವರಣದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸುಳ್ಳುಸುದ್ದಿ ಹಬ್ಬಿಸಲಾಗುತ್ತಿದೆ.