Fact Check| ಕಾತ್ಯಾಯಿನಿ ಮಂತ್ರ ಪಠಿಸಿದ ಮೋದಿ!
ಪ್ರಧಾನಿ ನರೇಂದ್ರ ಮೋದಿ ಕಾತ್ಯಾಯಿನಿ ಮಂತ್ರ ಪಠಿಸಿದ್ದಾರೆ ಎಂಬ ಸಂದೇಶ ವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ನಿಜಾನಾ? ಇಲ್ಲಿದೆ ವಾಸ್ತವ
ನವದೆಹಲಿ(ಏ.30): ಪ್ರಧಾನಿ ನರೇಂದ್ರ ಮೋದಿ ಕಾತ್ಯಾಯಿನಿ ಮಂತ್ರ ಪಠಿಸಿದ್ದಾರೆ ಎಂಬ ಸಂದೇಶ ವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕಾತ್ಯಾಯಿನಿ ಮಂತ್ರ ಪಠಿಸಿರುವ ಆಡಿಯೋ ಕ್ಲಿಪ್‌ವೊಂದನ್ನು ಪೋಸ್ಟ್ ಮಾಡಿ, ‘ಇಡೀ ದೇಶಕ್ಕೆ ದುಷ್ಟಶಕ್ತಿಯ ವಿರುದ್ಧ ಹೋರಾಡುವ ಶಕ್ತಿಯನ್ನು ಕೋರಿ ಪ್ರಧಾನಿ ನರೇಂದ್ರ ಮೋದಿ ಕಾತ್ಯಾಯಿನಿ ಮಂತ್ರವನ್ನು ಪಠಿಸಿದ್ದಾರೆ. ಇಷ್ಟೊಂದು ಶುಶ್ರಾವ್ಯವಾಗಿ ಮೋದಿ ಹಾಡುತ್ತಾರೆಂದು ನಂಬಲೇ ಸಾಧ್ಯವಾಗುತ್ತಿಲ್ಲ’ ಎನ್ನಲಾಗುತ್ತಿದೆ. ಇದೀಗ ವೈರಲ್ ಆಗುತ್ತಿದೆ.
ಆದರೆ ನಿಜಕ್ಕೂ ಪ್ರಧಾನಿ ಮೋದಿ ದೇಶಕ್ಕಾಗಿ ಕಾತ್ಯಾಯಿನಿ ಮಂತ್ರ ಪಠಿಸಿದರೇ ಎಂದು ಪರಿಶೀಲಿಸಿದಾಗ ವೈರಲ್ ಸುದ್ದಿ ಸುಳ್ಳು. ಪ್ರಧಾನಿ ಮೋದಿ ಯಾವುದೇ ಮಂತ್ರವನ್ನೂ ಜಪಿಸಿಲ್ಲ ಎಂದು ತಿಳಿದುಬಂದಿದೆ. ರಿವರ್ಸ್ ಇಮೇಜ್‌ನಲ್ಲಿ ಹುಡುಕ ಹೊರಟಾಗ, ಫೆಬ್ರವರಿ 4, 2019ರಂದು ಅಪ್‌ಲೋಡ್ ಮಾಡಲಾದ ವಿಡಿಯೋವೊಂದು ಯುಟ್ಯೂಬ್ನಲ್ಲಿ ಲಭ್ಯವಾಗಿದೆ. ಅದರಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಹಾಡಿದ್ದಾರೆ ಎಂದೇ ಹೇಳಲಾಗಿದೆ.
ಆದರೆ ಅದರಲ್ಲಿ ಬಳಕೆದಾರರೊಬ್ಬರು ಇದನ್ನು ಪ್ರಧಾನಿ ಮೋದಿ ಹಾಡಿಲ್ಲ. ಬದಲಾಗಿ ಇದನ್ನು ಹಾಡಿದ್ದು ಆಲ್ ಇಂಡಿಯಾ ರೇಡಿಯೋ ಕಲಾವಿದ ಜಿತೇಂದ್ರ ಸಿಂಗ್ ಎಂದು ಕಾಮೆಂಟ್ ಮಾಡಿದ್ದು ಕಂಡುಬಂದಿದೆ.
ಇದರ ಜಾಡು ಹಿಡಿದು ಪರಿಶೀಲಿಸಿದಾಗ ಮೂಲ ಆಡಿಯೋ ಕ್ಲಿಪ್ ಲಭ್ಯವಾಗಿದೆ. ಇದನ್ನು ಸೆಪ್ಟೆಂಬರ್ 25, 2017ರಂದು ಅಪ್‌ಲೋಡ್ ಮಾಡಲಾಗಿದ್ದು, ‘ಜಿತೇಂದ್ರ ಸಿಂಗ್ ಅವರಿಂದ ಮಾತಾ ಕಾತ್ಯಾಯಿನಿ ಸ್ಥುತಿ’ ಎಂಬ ಶೀರ್ಷಿಕೆ ನೀಡಲಾಗಿದೆ. ಹಾಗಾಗಿ ಇದು ಮೋದಿ ಹಾಡಿದ್ದಲ್ಲ ಎಂಬುದು ಸ್ಪಷ್ಟ. ಆದರೆ ಪ್ರಧಾನಿ ನರೇಂದ್ರ ಮೋದಿ 2018ರ ನವರಾತ್ರಿಯಂದು ಕಾತ್ಯಾಯಿನಿ ದೇವಿಯು ಎಲ್ಲರನ್ನೂ ಆಶೀರ್ವದಿಸಲಿ ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದರು.