ಕೊರೋನಾ ಸಾಂಕ್ರಾಮಿಕ ರೋಗ ವಿಶ್ವದೆಲ್ಲೆಡೆ ಆವರಿಸಿದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ)ಯು ಸಾಮಾಜಿಕ ಅಂತರ, ಮಾಸ್ಕ್‌ ಬಳಕೆ ಮತ್ತು ಐಸೋಲೇಶಗಳೇ ಕೋವಿಡ್‌-19ನಿಂದ ಪಾರಾಗಲು ಇರುವ ‘ಔಷಧ’ಗಳು ಎಂದು ಆರಂಭದಲ್ಲಿಯೇ ಹೇಳಿದೆ. ಆದರೆ ಇದೀಗ ಸ್ವತಃ ವಿಶ್ವ ಆರೋಗ್ಯ ಸಂಸ್ಥೆಯೇ ಕೊರೋನಾ ರೋಗಿಗಳು ಸಾಮಾಜಿಕ ಅಂತರ ಕಾಪಾಡುವ ಮತ್ತು ಐಸೋಲೇಶನ್‌ಗೆ ಒಳಪಡುವ ಅಗತ್ಯವಿಲ್ಲವೆಂದು ಹೇಳಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

‘ಬ್ರೇಕಿಂಗ್‌ ನ್ಯೂಸ್‌: ವಿಶ್ವ ಆರೋಗ್ಯ ಸಂಸ್ಥೆ ಇದೀಗ ಯು-ಟರ್ನ್‌ ಹೊಡೆದಿದೆ. ಕೊರೋನಾ ಸೋಂಕು ತಗಲಿದ ರೋಗಿಗಳು ಐಸೋಲೇಶನ್‌ಗೆ ಒಳಪಡುವ ಅಗತ್ಯವಿಲ್ಲ. ಸಾಮಾಜಿಕ ಅಂತರವೂ ಬೇಡ. ವೈರಸ್‌ ರೋಗಿಗಳಿಂದ ಇತರರಿಗೆ ಹರಡುವುದಿಲ್ಲ’ ಎಂದು ಹೇಳಿದೆ ಎಂಬ ಸಂದೇಶ ವೈರಲ್‌ ಆಗುತ್ತಿದೆ.

 

ಆದರೆ ನಿಜಕ್ಕೂ ಕೊರೋನಾ ವೈರಸ್‌ ಒಬ್ಬರಿಂದ ಒಬ್ಬರಿಗೆ ಹರಡುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆಯೇ ಎಂದು ಪರಿಶೀಲಿಸಿದಾಗ ಯಾವುದೇ ಮುಖ್ಯವಾಹಿನಿ ಮಾಧ್ಯಮಗಳು ಈ ಬಗ್ಗೆ ವರದಿ ಮಾಡಿರುವುದು ಪತ್ತೆಯಾಗಿಲ್ಲ. ಅಲ್ಲದೆ ಈ ಸುದ್ದಿ ವೈರಲ್‌ ಆಗುತ್ತಿದ್ದಂತೆಯೇ ಕೇಂದ್ರ ಸರ್ಕಾರದ ನೋಡಲ್‌ ಸಂಸ್ಥೆ ಪಿಐಬಿ, ‘ವೈರಲ್‌ ಸುದ್ದಿ ಸುಳ್ಳು. ಡಬ್ಲ್ಯೂಎಚ್‌ಒ ಈ ಸಲಹೆ ನೀಡಿಲ್ಲ. ಕೋವಿಡ್‌ ಸಾಂಕ್ರಾಮಿಕ ರೋಗವಾಗಿರುವುದರಿಂದ ಸಾಮಾಜಿಕ ಅಂತರ, ಮಾಸ್ಕ್‌ ಮತ್ತು ಐಸೋಲೇಶನ್‌ ಕಡ್ಡಾಯವಾಗಿ ಪಾಲಿಸಬೇಕು’ ಎಂದು ಸ್ಪಷ್ಟೀಕರಣ ನೀಡಿದೆ.

- ವೈರಲ್ ಚೆಕ್