ಬೆಂಗಳೂರು (ಸೆ. 07): ಕೊರೋನಾ ಬಿಕ್ಕಟ್ಟಿನಿಂದಾಗಿ ಭಾರತ ಐತಿಹಾಸಿಕ ಆರ್ಥಿಕ ಕುಸಿತಕ್ಕೆ ಸಾಕ್ಷಿಯಾಗಿದೆ. ಏಪ್ರಿಲ್‌-ಜೂನ್‌ ತ್ರೈಮಾಸಿಕದಲ್ಲಿ ಜಿಡಿಪಿ (ನಿವ್ವಳ ಉತ್ಪನ್ನ ದರ) ಶೇ.23.9 ರಷ್ಟುಭಾರಿ ಕುಸಿತ ಕಂಡಿದೆ. 1996ರಲ್ಲಿ ತ್ರೈಮಾಸಿಕ ಜಿಡಿಪಿ ವರದಿ ಬಿಡುಗಡೆ ಮಾಡುವ ಸಂಪ್ರದಾಯ ಆರಂಭವಾದ ನಂತರ ಇಲ್ಲಿಯವರೆಗೆ ಈ ಪ್ರಮಾಣದ ಆರ್ಥಿಕ ಕುಸಿತ ದಾಖಲಾಗಿರಲಿಲ್ಲ.

fact Check: ಸೆ. 01 ರಿಂದ ವಿದ್ಯುತ್ ದರ ಪಾವತಿ ಮಾಡಬೇಕಾಗಿಲ್ಲ!

ಭಾರತವೊಂದೇ ಅಲ್ಲ ಹಲವು ದೇಶಗಳ ಜಿಡಿಪಿ ಬೆಳವಣಿಗೆ ದರ ಇಳಿಮುಖವಾಗಿದೆ. ಆದರೆ ಸುದ್ದಿಸಂಸ್ಥೆಯೊಂದರ ಹೆಸರಿನಲ್ಲಿ ಗ್ರಾಫಿಕ್‌ವೊಂದನ್ನು ಪೋಸ್ಟ್‌ ಮಾಡಿ, ವಿಶ್ವದ ಘಟಾನುಘಟಿ ರಾಷ್ಟ್ರಗಳಾದ ಅಮೆರಿಕ, ಕೆನಡಾ, ಜಪಾನ್‌ ರಾಷ್ಟ್ರಗಳ ಜಿಡಿಪಿ ಭಾರತಕ್ಕಿಂತಲೂ ತೀವ್ರ ಪ್ರಮಾಣದಲ್ಲಿ ಕುಸಿದಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಮಾಡಲಾಗುತ್ತಿದೆ. ಕೆನಡಾದಲ್ಲಿ 38.7%, ಅಮೆರಿಕದಲ್ಲಿ 32.9%, ಜಪಾನಿನಲ್ಲಿ 27.8% ಜಿಡಿಪಿ ಕುಸಿತ ಕಂಡಿದೆ. ಇವುಗಳಿಗೆ ಹೋಲಿಸಿದರೆ ಭಾರತದ ಜಿಡಿಪಿ ಕುಸಿತ ಅಚ್ಚರಿ, ಆಘಾತಕಾರಿ ಏನಲ್ಲ ಎಂದು ಹೇಳಲಾಗಿದೆ.

 

ಆದರೆ ನಿಜಕ್ಕೂ ಭಾರತದ ಆರ್ಥಿಕತೆಗಿಂತ ಅಮೆರಿಕ, ಜಪಾನ್‌ ಆರ್ಥಿಕತೆ ಹೆಚ್ಚು ಕುಸಿದಿದೆಯೇ ಎಂದು‌ ಸುದ್ದಿಸಂಸ್ಥೆ ಪರಿಶೀಲಿಸಿದಾಗ ವೈರಲ್‌ ಆಗಿರುವ ಗ್ರಾಫಿಕ್‌ ಫೋಟೋಶಾಪ್‌ ಮೂಲಕ ಎಡಿಟ್‌ ಮಾಡಿರುವಂಥದ್ದು ಎಂದು ಗೊತ್ತಾಗಿದೆ. ವಾಸ್ತವವಾಗಿ ಕೊರೋನಾ ಬಿಕ್ಕಟ್ಟಿನಿಂದಾಗಿ ಜಾಗತಿಕ ಆರ್ಥಿಕತೆ ಕುಸಿದಿದೆಯಾದರೂ ವೈರಲ್‌ ಸಂದೇಶದಲ್ಲಿ ಹೇಳಿರುವಂತೆ ಅಮೆರಿಕ, ಕೆನಡಾ, ಜಪಾನ್‌ ಜಿಡಿಪಿ ಭಾರತದ ಜಿಡಿಪಿಗಿಂತ ಹೆಚ್ಚು ಕುಸಿದಿಲ್ಲ. ಅಮೆರಿಕದ ಆರ್ಥಿಕತೆ -9.5%, ಜಪಾನ್‌ ಆರ್ಥಿಕತೆ -7.6%, ಕೆನಡಾ ಆರ್ಥಿಕತೆ -12% ಕುಸಿತ ಕಂಡಿದೆ.

- ವೈರಲ್ ಚೆಕ್