ಕೇರಳಲ್ಲಿ ಸಿಡಿಮದ್ದು ತುಂಬಿದ್ದ ಅನಾನಸ್‌ ಹಣ್ಣನ್ನು ಆನೆಯೊಂದಕ್ಕೆ ನೀಡಿದ ಪರಿಣಾಮ ಅದು ಬಾಯಲ್ಲೇ ಸ್ಫೋಟಗೊಂಡು ಆನೆ ದಾರುಣವಾಗಿ ಸಾವನ್ನಪ್ಪಿದ ಪ್ರಕರಣದ ಆರೋಪದಲ್ಲಿ ಕೇರಳ ಪೊಲೀಸರು ಅಂಜತ್‌ ಅಲಿ ಮತ್ತು ಥಮೀಮ್‌ ಶೇಖ್‌ ಎಂಬ ಇಬ್ಬರನ್ನು ಬಂಧಿಸಿದ್ದಾರೆ. ಇಬ್ಬರೂ ಮುಸ್ಲಿಮರು ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಮರ್‌ ಪ್ರಸಾದ್‌ ರೆಡ್ಡಿ ಎಂಬವರು ಮೊದಲಿಗೆ ಈ ಬಗ್ಗೆ ಟ್ವೀಟ್‌ ಮಾಡಿ ಬಳಿಕ ಡಿಲೀಟ್‌ ಮಾಡಿದ್ದಾರೆ. ಆದರೆ ಅಷ್ಟರವೊಳಗಾಗಲೇ ಟ್ವೀಟ್‌ ಸಾವಿರಾರು ಬಾರಿ ರೀಟ್ವೀಟ್‌ ಆಗಿತ್ತು.

 

ಆದರೆ ಆಲ್ಟ್‌ನ್ಯೂಸ್‌ ಈ ಸುದ್ದಿಯ ಸತ್ಯಾಸತ್ಯ ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ. ಆನೆ ಹತ್ಯೆ ವಿಷಯಕ್ಕೆ ಕೋಮು ಬಣ್ಣ ಬಳಿದು ಧರ್ಮ ಧರ್ಮಗಳ ನಡುವೆ ಸಂಘರ್ಷ ತಂದಿಡಲು ಯತ್ನಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ಪಾಲಕ್ಕಾಡ್‌ ಪೊಲೀಸ್‌ ವರಿಷ್ಠಾಧಿಕಾರಿ ಜಿ. ಶಿವ ವಿಕ್ರಮ್‌ ಅವರನ್ನು ಸಂಪರ್ಕಿಸಿ ಸ್ಪಷ್ಟನೆ ಪಡೆದಿದ್ದು, ಅವರು ‘ ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗುತ್ತಿರುವ ಸುದ್ದಿ ಸುಳ್ಳು. ಪ್ರಕರಣ ಸಂಬಂಧ ಬಂಧಿಸಿರುವ ವ್ಯಕ್ತಿ ಹೆಸರು ಪಿ.ವಿಲ್ಸನ್‌. ಇದನ್ನು ಮಲಯಾಳಂ ಡಿಡಿ ನ್ಯೂಸ್‌ ಪ್ರಕಟಿಸಿದೆ’ ಎಂದು ಹೇಳಿದ್ದಾರೆ.

ಕೇರಳಲ್ಲಿ ಆಹಾರ ಅರಸಿ ಬಂದಿದ್ದ ಆನೆಯೊಂದಕ್ಕೆ ಸಿಡಿಮದ್ದು ತುಂಬಿದ್ದ ಅನಾನಸ್‌ ನೀಡಲಾಗಿತ್ತು. ಪರಿಣಾಮ ಆನೆಯ ಬಾಯಲ್ಲಿಯೇ ಅದು ಸ್ಫೋಟಗೊಂಡು ಒಂದುವಾರಗಳ ಕಾಲ ನರಕಯಾತನೆ ಅನುಭವಿಸಿ ಆನೆ ಮೃತಪಟ್ಟಿತ್ತು. ಈ ಅಮಾನುಷ ಕೃತ್ಯಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಸದ್ಯ ಪ್ರಕರಣ ಸಂಬಂಧ ಆರೋಪಿಯೊಬ್ಬನನ್ನು ಬಂಧಿಸಲಾಗಿದೆ.

-ವೈರಲ್ ಚೆಕ್