ಬೆಂಗಳೂರು (ಜೂ. 15): ಜೂನ್ 15 ರಿಂದ ‘ಇಂಡಿಯಾ’ ಎನ್ನುವ ಬದಲಿಗೆ ಎಲ್ಲಾ ಭಾಷೆಗಳಲ್ಲೂ ‘ಭಾರತ’ ಎಂದೇ ಕರೆಯಬೇಕು, ಎಲ್ಲಾ ಅಧಿಕೃತ ದಾಖಲೆಗಳಲ್ಲಿ ಇಂಡಿಯಾ ಬದಲು ಭಾರತ ಎಂದೇ ಮರುನಾಮಕರಣ ಮಾಡಬೇಕು ಎಂದು ಸುಪ್ರೀಂಕೋರ್ಟ್‌ ಆದೇಶ ಹೊರಡಿಸಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

 

ವೈರಲ್‌ ಪೋಸ್ಟ್‌ನಲ್ಲಿ ‘ಸಂವಿಧಾನದ ಆರ್ಟಿಕಲ್‌-1ರಲ್ಲಿ ಇರುವ ‘ಇಂಡಿಯಾ’ ಎಂಬ ಹೆಸರನ್ನು ತೆಗೆದುಹಾಕುವಂತೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್‌, ಜೂನ್‌ 15ರಿಂದ ದೇಶದ ಹೆಸರನ್ನು ‘ಇಂಡಿಯಾ’ ಎನ್ನುವ ಬದಲಿಗೆ ‘ಭಾರತ’ ಎಂದು ಮಾತ್ರ ಕರೆಯಬೇಕು ಎಂದು ಆದೇಶಿಸಿದೆ. ದೇಶದ ಸಮಸ್ತ ಜನರಿಗೂ ಅಭಿನಂದನೆಗಳು’ ಎಂದು ಹೇಳಲಾಗಿದೆ.

Fact Check: ಜೂ.15 ರಿಂದ ಮತ್ತೆ ಕಂಪ್ಲೀಟ್‌ ಲಾಕ್ಡೌನ್‌?

ಆದರೆ ಈ ಸುದ್ದಿ ನಿಜವೇ ಎಂದು ಪರಿಶೀಲಿಸಿದಾಗ ವೈರಲ್‌ ಸುದ್ದಿ ಸುಳ್ಳು, ಸುಪ್ರೀಂಕೋರ್ಟ್‌ ಇಂಥ ಯಾವುದೇ ಆದೇಶ ನೀಡಿಲ್ಲ ಎಂದು ತಿಳಿದುಬಂದಿದೆ. ಆದರೆ ಸಂವಿಧಾನಕ್ಕೆ ತಿದ್ದುಪಡಿ ತಂದು ‘ಇಂಡಿಯಾ’ ಹೆಸರಿನ ಬದಲಿಗೆ ‘ಭಾರತ’ ಅಥವಾ ‘ಹಿಂದೂಸ್ತಾನ’ ಎಂದು ಮರುನಾಮಕರಣ ಮಾಡುವಂತೆ ಕೋರಿ ಸುಪ್ರೀಂಕೋರ್ಟಿನಲ್ಲಿ ಅರ್ಜಿಯೊಂದನ್ನು ಸಲ್ಲಿಸಲಾಗಿದೆ. ಆದರೆ ನ್ಯಾಯಾಲಯ ಇದುವರೆಗೆ ಈ ಬಗ್ಗೆ ಯಾವುದೇ ತೀರ್ಪು ನೀಡಿಲ್ಲ. ಹಾಗಾಗಿ ಭಾರತ ಎಂದು ದೇಶದ ಹೆಸರನ್ನು ಮರುನಾಮಕರಣ ಮಾಡಲಾಗಿದೆ ಎಂಬ ಸುದ್ದಿ ಸುಳ್ಳು ಎಂಬುದು ಸ್ಪಷ್ಟ.