ನವದೆಹಲಿ (ಅ. 01): ಉನ್ನತ ವಿದ್ಯಾಭ್ಯಾಸ ಮಾಡಲಿರುವ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ. ಅಂಥ ವಿದ್ಯಾರ್ಥಿಗಳಿಗೆ 1 ಲಕ್ಷ ರು.ವರೆಗೆ ವಿದ್ಯಾರ್ಥಿ ವೇತನ ನೀಡುವ ಪರೀಕ್ಷೆಯನ್ನು ಕಾರ್ಪೊರೇಟ್‌ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಬರುವ ಸಂಸ್ಥೆಯೊಂದು ಆಯೋಜಿಸುತ್ತಿದೆ ಎಂಬ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ವಿದ್ಯಾರ್ಥಿವೇತನ ನೀಡಲಿರುವ ಸಂಸ್ಥೆಯ ಹೆಸರು ಎಂ ಆ್ಯಂಡ್‌ ಎನ್‌ ಸ್ಕಾಲರ್‌ಶಿಪ್‌ ಪ್ರೈವೇಟ್‌ ಲಿಮಿಟೆಡ್‌ ಎಂದು ಹೇಳಲಾಗಿದೆ. 

fact Check: ಭವ್ಯ ರಾಮಮಂದಿರಕ್ಕೆ ಗಂಟೆ ಸಿದ್ಧ!

ಆದರೆ ನಿಜಕ್ಕೂ ಉನ್ನತ ವ್ಯಾಸಂಗಕ್ಕೆ ಸರ್ಕಾರ 1 ಲಕ್ಷ ರು. ವಿದ್ಯಾರ್ಥಿ ವೇತನ ನೀಡುವ ಪರೀಕ್ಷೆ ನಡೆಸುತ್ತಿದೆಯೇ ಎಂದು ಪರಿಶೀಲಿಸಿದಾಗ ವೈರಲ್‌ ಸುದ್ದಿ ಸುಳ್ಳು ಎಂಬುದು ಖಚಿತವಾಗಿದೆ. ಕೇಂದ್ರ ಸರ್ಕಾರದ ನೋಡಲ್‌ ಸಂಸ್ಥೆಯಾಗಿರುವ ಪಿಐಬಿಯೇ ಈ ಬಗ್ಗೆ ಸ್ಪಷ್ಟೀಕರಣ ನೀಡಿ, ವಿದ್ಯಾರ್ಥಿ ವೇತನ ನೀಡುವ ಪರೀಕ್ಷೆಯನ್ನು ಕಾರ್ಪೊರೇಟ್‌ ವ್ಯವಹಾರಗಳ ಸಚಿವಾಲಯ ಆಯೋಜಿಸುತ್ತಿಲ್ಲ ಎಂದು ತಿಳಿಸಿದೆ. ಅಲ್ಲದೆ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿರುವ ವೆಬ್‌ಸೈಟ್‌ ಸಹ ನಕಲಿ ಎಂದು ತಿಳಿಸಿದೆ.

 

ಸುದ್ದಿಯ ವಿಶ್ವಾಸಾರ್ಹತೆಯನ್ನು ಹೆಚ್ಚಿಸುವ ಉದ್ದೇಶದಿಂದ ಕಾರ್ಪೊರೇಟ್‌ ವ್ಯವಹಾರಗಳ ಸಚಿವಾಲಯದ ಹೆಸರನ್ನು ಬಳಸಿಕೊಳ್ಳಲಾಗಿದೆ. ಈ ಹಿಂದೆಯೂ ಸರ್ಕಾರ ಉಚಿತವಾಗಿ ಶಾಲಾ ಬ್ಯಾಗ್‌ ವಿತರಿಸುತ್ತಿದೆ, ಲಾಕ್‌ಡೌನ್‌ ನಿರ್ವಹಣೆಗೆ ಹಣ ನೀಡುತ್ತಿದೆ ಎಂಬ ಸುಳ್ಳುಸುದ್ದಿಗಳು ಸೋಷಿಯಲ್‌ ಮೀಡಿಯಾಗಳಲ್ಲಿ ಹರಿದಾಡಿದ್ದವು.