ಸಮಾರಂಭವೊಂದರಲ್ಲಿ ರಾಹುಲ್ ಗಾಂಧಿ ಜೊತೆಗೆ ಕಮಲದ ಚಿಹ್ನೆ ಇರುವ ಶರ್ಟ್ ಧರಿಸಿರುವ ಬಾಲಕ ಕುಳಿತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ನಿಜನಾ ಇದು..?
ನವದೆಹಲಿ (ನ. 12): ಸಮಾರಂಭವೊಂದರಲ್ಲಿ ರಾಹುಲ್ ಗಾಂಧಿ ಜೊತೆಗೆ ಕಮಲದ ಚಿಹ್ನೆ ಇರುವ ಶರ್ಟ್ ಧರಿಸಿರುವ ಬಾಲಕ ಕುಳಿತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದನ್ನು ನೆಟ್ಟಿಗರು ಹಂಚಿಕೊಂಡು, ‘ಸ್ವತಃ ರಾಹುಲ್ ಗಾಂಧಿಯೇ ಬಿಜೆಪಿಗೆ ಮತ ಹಾಕುತ್ತಾರೆ ಎನ್ನುವುದರಲ್ಲಿ ಯಾವುದೇ ಸಂದೇಹ ಇಲ್ಲ’ ಎಂದು ಕುಹಕವಾಡಿದ್ದಾರೆ.
ಆದರೆ ನಿಜಕ್ಕೂ ಫೋಟೋದಲ್ಲಿರುವ ಬಾಲಕ ಧರಿಸಿರುವ ಶರ್ಟ್‌ನಲ್ಲಿ ಬಿಜೆಪಿ ಚಿಹ್ನೆ ಕಮಲದ ಹೂವಿನ ಚಿತ್ರ ಇತ್ತೇ ಎಂದು ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ ಎಂಬುದು ಖಚಿತವಾಗಿದೆ. ವೈರಲ್ ಚಿತ್ರ 2017, ನವೆಂಬರ್ 3ರದ್ದು ಎಂಬುದು ಸ್ಪಷ್ಟವಾಗಿದೆ. 2017ರ ಗುಜರಾತ್ ವಿಧಾನಸಭೆ ಚುನಾವಣೆಗೂ ಮುನ್ನ ರಾಹುಲ್ ಗಾಂಧಿ ರೈತರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಈ ಕುರಿತ ಫೋಟೋಗಳನ್ನು ಸ್ವತಃ ಟ್ವೀಟ್ ಮಾಡಿದ್ದರು. ಆ ಪೋಟೋಗಳಲ್ಲಿ ವೈರಲ್ ಫೋಟೋವೂ ಸೇರಿದೆ.
ಮೂಲ ಚಿತ್ರದಲ್ಲಿ ಬಾಲಕ ಧರಿಸಿದ್ದ ಶರ್ಟ್‌ನಲ್ಲಿ ಯಾವುದೇ ಪಕ್ಷದ ಚಿಹ್ನೆ ಇಲ್ಲ. ಆದರೆ ಇದೇ ಫೋಟೋವನ್ನು ತಿರುಚಿ ಬಾಲಕನ ಶರ್ಟ್ ಮೇಲೆ ಬಿಜೆಪಿ ಚಿಹ್ನೆ ಇಟ್ಟು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಸುದ್ದಿ ಹರಡಲಾಗಿದೆ.
- ವೈರಲ್ ಚೆಕ್
