ಪ್ರಧಾನಿ ನರೇಂದ್ರ ಮೋದಿ ವಿಶ್ವ ಆರೋಗ್ಯ ಸಂಸ್ಥೆಯ ಚೇರ್ಮನ್‌ ಆಗಿ ಆಯ್ಕೆಯಾಗಿದ್ದಾರೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಪುಷ್ಪೇಂದ್ರ ಕುಲಶ್ರೇಷ್ಠ ಎಂಬ ಟ್ವೀಟರ್‌ ಖಾತೆಯಲ್ಲಿ ಮೊದಲು ಈ ಸುದ್ದಿಯನ್ನು ಪೋಸ್ಟ್‌ ಮಾಡಲಾಗಿದ್ದು, ಅದು 2000 ರೀಟ್ವೀಟ್‌ ಮತ್ತು 6500 ಲೈಕ್ಸ್‌ ಪಡೆದಿದೆ.

ಇಂಗ್ಲಿಷ್‌, ಕನ್ನಡ ಸೇರಿದಂತೆ ಹಲವು ಸ್ಥಳೀಯ ಭಾಷೆಗಳಿಗೂ ಭಾಷಾಂತರಗೊಂಡು ವೈರಲ್‌ ಆಗುತ್ತಿದೆ. ಕೆಲವರು ಇದನ್ನು ಪೋಸ್ಟ್‌ ಮಾಡಿ, ‘ಭಾರತೀಯರೆಲ್ಲರೂ ಹೆಮ್ಮೆ ಪಡುವ ವಿಷಯ’ ಎಂದು ಬರೆದುಕೊಂಡಿದ್ದಾರೆ.

Fact Check: ದೇಶದ ಪ್ರತಿ ನಾಗರಿಕನಿಗೂ ಲಾಕ್‌ಡೌನ್‌ ಪರಿಹಾರ ನಿಧಿಯಾಗಿ 5000 ರೂ?

ಆದರೆ ಸುದ್ದಿಯ ಸತ್ಯಾಸತ್ಯ ಪರಿಶೀಲಿಸಿದಾಗ ಪ್ರಧಾನಿ ಮೋದಿ ವಿಶ್ವ ಆರೋಗ್ಯ ಸಂಸ್ಥೆಯ ಚೇರ್ಮನ್‌ ಆಗಲು ಸಾಧ್ಯವೇ ಇಲ್ಲ, ಏಕೆಂದರೆ ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ‘ಚೇರ್ಮನ್‌’ ಎಂಬ ಹುದ್ದೆಯೇ ಅಸ್ತಿತ್ವದಲ್ಲಿ ಇಲ್ಲ ಎಂಬುದು ತಿಳಿದುಬಂದಿದೆ. ಡಬ್ಲ್ಯುಎಚ್‌ಒದ ಅತ್ಯುನ್ನತ ಹುದ್ದೆ ಎಂದರೆ ಡೈರೆಕ್ಟರ್‌ ಜನರಲ್‌ (ಮಹಾ ನಿರ್ದೇಶಕ). ಸದ್ಯ ಇಥಿಯೋಪಿಯಾದ ಮಾಜಿ ವಿದೇಶಾಂಗ ಸಚಿವ ಡಾ.ಟೆಡ್ರೋಸ್‌ ಅಧಾನೋಮ್‌ ಘೇಬ್ರೆಯಾಸಸ್‌ ಮಹಾ ನಿರ್ದೇಶಕರಾಗಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಹೆಲ್ತ್‌ ಅಸೆಂಬ್ಲಿ ಮತ್ತು ಕಾರ‍್ಯಕಾರಿ ಮಂಡಳಿ ಎಂಬ ಎರಡು ವಿಭಾಗಗಳಿವೆ. ಈ ಕಾರ‍್ಯಕಾರಿ ಮಂಡಳಿಗೆ ಪ್ರತಿ ವರ್ಷಕ್ಕೊಮ್ಮೆ 1 ವರ್ಷದ ಅವಧಿಗೆ ಚೇರ್ಮನ್‌ ನೇಮಕ ಮಾಡಲಾಗುತ್ತದೆ. ಸದ್ಯ ಈ ಮಂಡಳಿಯ ಮುಖ್ಯಸ್ಥರಾಗಿ ಭಾರತದ ಆರೋಗ್ಯ ಸಚಿವ ಡಾ. ಹರ್ಷವರ್ಧನ್‌ ಆಯ್ಕೆಯಾಗಿದ್ದಾರೆ. ಇದರ ಹೊರತಾಗಿ ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಮೋದಿ ಯಾವುದೇ ಉನ್ನತ ಹುದ್ದೆಯನ್ನೂ ಪಡೆದಿಲ್ಲ.

- ವೈರಲ್ ಚೆಕ್