ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮುಸ್ಲಿಮರ ಟೋಪಿಯನ್ನು ಧರಿಸಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

ಇದನ್ನು ಪೋಸ್ಟ್‌ ಮಾಡಿ ‘ಅಮಿತ್‌ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಮುಸ್ಲಿಮರ ಧಾರ್ಮಿಕ ಕಾರ‍್ಯಕ್ರಮಕ್ಕೆ ಭೇಟಿ ನೀಡಿದ ವೇಳೆ ಈ ವೇಷ ಧರಿಸಿದ್ದರು. ತೃಣಮೂಲ ಕಾಂಗ್ರೆಸ್‌ ಅಧ್ಯಕ್ಷೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಂತೆ ಮೋದಿ ಮತ್ತು ಅಮಿತ್‌ ಶಾ ಕೂಡ ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ’ ಎನ್ನಲಾಗಿದೆ. ನೆಟ್ಟಿಗರು ಈ ಫೋಟೋವನ್ನು ಬಳಸಿಕೊಂಡು, ‘ಮಮತಾ ಅಲ್ಪಸಂಖ್ಯಾತರ ಬಗ್ಗೆ ಓಲೈಕೆ ರಾಜಕಾರಣ ಮಾಡುತ್ತಾರೆ’ ಎಂದು ದೂರುತ್ತಿದ್ದ ಬಿಜೆಪಿ ಬೆಂಬಲಿಗರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸದ್ಯ ಈ ಫೋಟೋ ಟ್ವೀಟರ್‌, ಫೇಸ್‌ಬುಕ್‌ನಲ್ಲಿ ಭಾರಿ ವೈರಲ್‌ ಆಗುತ್ತಿದೆ.

 

ಆದರೆ ನಿಜಕ್ಕೂ ಮೋದಿ ಮತ್ತು ಅಮಿತ್‌ ಶಾ ಇಸ್ಲಾಮಿಕ್‌ ಟೋಪಿ ಧರಿಸಿದ್ದರೇ ಎಂದು ಪರಿಶೀಲಿಸಿದಾಗ ವೈರಲ್‌ ಫೋಟೋ ಫೋಟೋಶಾಪ್‌ ಮೂಲಕ ಎಡಿಟ್‌ ಮಾಡಿರುವಂಥದ್ದು ಎಂಬುದು ಖಚಿತವಾಗಿದೆ.

Fact Check: ರಾಹುಲ್ ಕ್ಷೇತ್ರ ವಯನಾಡಿನ ಅವ್ಯವಸ್ಥೆಯಿದು..!

ರಿವರ್ಸ್‌ ಇಮೇಜ್‌ನಲ್ಲಿ ಹುಡುಕಹೊರಟಾಗ ಮೂಲ ಫೋಟೋ ಪತ್ತೆಯಾಗಿದೆ. 2019 ಆಗಸ್ಟ್‌ 27ರಂದು ಸುದ್ದಿಸಂಸ್ಥೆಯೊಂದರ ವರದಿಯಲ್ಲಿ ಈ ಪೋಟೋ ಪ್ರಕಟಗೊಂಡಿದೆ. ಅದರಲ್ಲಿ ಅರುಣ್‌ ಜೇಟ್ಲಿ ಅವರ ನಿಧನದ ನಂತರ ಸಂತಾಪ ಸೂಚಿಸಲು ಪ್ರಧಾನಿ ಮೋದಿ ಮತ್ತು ಅಮಿತ್‌ ಶಾ ಒಟ್ಟಿಗೆ ಅರುಣ್‌ ಜೇಟ್ಲಿ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ಆಗಿನ ಫೋಟೋವನ್ನೇ ಎಡಿಟ್‌ ಮಾಡಿ, ಮುಸ್ಲಿಮರು ಧರಿಸುವ ಟೋಪಿ ಧರಿಸಿರುವಂತೆ ತೋರಿಸಿ ಸುಳ್ಳುಸುದ್ದಿ ಹರಡಲಾಗುತ್ತಿದೆ.

- ವೈರಲ್ ಚೆಕ್