ಕೊರೋನಾ ಲಾಕ್‌ಡೌನ್‌ನಿಂದಾಗಿ ದೇಶದ ವಿವಿದೆಡೆ ಸಿಲುಕಿ ಅತಂತ್ರರಾಗಿರುವ ವಲಸೆ ಕಾರ್ಮಿಕರನ್ನು ಅವರ ತವರಿಗೆ ಕಳುಹಿಸಲು ಭಾರತೀಯ ರೈಲ್ವೆ ‘ಶ್ರಮಿಕ್‌’ ವಿಶೇಷ ರೈಲುಗಳ ವ್ಯವಸ್ಥೆ ಮಾಡಿದೆ. ಈ ನಡುವೆ ರೈಲುಗಳ ಮೇಲೆ ಜನರು ಕಿಕ್ಕಿರಿದು ಕುಳಿತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿವೆ.

 

ಈ ವಿಡಿಯೋವನ್ನು ಪೋಸ್ಟ್‌ ಮಾಡಿ ಇದು ಮುಂಬೈನಿಂದ ಪಶ್ಚಿಮ ಬಂಗಾಳಕ್ಕೆ ವಲಸೆ ಕಾರ್ಮಿಕರನ್ನು ಹೊತ್ತೊಯ್ಯುತ್ತಿರುವ ಶ್ರಮಿಕ್‌ ವಿಶೇಷ ರೈಲು ಎಂದು ಹೇಳಲಾಗಿದೆ. ಅಲ್ಲದೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆಯೇ ಮುಂಬೈನಿಂದ ಪಶ್ಚಿಮ ಬಂಗಾಳಕ್ಕೆ ವಲಸಿಗರನ್ನು ರವಾನಿಸಿದ ಪರಿಣಾಮ ಬಂಗಾಳದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ ಎಂದು ಹೇಳಲಾಗಿದೆ. ಆದರೆ ಇಂಡಿಯಾ ಟುಡೇ ಈ ಕುರಿತು ಪರಿಶೀಲಿಸಿದಾಗ ವೈರಲ್‌ ವಿಡಿಯೋ 2 ವರ್ಷ ಹಳೆಯದ್ದು. ಅಲ್ಲದೆ ಇದು ಭಾರತದ ವಿಡಿಯೋವಲ್ಲ, ಬಾಂಗ್ಲಾ ದೇಶದ ವಿಡಿಯೋ ಎಂದು ತಿಳಿದುಬಂದಿದೆ.

ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲಿಸಿದಾಗ ಇದೇ ವಿಡಿಯೋ ಕ್ಲಿಪ್‌ಗಳು ಯುಟ್ಯೂಬ್‌ನಲ್ಲಿ ಪತ್ತೆಯಾಗಿವೆ. ಅದರಲ್ಲಿ ‘ಅತಿ ಹೆಚ್ಚು ಜನರನ್ನು ತುಂಬಿರುವ ಬಾಂಗ್ಲಾ ದೇಶದ ರೈಲು’ ಎಂದು ಒಕ್ಕಣೆ ಬರೆಯಲಾಗಿದೆ. ಈ ವಿಡಿಯೋವನ್ನು 2018 ಫೆ 24ರಂದು ಅಪ್‌ಲೋಡ್‌ ಮಾಡಲಾಗಿದೆ. ಹಾಗಾಗಿ ವೈರಲ್‌ ವಿಡಿಯೋ ಶ್ರಮಿಕ್‌ ವಿಶೇಷ ರೈಲಲ್ಲ ಎಂಬುದು ಸ್ಪಷ್ಟ. ಹಾಗೆಯೇ ಶ್ರಮಿಕ್‌ ವಿಶೇಷ ರೈಲುಗಳ ಮುಖಾಂತರ ವಲಸೆ ಕಾರ್ಮಿಕರನ್ನು ಸಾಗಿಸುವ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗಿತ್ತು. ವೈರಲ್‌ ಸುದ್ದಿ ಸುಳ್ಳು ಎಂದು ಪಿಐಬಿ ಸ್ಪಷ್ಟಪಡಿಸಿದೆ.

- ವೈರಲ್ ಚೆಕ್