Viral Check: ಸಾಧುಗಳ ಮೇಲೆ ಮುಸ್ಲಿಮರಿಂದ ಹಲ್ಲೆ?
ಉತ್ತರ ಪ್ರದೇಶದ ವೃಂದಾವನದಲ್ಲಿ ಮೂವರು ಸಾಧುಗಳ ಮೇಲೆ ಬಾಂಗ್ಲಾದೇಶಿ ಮುಸ್ಲಿಮರು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಈ ಕೃತ್ಯ ಮಾಡಿದವರು ಸದ್ಯ ತಲೆಮರೆಸಿಕೊಂಡಿದ್ದಾರೆ. ಆದರೆ ಪೊಲೀಸರು ಸುಮ್ಮನೆ ಕುಳಿತಿದ್ದಾರೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.ಹೌದಾ? ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ?
ಉತ್ತರ ಪ್ರದೇಶದ ವೃಂದಾವನದಲ್ಲಿ ಮೂವರು ಸಾಧುಗಳ ಮೇಲೆ ಬಾಂಗ್ಲಾದೇಶಿ ಮುಸ್ಲಿಮರು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಈ ಕೃತ್ಯ ಮಾಡಿದವರು ಸದ್ಯ ತಲೆಮರೆಸಿಕೊಂಡಿದ್ದಾರೆ. ಆದರೆ ಪೊಲೀಸರು ಸುಮ್ಮನೆ ಕುಳಿತಿದ್ದಾರೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ತಲೆ ಮತ್ತು ಮುಖದಿಂದ ತೀವ್ರವಾಗಿ ರಕ್ತ ಸುರಿಯುತ್ತಿರುವ ಸಾಧುಗಳ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ, ‘ಉತ್ತರ ಪ್ರದೇಶದ ವೃಂದಾವನದ ಇಮ್ಲಿತಲಾ ದೇವಾಲಯದ ಸಾಧುಗಳ ಮೇಲೆ ಬಾಂಗ್ಲಾ ದೇಶದವರನ್ನೊಳಗೊಂಡ ಗೂಂಡಾಗಳ ಗುಂಪು ಮಾರಣಾಂತಿಕ ಹಲ್ಲೆ ನಡೆಸಿದೆ. ಆದರೆ ಪೊಲೀಸರು ಈ ಬಗ್ಗೆ ತಲೆಕೆಡಿಸಿಕೊಳ್ಳದೆ ಸುಮ್ಮನಿದ್ದಾರೆ. ಹಾಗಾಗಿ ಈ ಸುದ್ದಿಯನ್ನು ಆದಷ್ಟುಶೇರ್ ಮಾಡಿ’ ಎಂದು ಬರೆದುಕೊಂಡಿದ್ದಾರೆ. ಇದೀಗ ವೈರಲ್ ಆಗುತ್ತಿದೆ.
ಆದರೆ ಈ ಫೋಟೋದ ಹಿಂದಿನ ಸತ್ಯಾಸತ್ಯತೆ ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ. ದೇವಾಲಯದ ಟ್ರಸ್ಟಿಗಳು ಮತ್ತು ಸಾಧುಗಳ ನಡುವಿನ ಘರ್ಷಣೆಯಲ್ಲಿ ಸಾಧುಗಳ ಮೇಲೆ ಹಲ್ಲೆ ನಡೆದಿದೆ. ಈ ಘಟನೆಯಲ್ಲಿ ಮುಸ್ಲಿಮರ ಪಾತ್ರ ಇಲ್ಲ ಎಂದು ತಿಳಿದು ಬಂದಿದೆ.
ಅಲ್ಲಿನ ಪೊಲೀಸರೂ ಈ ಬಗ್ಗೆ ಸ್ಪಷ್ಟೀಕರಣ ನೀಡಿ,‘ಆಸ್ತಿ ವ್ಯಾಜ್ಯದ ಕಾರಣ ಸಾಧುಗಳು ಮತ್ತು ದೇವಾಲಯದ ಟ್ರಸ್ಟಿಗಳ ನಡುವೆ ಘರ್ಷಣೆ ಏರ್ಪಟ್ಟು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಸಾಧುಗಳು ಗಾಯಗೊಂಡಿದ್ದಾರೆ ಅಷ್ಟೆ, ಆದರೆ ಯಾವುದೇ ಜೀವ ಹಾನಿಯಾಗಿಲ್ಲ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಟ್ರಸ್ಟಿಗಳಲ್ಲಿ ಒಬ್ಬನನ್ನು ಬಂಧಿಸಲಾಗಿದೆ. ಈ ಹಲ್ಲೆಯಲ್ಲಿ ಮುಸ್ಲಿಮರ ಪಾತ್ರವಿಲ್ಲ’ ಎಂದಿದ್ದಾರೆ.
- ವೈರಲ್ ಚೆಕ್