ಪ್ರಧಾನಿ ನರೇಂದ್ರ ಮೋದಿ ಅವರ ಓಡಾಟಕ್ಕೆ ಅತ್ಯಾಧುನಿಕ ಸೌಲಭ್ಯವುಳ್ಳ ಹೊಸ ಐಷಾರಾಮಿ ಬೋಯಿಂಗ್‌ 777-300ಇಆರ್‌ ವಿಮಾನವನ್ನು ಖರೀದಿಸಲಾಗಿದೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಅತ್ಯಾಧುನಿಕ ಸೌಲಭ್ಯವುಳ್ಳ ಸುಂದರ ಒಳಾಂಗಣವಿರುವ ವಿಮಾನವೊಂದರ ಫೋಟೋಗಳನ್ನು ಪೋಸ್ಟ್‌ ಮಾಡಿ, ‘ಇದು ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ಏರ್‌ಕ್ರಾಫ್ಟ್‌. ಇದರ ಸೌಂದರ್ಯ ಮತ್ತು ಸೊಬಗು ಮೋದಿ ಅವರ ಐಷಾರಾಮಿ ಜೀವನವನ್ನು ಸಾರ್ವಜನಿಕರಿಗೆ ತೋರಿಸುವಂತಿದೆ’ ಎಂದು ಬರೆಯಲಾಗಿದೆ. ಸದ್ಯ ಈ ಫೋಟೋಗಳು ಸೋಷಿಯಲ್‌ ಮಿಡಿಯಾಗಳಲ್ಲಿ ವೈರಲ್‌ ಆಗುತ್ತಿವೆ.

ಆದರೆ ನಿಜಕ್ಕೂ ಮೋದಿ ಅವರು ವಿದೇಶ ಸಂಚಾರಕ್ಕೆ ಇಷ್ಟೊಂದು ಐಷಾರಾಮಿ ವಿಮಾನ ಬಳಸುತ್ತಿದ್ದಾರೆಯೇ ಎಂದು ಪರಿಶೀಲಿಸಿದಾಗ ಇದು ಸುಳ್ಳು ಸುದ್ದಿ ಎಂಬುದು ಖಚಿತವಾಗಿದೆ.

 

ಏಕೆಂದರೆ ವೈರಲ್‌ ಫೋಟೋಗಳಲ್ಲಿರುವ ವಿಮಾನದ ಒಳಾಂಗಣದ ಚಿತ್ರ ಮೋದಿ ದೇಶ-ವಿದೇಶಗಳಿಗೆ ಸಂಚರಿಸುವ ಬೋಯಿಂಗ್‌ 777-300 ಇಆರ್‌ ವಿಮಾನದ ಒಳಾಂಗಣ ಚಿತ್ರಗಳಲ್ಲ. ಅದು ಬೋಯಿಂಗ್‌ 787 ಡ್ರೀಮ್‌ಲೈನರ್‌ ಐಷಾರಾಮಿ ಏರ್‌ಕ್ರಾಫ್ಟ್‌ನ ಚಿತ್ರ ಎಂದು ತಿಳಿದುಬಂದಿದೆ. 787 ಡ್ರೀಮ್‌ಲೈನರ್‌ ಬೋಯಿಂಗ್‌ ಕಂಪನಿಯ ಜನಪ್ರಿಯ ಎರಡು ಇಂಜಿನ್‌ಗಳನ್ನು ಹೊಂದಿರುವ ಪ್ರಯಾಣಿಕ ಸ್ನೇಹಿ ಖಾಸಗಿ ವಿಮಾನ. 

- ವೈರಲ್ ಚೆಕ್