ಗಡಿ ನಿಯಂತ್ರಣ ರೇಖೆ ಬಳಿ ಭಾರತ- ಚೀನಾ ಸೈನಿಕರು ಬಡಿದಾಡುತ್ತಿರುವ ಫೋಟೋ ಎಲ್ಲೆಡೆ ಹರಿದಾಡುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 

ನವದೆಹಲಿ (ಸೆ. 10): ಜಮ್ಮು-ಕಾಶ್ಮೀರದ ಪೂರ್ವ ಲಡಾಖ್‌ ಪ್ರದೇಶದಲ್ಲಿ ಗಡಿ ವಿಚಾರವಾಗಿ ಕಳೆದ 4 ತಿಂಗಳಿನಿಂದ ಭಾರತ-ಚೀನಾ ಮಧ್ಯೆ ತ್ವೇಷಮಯ ವಾತಾವರಣ ನಿರ್ಮಾಣವಾಗಿದ್ದು, ಯುದ್ಧದ ಭೀತಿ ಎದುರಾಗಿದೆ. ಈ ನಡುವೆ ಸೈನಿಕರು ಬಂಕರ್‌ಗಳನ್ನು ವಶಪಡಿಸಿಕೊಳ್ಳುತ್ತಿರುವ ಫೋಟೋಗಳನ್ನು ಪೋಸ್ಟ್‌ ಮಾಡಿ, ಭಾರತ-ಚೀನಾ ಸೈನಿಕರು ನೈಜ ನಿಯಂತ್ರಣ ರೇಖೆ ಬಳಿ ಹೊಡೆದಾಡುತ್ತಿರುವ ರೀತಿ ಎಂದು ಕೆಲವರು ಹೇಳಿದ್ದು, ಅದು ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗುತ್ತಿದೆ.

ಆದರೆ ನಿಜಕ್ಕೂ ಚೀನಾ ಪೂರ್ವ ಲಡಾಖ್‌ ಗಡಿಯನ್ನು ವಶಪಡಿಸಿಕೊಳ್ಳಲು ಮತ್ತೊಮ್ಮೆ ಭಾರತದ ಗಡಿಯಲ್ಲಿ ದಾಳಿ ಮಾಡಿತೇ ಎಂದು ಇಂಡಿಯಾ ಟುಡೇ ಪರಿಶೀಲಿಸಿದಾಗ ವೈರಲ್‌ ಸುದ್ದಿ ಸುಳ್ಳು, ಹಳೆಯ ಫೋಟೋವೊಂದನ್ನು ಬಳಸಿಕೊಂಡು ತಿರುಚಿ ಸುಳ್ಳುಸುದ್ದಿ ಹರಡಲಾಗುತ್ತಿದೆ ಎಂದು ತಿಳಿದುಬಂದಿದೆ.

Fact Check: ರೈಲ್ವೇ ಇಲಾಖೆ ಪೂರ್ತಿ ಖಾಸಗೀಕರಣವಾಗುತ್ತಿದೆಯಾ?

ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲಿಸಿದಾಗ 2016ರಲ್ಲಿ ಭಾರತ ಮತ್ತು ಚೀನಾ ಸೈನಿಕರು ಜಂಟಿಯಾಗಿ ನಡೆಸಿದ ಸಮರಾಭ್ಯಾಸದ ಫೋಟೋಗಳಿವೆಂಬುದು ಸ್ಪಷ್ಟವಾಗಿದೆ. 2016 ರ ಅಕ್ಟೋಬರ್‌ 20 ರಂದು ಭಾರತೀಯ ಸೇನೆಯ ಉತ್ತರ ಕಮಾಂಡರ್‌ ಅಧಿಕೃತ ಟ್ವೀಟ್‌ ಖಾತೆಯಿಂದ ಈ ಕುರಿತ ಹಲವು ಪೋಸ್ಟ್‌ ಮಾಡಲಾಗಿದ್ದು, ಅದರಲ್ಲಿ ‘ಲಡಾಖ್‌ನಲ್ಲಿ ಭಾರತ-ಸಿನೋ ಸೈನಿಕರು ಜಂಟಿ ಸಮರಾಭ್ಯಾಸ ನಡೆಸಿದರು’ ಎಂದು ಬರೆಯಲಾಗಿತ್ತು.

Scroll to load tweet…

ಇದನ್ನು ಮಾಧ್ಯಮಗಳೂ ವರದಿ ಮಾಡಿದ್ದವು. 2013ರ ಗಡಿ ರಕ್ಷಣಾ ಸಹಕಾರ ಒಪ್ಪಂದದ ಬಳಿಕ 2016ರಲ್ಲಿ 2ನೇ ಬಾರಿಗೆ ಉಭಯ ದೇಶಗಳು ಲಡಾಖ್‌ನಲ್ಲಿ ಜಂಟಿ ಸಮರಾಭ್ಯಾಸ ನಡೆಸಿದ್ದವು. ಹಾಗಾಗಿ ಭಾರತ-ಚೀನಾ ಯುದ್ಧ ನಡೆಸುತ್ತಿವೆ ಎಂದು ವೈರಲ್‌ ಆಗಿರುವ ಸುದ್ದಿ ಸುಳ್ಳು.

- ವೈರಲ್ ಚೆಕ್