Fact Check : ತಮಿಳುನಾಡು ರಾಹುಲ್ ಗಾಂಧಿ ರ್ಯಾಲಿಯಲ್ಲಿ ಜನಸಾಗರ!
ರಾಹುಲ್ ಗಾಂಧಿಯವರು ತಮಿಳುನಾಡಿನಲ್ಲಿ ಪಾಲ್ಗೊಂಡಿದ್ದ ರ್ಯಾಲಿಯಲ್ಲಿ ಲಕ್ಷಾಂತರ ಜನರು ಕಿಕ್ಕಿರಿದು ಸೇರಿದ್ದರು ಎನ್ನಲಾದ ಫೋಟೋವೊಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ನಿಜನಾ ಓ ಸುದ್ದಿ..?
ಬೆಂಗಳೂರು (ಮಾ. 29): ತಮಿಳುನಾಡು ವಿಧಾನಸಭಾ ಚುನಾವಣೆ ಇದೇ ಏಪ್ರಿಲ್ 6ರಿಂದ ಆರಂಭವಾಗಲಿದ್ದು, ವಿವಿಧ ರಾಜಕೀಯ ಪಕ್ಷಗಳು ಭರದಿಂದ ಪ್ರಚಾರ ಕಾರ‍್ಯದಲ್ಲಿ ತೊಡಗಿವೆ. ಇಲ್ಲಿನ ಡಿಎಂಕೆಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್ ಸಹ 25 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರು ಚುನಾವಣಾ ರಾರಯಲಿಯಲ್ಲಿ ಪಾಲ್ಗೊಂಡು ಪಕ್ಷದ ಪರ ಪ್ರಚಾರ ನಡೆಸುತ್ತಿದ್ದಾರೆ. ಹೀಗೆ ರಾಹುಲ್ ಗಾಂಧಿಯವರು ಪಾಲ್ಗೊಂಡಿದ್ದ ರಾರಯಲಿಯಲ್ಲಿ ಲಕ್ಷಾಂತರ ಜನರು ಕಿಕ್ಕಿರಿದು ಸೇರಿದ್ದರು ಎನ್ನಲಾದ ಫೋಟೋವೊಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಆದರೆ ನಿಜಕ್ಕೂ ರಾಹುಲ್ ಅವರನ್ನು ಸ್ವಾಗತಿಸಲು ಇಷ್ಟೊಂದು ಸಂಖ್ಯೆಯಲ್ಲಿ ಜನರು ಸೇರಿದ್ದರೇ ಎಂದು ಸುದ್ದಿಸಂಸ್ಥೆಯೊಂದು ಪರಿಶೀಲಿಸಿದಾಗ ಇದು ಸುಳ್ಳು ಸುದ್ದಿ ಎಂಬುದು ಖಚಿತವಾಗಿದೆ. ರಿವರ್ಸ್ ಇಮೇಜ್‌ನಲ್ಲಿ ಪರಿಶೀಲಿಸಿದಾಗ ವೈರಲ್ ಫೋಟೋ, ಮಾ.19ರಂದು ತಮಿಳುನಾಡಿನಲ್ಲಿ ಡಿಎಂಎಕೆ ಅಧ್ಯಕ್ಷ ಸ್ಟ್ಯಾಲಿನ್ ಅವರು ಪಾಲ್ಗೊಂಡಿದ್ದ ಚುನಾವಣಾ ರಾರಯಲಿಯದ್ದು ಎಂದು ತಿಳಿದುಬಂದಿದೆ. ಡಿಎಂಕೆ ಅಧಿಕೃತ ಫೇಸ್‌ಬುಕ್ ಪೇಜ್ ಮತ್ತು ಟ್ವೀಟರ್‌ನಲ್ಲಿ ಈ ಫೋಟೋವನ್ನು ಅಪ್‌ಲೋಡ್ ಮಾಡಿದೆ. ಅಲ್ಲದೆ ಆ ದಿನ ರಾಹುಲ್ ಗಾಂಧಿ ಅಸ್ಸಾಂನಲ್ಲಿ ಇದ್ದರು. ಹಾಗಾಗಿ ರಾಹುಲ್ ಗಾಂಧಿ ಅವರನ್ನು ಸ್ವಾಗತಿಸಲು ತಮಿಳುನಾಡಿನಲ್ಲಿ ಲಕ್ಷಾಂತರ ಜನ ಸೇರಿದ್ದರು ಎಂದು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿರುವ ಸುದ್ದಿ ಸುಳ್ಳು.
- ವೈರಲ್ ಚೆಕ್