ಪೂರ್ವ ಲಡಾಖ್‌ ಗಡಿ ಸಂಘರ್ಷದಲ್ಲಿ ಚೀನಾ ಭಾರತದ 20 ಯೋಧರನ್ನು ಹತ್ಯೆಗೈದ ಬಳಿಕ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಬೇಕು ಎಂಬ ಕೂಗು ಭಾರತದಲ್ಲಿ ಜೋರಾಗಿದೆ. ಇದರ ಬೆನ್ನಲ್ಲೇ ಚೀನಾ ನಿರ್ಮಿತ ಸ್ಮಾರ್ಟ್‌ಫೋನ್‌ ಅಪ್ಲಿಕೇಷನ್‌ಗಳನ್ನು ಗೂಗಲ್‌ ಪ್ಲೇ ಸ್ಟೋರ್‌ನಿಂದ ತೆಗೆದುಹಾಕುವಂತೆ ಸ್ವತಃ ಕೇಂದ್ರ ಸರ್ಕಾರ ಆದೇಶಿಸಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

 

ಭಾರತದಲ್ಲಿ ಬಳಕೆಯಲ್ಲಿರುವ 13 ಅಪ್ಲಿಕೇಷನ್‌ಗಳನ್ನು ಪ್ಲೇಸ್ಟೋರಿನಿಂದ ತೆಗೆದು ಹಾಕುವಂತೆ ಮಾಹಿತಿ ತಂತ್ರಜ್ಞಾನ ಇಲಾಖೆ ಸೂಚಿಸಿದೆ ಎಂಬ ವಿವರಣೆಯನ್ನು ಒಳಗೊಂಡ ಪ್ರಕಟಣೆ ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗುತ್ತಿದೆ. ಹಾಗೂ ಚೀನಾ ಆ್ಯಪ್‌ಗಳ ಬಗ್ಗೆ ದೇಶದ ನಾಗರಿಕರಲ್ಲಿರುವ ಮಾಹಿತಿ ಗೌಪ್ಯತೆ ಬಗೆಗಿನ ಕಳವಳವನ್ನು ಕೊನೆಗಾಣಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.

ವಿಗೋ ವಿಡಿಯೋ, ಲೈವ್‌ ಮಿ, ಬ್ಯೂಟಿ ಪ್ಲಸ್‌, ಕ್ಯಾಮ್‌ ಸ್ಕ್ಯಾನರ್‌, ಟಿಕ್‌ಟಾಕ್‌, ಆ್ಯಪ್‌ ಲಾಕ್‌, ಶೀನ್‌, ವೀಮೇಟ್‌, ಕ್ಲಬ್‌ ಫ್ಯಾಕ್ಟರಿ, ಗೇಮ್‌ ಆಫ್‌ ಸುಲ್ತಾನ್‌ ಮತ್ತಿತರ ಆ್ಯಪ್‌ಗಳನ್ನು ನಿರ್ಬಂಧಿಸುವಂತೆ ಪ್ರಕಟಣೆಯಲ್ಲಿ ಸೂಚಿಸಲಾಗಿದೆ.

Fact check; ಚೀನಿ ಆಪ್‌ಗಳಿಗೆ ಕೊನೆ ಮೊಳೆ ಹೊಡೆದ ಭಾರತ!

ಇದರ ಸತ್ಯಾಸತ್ಯತೆಯನ್ನು ಪರಿಶೀಲಿಸಿದಾಗ ಇದು ಸುಳ್ಳು ಸುದ್ದಿ. ಚೀನಾ ಆ್ಯಪ್‌ಗಳನ್ನು ತೆಗೆದುಹಾಕುವಂತೆ ಕೇಂದ್ರ ಸರ್ಕಾರ ಗೂಗಲ್‌ ಪ್ಲೇ ಸ್ಟೋರ್‌ಗೆ ಆದೇಶ ನೀಡಿಲ್ಲ ಎಂದು ಹೇಳಿದೆ. ಹಾಗಾಗಿ ಚೀನಾಆ್ಯಪ್‌ಗಳಿಗೆ ಕೇಂದ್ರ ಸರ್ಕಾರವೇ ಗೇಟ್‌ಪಾಸ್‌ ನೀಡುತ್ತಿದೆ ಎಂದು ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿ ಸುಳ್ಳು.

- ವೈರಲ್ ಚೆಕ್