ವಾಷಿಂಗ್‌ಟನ್ (ನ. 12):  ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್‌ ಪಕ್ಷದ ಜೋ ಬೈಡೆನ್‌, ಹಾಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಪರಾಭವಗೊಳಿಸಿದ್ದಾರೆ. ಅಮೆರಿಕದ 46ನೇ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಬೈಡೆನ್‌ ಮುಂದಿನ ವರ್ಷ ಜನವರಿ 20ರಂದು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.

ಈ ಅದ್ಧೂರಿ ಕಾರ‍್ಯಕ್ರಮಕ್ಕೆ ಭಾರತದ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರನ್ನು ಮುಖ್ಯ ಅಥಿತಿಯಾಗಿ ಬೈಡೆನ್‌ ಆಹ್ವಾನಿಸಿದ್ದಾರೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಬೈಡೆನ್‌ ಅವರೊಂದಿಗೆ ಮನಮೋಹನ್‌ ಸಿಂಗ್‌ ಚರ್ಚಿಸುತ್ತಿರುವ ಫೋಟೋವನ್ನು ಪೋಸ್ಟ್‌ ಮಾಡಿ ಹೀಗೆ ಹೇಳಲಾಗುತ್ತಿದೆ.

ಆದರೆ ನಿಜಕ್ಕೂ ನಿಯೋಜಿತ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರು ಭಾರತದ ಮನಮೋಹನ ಸಿಂಗ್‌ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದಾರೆಯೇ ಎಂದು ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ ಎಂಬುದು ಖಚಿತವಾಗಿದೆ.

Fact Check : ಡೆನ್ಮಾರ್ಕಲ್ಲಿ ಮುಸ್ಲಿಮರಿಗೆ ಮತದಾನ ಮಾಡಲು ನಿಷೇಧ?

ಸಿಂಗ್‌ ಅವರ ಕಚೇರಿಯೇ ಈ ಸುದ್ದಿಯನ್ನು ಅಲ್ಲಗಳೆದು, ‘ಅಂಥ ಯಾವುದೇ ಆಹ್ವಾನ ಇದುವರೆಗೆ ಬಂದಿಲ್ಲ. ಮೇಲಾಗಿ ಚುನಾವಣಾ ಫಲಿತಾಂಶ ಇನ್ನೂ ಅಧಿಕೃತವಾಗಿ ಘೋಷಣೆಯಾಗಿಲ್ಲ’ ಎಂದಿದೆ. ಅಧ್ಯಕ್ಷ ಬೈಡೆನ್‌ ಅವರು ತಮ್ಮ ರಾಜಕೀಯ ಜೀವನದುದ್ದದಕ್ಕೂ ಭಾರತದೊಂದಿಗೆ ಉತ್ತಮ ಬಾಂದವ್ಯ ಹೊಂದಿದ್ದಾರೆ. ಆದರೆ ಪ್ರಮಾಣವಚನ ಕಾರ‍್ಯಕ್ರಮಕ್ಕೆ ಆಹ್ವಾನ ನೀಡಿದ ಬಗ್ಗೆ ಎಲ್ಲೂ ವರದಿಯಾಗಿಲ್ಲ. ಅಲ್ಲದೆ ಅಮೆರಿಕದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭಗಳಲ್ಲಿ ಮುಖ್ಯ ಅಥಿತಿಗಳನ್ನು ಆಹ್ವಾನಿಸುವ ಸಂಪ್ರದಾಯ ಇಲ್ಲ.

- ವೈರಲ್ ಚೆಕ್