ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರನ್ನು ಕೊಂದ ಪಾತಕಿ ನಾತುರಾಮ್‌ ಗೋಡ್ಸೆ ಅವರಿಗೆ ಗೌರವ ನಮನ ಸಲ್ಲಿಸುತ್ತಿದ್ದಾರೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

 

ಪ್ರಧಾನಿ ಮೋದಿ ಫೋಟೋವೊಂದರ ಮುಂದೆ ಕುಳಿತು ಎರಡೂ ಕೈ ಜೋಡಿಸಿ ನಮಸ್ಕರಿಸುತ್ತಿರುವ ಫೋಟೋವನ್ನು ಪೋಸ್ಟ್‌ ಮಾಡಿ ಹೀಗೆ ಹೇಳಲಾಗುತ್ತಿದೆ. ಕೆಲವರು, ಪ್ರಧಾನಿ ಮೋದಿ ಮಹಾತ್ಮ ಗಾಂಧಿ ಮತ್ತು ಗೋಡ್ಸೆ ಇಬ್ಬರಿಗೂ ನಮಿಸುತ್ತಿರುವ ಫೋಟೋವನ್ನು ಸಂಕಲಿಸಿ, ‘ಪ್ರಧಾನಿ ಮೋದಿ ಮಹಾತ್ಮ ಗಾಂಧಿ ಅವರಿಗೆ ಮತ್ತು ಗಾಂಧಿ ಕೊಂದವರಿಗೆ ಒಟ್ಟಿಗೇ ನಮಿಸುತ್ತಿದ್ದಾರೆ. ಇದು ಮೋದಿ ಅವರ ವ್ಯಕ್ತಿತ್ವ’ ಎಂದು ಬರೆದುಕೊಂಡಿದ್ದಾರೆ. ಇದೀಗ ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗುತ್ತಿದೆ.

ಆದರೆ ನಿಜಕ್ಕೂ ಪ್ರಧಾನಿ ಮೋದಿ ಗಾಂಧಿ ಕೊಂದ ಪಾತಕಿ ಗೋಡ್ಸೆ ಫೋಟೋಗೆ ನಮಿಸಿದ್ದರೇ ಎಂದು ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ, ಮೋದಿ ನಮಿಸುತ್ತಿರುವುದು ಗೋಡ್ಸೆ ಫೋಟೋಗಲ್ಲ, ವೀರ್‌ ಸಾರ್ವಕರ್‌ ಫೋಟೋಗೆ ಎಂಬುದು ಖಚಿತವಾಗಿದೆ.

Fact Check : ಫೇಸ್ಬುಕ್ಕಲ್ಲಿ ದಿನಾ 200 ಕೋಟಿ ಜೈ ಶ್ರೀರಾಮ್ ಜಪ?

ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲಿಸಿದಾಗ ಇದೇ ಫೋಟೋವನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಡಿ. 30, 2018ರಂದು ತಮ್ಮ ಟ್ವೀಟರ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವುದು ಪತ್ತೆಯಾಗಿದೆ. ಅದರಲ್ಲಿ ವೀರ್‌ ಸಾರ್ವಕರ್‌ ಅವರು ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪದ ಸೆಲ್ಯುಲಾರ್‌ ಜೈಲಿನಲ್ಲಿದ್ದರು. ಅದಮ್ಯ ವೀರ ಸಾರ್ವಕರ್‌ ಅವರು ಇದ್ದ ಕೋಣೆಗೆ ನಾನು ಭೇಟಿ ನೀಡಿದ್ದೆ. ಕಠಿಣ ಕಾರಾಗೃಹ ವಾಸವು ವೀರ್‌ ಸಾರ್ವಕರ್‌ ಅವರ ಉತ್ಸಾಹವನ್ನು ಕುಗ್ಗಿಸಲಿಲ್ಲ’ ಎಂದು ಬರೆದುಕೊಂಡಿದ್ದರು. ಈ ಬಗ್ಗೆ ಹಲವು ಮುಖ್ಯವಾಹಿನಿ ಮಾಧ್ಯಮಗಳೂ ವರದಿ ಮಾಡಿದ್ದವು. ಹೀಗಾಗಿ ವೈರಲ್‌ ಸುದ್ದಿ ಸುಳ್ಳು ಎಂಬುದು ಸ್ಪಷ್ಟ.

 -ವೈರಲ್ ಚೆಕ್