ಐತಿಹಾಸಿಕ ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣಕ್ಕಾಗಿ ಭೂಮಿ ಪೂಜೆ ನೆರವೇರಿಸಲಾಗಿದೆ. ರಾಮಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಇಟ್ಟಸಂತೋಷಕ್ಕಾಗಿ ಫೇಸ್‌ಬುಕ್‌ ಭಾರತೀಯರೆಲ್ಲರಿಗೆ ಉಡುಗೊರೆ ನೀಡಿದೆ. ತನ್ನ ಕಾಮೆಂಟ್‌ ಇಮೋಜಿಯಲ್ಲಿ ಹಿಂದೂ ಧ್ವಜ (ಕೇಸರಿ)ವನ್ನೂ ಸೇರ್ಪಡೆ ಮಾಡಿದೆ.

ಫೇಸ್‌ಬುಕ್‌ ಆ್ಯಪ್‌ ಅಪ್‌ಡೇಟ್‌ ಮಾಡಿದವರಿಗೆ ಈ ಆಯ್ಕೆ ಕಾಣಿಸುತ್ತದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಫೇಸ್‌ಬುಕ್‌ನ 7 ಇಮೋಜಿಗಳಲ್ಲಿ ಎರಡನೇ ಇಮೋಜಿ ಜಾಗದಲ್ಲಿ ಹಿಂದೂ ಧ್ವಜ ಇರುವ ಸ್ಕ್ರೀನ್‌ಶಾಟ್‌ ಫೋಟೋವನ್ನು ಪೋಸ್ಟ್‌ ಮಾಡಿ ಹೀಗೆ ಹೇಳಲಾಗುತ್ತಿದೆ.

ಆದರೆ ನಿಜಕ್ಕೂ ಫೇಸ್‌ಬುಕ್‌ ಹಿಂದೂ ಧ್ವಜವನ್ನು ತನ್ನ ಇಮೋಜಿಯಲ್ಲಿ ಸೇರ್ಪಡೆ ಮಾಡಿದೆಯೇ ಎಂದು ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ ಎಂಬುದು ಸ್ಪಷ್ಟವಾಗಿದೆ. ವೈರಲ್‌ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದು ಫೋಟೋಶಾಪ್‌ ಮೂಲಕ ಎಡಿಟ್‌ ಮಾಡಿರುವ ಚಿತ್ರ ಎಂಬುದು ಸ್ಪಷ್ಟವಾಗುತ್ತದೆ. ಫೇಸ್‌ಬುಕ್‌ನ ‘ಲವ್‌’ ಇಮೋಜಿಯ ಜಾಗದಲ್ಲಿ ಕೇಸರಿ ಬಾವುಟವನ್ನು ಸಂಕಲಿಸಿ ಎಡಿಟ್‌ ಮಾಡಿ ಸೋಷಿಯಲ್‌ ಮೀಡಿಯಾಗಳಲ್ಲಿ ಹರಿಬಿಡಲಾಗಿದೆ. ಹಾಗಾಗಿ ಇದು ಸುಳ್ಳುಸುದ್ದಿ ಎಂಬುದು ಖಚಿತ.

- ವೈರಲ್ ಚೆಕ್