ಪಶ್ಚಿಮ ಬಂಗಾಳ ಸೇರಿ ಉತ್ತರ ಭಾರತದ ಹಲವೆಡೆ ದುರ್ಗಾಪೂಜೆಗೆ ವಿಶೇಷ ಸ್ಥಾನವಿದೆ. ಸದ್ಯ ದುರ್ಗಾ ಪೂಜೆ ಪೆಂಡಾಲ್‌ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ನಿಜನಾ ಇದು..? 

ಪಶ್ಚಿಮ ಬಂಗಾಳ ಸೇರಿ ಉತ್ತರ ಭಾರತದ ಹಲವೆಡೆ ದುರ್ಗಾಪೂಜೆಗೆ ವಿಶೇಷ ಸ್ಥಾನವಿದೆ. ಸದ್ಯ ದುರ್ಗಾ ಪೂಜೆ ಪೆಂಡಾಲ್‌ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಫೋಟೋದಲ್ಲಿ ಒಂದುಕಡೆ ದುರ್ಗಾ ಮಾತೆಯ ವಿಗ್ರಹ ಇದ್ದರೆ ಇನ್ನೊಂದು ಕಡೆ ನಮಾಜ್‌ ವೇಳಾಪಟ್ಟಿಇದೆ. ವೇಳಾಪಟ್ಟಿಯನ್ನೇ ಮಾರ್ಕ್ ಮಾಡಿ ಈ ಫೋಟೋ ಪಶ್ಚಿಮ ಬಂಗಾಳದ್ದು ಎಂದು ನೆಟ್ಟಿಗರು ಶೇರ್‌ ಮಾಡುತ್ತಿದ್ದಾರೆ. ‘ದುರ್ಗಾ ಪೂಜೆ ಪೆಂಡಾಲ್‌ಗಳಲ್ಲಿ ಮಂತ್ರಗಳು ಮೊಳಗುತ್ತಿಲ್ಲ, ಭಜನೆಯ ಹಾಡುಗಳಿಲ್ಲ. ಯಾವುದೇ ರೀತಿಯ ಪ್ರಾರ್ಥನೆ ಇಲ್ಲ. ಏಕೆಂದರೆ ನಾಮಾಜ್‌ ವೇಳಾಪಟ್ಟಿಸಿದ್ಧವಾಗಿದೆ’ ಎಂದು ಬರೆದು ಹಂಚಿಕೊಳ್ಳುತ್ತಿದ್ದಾರೆ.

ವೈರಲ್‌ ಆಗಿರುವ ಫೋಟೋ ನಿಜಕ್ಕೂ ಪಶ್ಚಿಮ ಬಂಗಾಳದ್ದೇ ಎಂದು ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ ಎಂಬುದು ಖಚಿತವಾಗಿದೆ. ವಾಸ್ತವವಾಗಿ ಇದು ಬಾಂಗ್ಲಾದೇಶದ ರಾಜಧಾನಿ ಢಾಕಾದ ಚಿತ್ರ. ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದರೆ ಬಂಗಾಳಿ ಭಾಷೆಯಲ್ಲಿ ‘ಉತ್ತರ ಸರ್ಬೋಜೆನಿನ್‌ ಪೂಜಾ ಸಮಿತಿ’ ಎಂದು ಬರೆದಿರುವುದು ಕಾಣುತ್ತದೆ. ಇದಕ್ಕೆ ಸಂಬಂಧಿಸಿದ ಪದಗಳನ್ನು ಗೂಗಲ್‌ನಲ್ಲಿ ಹುಡುಕಾಟ ನಡೆಸಿದಾಗ ಬಾಂಗ್ಲಾ ವೆಬ್‌ಸೈಟ್‌ವೊಂದರಲ್ಲಿ ಈ ಪದ ಪತ್ತೆಯಾಗಿದೆ. ಅದರಲ್ಲಿ ಈ ಸಮಿತಿ ಇರುವುದು ಢಾಕಾದಲ್ಲಿ ಎಂಬ ವಿಷಯ ಸ್ಪಷ್ಟವಾಗಿದೆ. ನಮಾಜ್‌ ನಡೆಯುವ ಸಮಯದಲ್ಲಿ ದುರ್ಗಾ ದೇವಿ ಪೆಂಡಾಲ್‌ನಲ್ಲಿ ಸಂಗೀತ ಮೊಳಗಿಸಬಾರದು ಎಂಬ ಕಾರಣಕ್ಕೆ ವೇಳಾಪಟ್ಟಿನಮೂದಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

- ವೈರಲ್ ಚೆಕ್