ಕೊರೋನಾ ಭಾರತದಲ್ಲಿ ಆತಂಕಕಾರಿಯಾಗಿ ಹಬ್ಬುತ್ತಿದೆ. ಈ ನಡುವೆ ಕೊರೋನಾ ವೈರಸ್‌ ಸೋಂಕು ತಗಲದಂತೆ ತಡೆಯಲು ಮತ್ತು ಕೊರೋನಾ ಸೋಂಕು ಈಗಾಗಲೇ ದೃಢಪಟ್ಟಿದ್ದರೂ ಗುಣಮುಖರಾಗಲು ಸರಳವಾದ ಮನೆಮದ್ದು ‘ಕೊರೋನಾ ಕಷಾಯ’ ಸಾಕು ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

Fact Check: ಕಾಫಿ ಕುಡಿದರೆ ಕೊರೋನಾ ಬರಲ್ವಂತೆ..!

ಒಂದು ಲೀಟರ್‌ ನೀರಿಗೆ ಒಂದು ಚಮಚ ಅರಿಶಿನ ಪುಡಿ, 2 ಲವಂಗ, ಒಂದು ನಿಂಬೆಹಣ್ಣು, ಶುಂಠಿ ಹಾಕಿ ಕುದಿಯಲು ಇಡಿ. ನೀರು ಅರ್ಧ ಲೀಟರ್‌ ಆಗುವವರೆಗೂ ಕುದಿಸಿದರೆ ಕೊರೋನಾ ಕಷಾಯ ಸಿದ್ಧ. ಅದನ್ನು ಮೂರು ದಿನ ದಿನಕ್ಕೆ 2 ಬಾರಿ ಸೇವಿಸಿದರೆ ಕೊರೋನಾ ಗುಣಮುಖವಾಗುತ್ತದೆ ಎಂದು ಹೇಳಲಾಗುತ್ತಿದೆ. ಆಯುರ್ವೇದ ವೈದ್ಯರೇ ಈ ಸಲಹೆ ನೀಡಿದ್ದಾರೆ ಎಂದೂ ಹೇಳಲಾಗಿದೆ. ಕೊರೋನಾ ಕಷಾಯ ಮಾಡುವ ವಿಧಾನವನ್ನು ಬರೆದ ಫೋಟೋವನ್ನು ನೆಟ್ಟಿಗಳು ಶೇರ್‌ ಮಾಡುತ್ತಿದ್ದು, ವೈರಲ್‌ ಆಗುತ್ತಿದೆ.

 

ಆದರೆ ನಿಜಕ್ಕೂ ಈ ಕಷಾಯ ಕುಡಿದರೆ ಕೊರೋನಾ ಗುಣಮುಖವಾಗುತ್ತದೆಯೇ ಎಂದು ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ ಎಂಬುದು ಸಾಬೀತಾಗಿದೆ. ಏಕೆಂದರೆ ಈ ರೀತಿಯ ಕಷಾಯ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ಆಯುರ್ವೇದ ವೈದ್ಯರು ಹೇಳಿದ್ದಾರೆಯೇ ವಿನಃ ಇದರಿಂದ ಕೊರೋನಾ ಗುಣಮುಖವಾಗುತ್ತದೆಂದು ಎಲ್ಲೂ ಹೇಳಿಲ್ಲ. ಕಷಾಯಕ್ಕೆ ಬಳಸಿದ ವಸ್ತುಗಳಿಂದ ಕೊರೋನಾ ಗುಣಮುಖವಾಗುತ್ತದೆಂದೂ ಯಾವ ಸಂಶೋಧನೆಗಳೂ ಹೇಳಿಲ್ಲ. ಹಾಗಾಗಿ ಈ ಸುದ್ದಿ ಸತ್ಯಕ್ಕೆ ದೂರವಾದುದು.

- ವೈರಲ್ ಚೆಕ್