ಕೋಳಿ ಮಾಂಸ ಸೇವಿಸಿದರೆ ಕೊರೋನಾ ವೈರಸ್‌ ತಗುಲುತ್ತದೆ ಎಂಬ ವದಂತಿ ಈ ಹಿಂದೆ ಕೇಳಲ್ಪಟ್ಟಾಗ ಇಡೀ ಕುಕ್ಕುಟೋದ್ಯಮವೇ ನೆಲ ಕಚ್ಚಿತ್ತು. ಇದೀಗ ಮತ್ತೊಮ್ಮೆ ಅಂಥದ್ದೇ ಸುದ್ದಿ ಹರಿದಾಡುತ್ತಿದೆ.

ದಿನಪತ್ರಿಕೆಯ ಸುದ್ದಿ ತುಣುಕೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿ, ಬಿಹಾರದ ಪೌಲ್ಟ್ರಿ ಫಾರಂಗಳಲ್ಲಿ ಕೊರೋನಾ ವೈರಸ್‌ ಕಂಡುಬಂದಿದೆ ಎಂದು ಹೇಳಲಾಗುತ್ತಿದೆ. ‘ದೈನಿಕ್‌ ಜಾಗರಣ್‌’ ದಿನಪತ್ರಿಕೆ ಹೆಸರಿನಲ್ಲಿರುವ ವರದಿಯಲ್ಲಿ, ‘ಬಿಹಾರದ ಆರೋಗ್ಯ ಇಲಾಖೆಯು ರಾಜ್ಯದ ವಿವಿಧ ಭಾಗಗಳಲ್ಲಿರುವ ಪೌಲ್ಟ್ರಿ ಕೋಳಿ ಫಾರಂಗಳ ಮಾದರಿಯನ್ನು ಪಡೆದು ಪರೀಕ್ಷಿಸಿದಾಗ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಆದ್ದರಿಂದ ರಾಜ್ಯದ ಜನರು ಕೋಳಿ ಮಾಂಸ ಸೇವಿಸದಿರುವಂತೆ ರಾಜ್ಯ ಆರೋಗ್ಯ ಇಲಾಖೆ ಸೂಚಿಸಿದೆ’ ಎಂದಿದೆ.

#Factcheck: ಕೊರೋನಾ ಸೋಂಕಿತೆ ಮೇಲೆ ಅತ್ಯಾಚಾರ ನಡೆಯಿತಾ?

ಆದರೆ ನಿಜಕ್ಕೂ ಬಿಹಾರ ಪೌಲ್ಟಿ್ರ ಫಾರಂಗಳಲ್ಲಿ ಕೊರೋನಾ ವೈರಸ್‌ ಪತ್ತೆಯಾಗಿದೆಯೇ ಎಂದು ಪರಿಶೀಲಿಸಿದಾಗ, ದೈನಿಕ್‌ ಜಾಗರಣ್‌ ಹೆಸರಿನಲ್ಲಿ ಹರಿಬಿಡಲಾಗದ ಸುದ್ದಿ ನಕಲಿ ಎಂಬುದು ಖಚಿತವಾಗಿದೆ.

ದಿನಪತ್ರಿಕೆಯ ಮೂಲ ಮಾಸ್ಟ್‌ ಹೆಡ್‌ಗೂ ವೈರಲ್‌ ಪೋಸ್ಟ್‌ನಲ್ಲಿರುವ ಮಾಸ್ಟ್‌ ಹೆಡ್‌ಗೂ ಸಾಕಷ್ಟುವ್ಯತ್ಯಾಸ ಕಾಣುತ್ತದೆ. ಜೊತೆಗೆ ಬೂಮ್‌, ದೈನಿಕ್‌ ಜಾಗರಣ್‌ ಪತ್ರಿಕೆ ಸಂಪಾದಕರ ಬಳಿಯೇ ಸ್ಪಷ್ಟನೆ ಕೇಳಿದಾಗ ಅವರು, ‘ಇಂಥ ಸುದ್ದಿಯನ್ನು ನಮ್ಮ ಪತ್ರಿಕೆಯಲ್ಲಿ ಪ್ರಕಟಿಸಿಲ್ಲ. ಇದು ಸುಳ್ಳು ಸುದ್ದಿ’ ಎಂದಿದ್ದಾರೆ.

ಹಾಗೆಯೇ ಪಶುಸಂಗೋಪನಾ ಇಲಾಖೆಯೂ ಸ್ಪಷ್ಟನೆ ನೀಡಿ, ರಾಜ್ಯದ ಯಾವುದೇ ಭಾಗದಲ್ಲೂ ವೈರಲ್‌ ಪೋಸ್ಟ್‌ ನಲ್ಲಿ ಹೇಳಿರುವಂಥ ಪರೀಕ್ಷೆ ಕೈಗೊಂಡಿಲ್ಲ ಎಂದಿದೆ. ಹಾಗಾಗಿ ಕೋಳಿ ಫಾರಂಗಳಲ್ಲಿ ಕೊರೋನಾ ವೈರಸ್‌ ಕಂಡುಬಂದಿದೆ ಎಂಬ ಸುದ್ದಿ ಸುಳ್ಳು.

- ವೈರಲ್ ಚೆಕ್