Fact Check: ಮಿಯಾ ಖಲೀಫಾಗೆ ಕಾಂಗ್ರೆಸ್ ಕಾರ್ಯಕರ್ತರು ಕೇಕ್ ತಿನ್ಸಿದ್ರಾ?
ರೈತ ಪ್ರತಿಭಟನೆಗೆ ಬೆಂಬಲಿಸಿದ ಅಮೆರಿಕದ ಮಾಜಿ ನೀಲಿ ಚಿತ್ರತಾರೆ ಮಿಯಾ ಖಲೀಫಾಗೆ ಕಾಂಗ್ರೆಸ್ ಕಾರ‍್ಯಕರ್ತರ ಗುಂಪೊಂದು ಕೇಕ್ ತಿನ್ನಿಸುತ್ತಿರುವ ಫೋಟೋ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಿಜನಾ ಇದು..?
ಬೆಂಗಳೂರು (ಫೆ. 09): ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಕಳೆದ 3 ತಿಂಗಳಿಂದ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಬಗ್ಗೆ ಅಮೆರಿಕ ಪಾಪ್ ಹಾಡುಗಾರ್ತಿ ರಿಹಾನಾ ಮತ್ತು ಸಾಮಾಜಿಕ ಹೋರಾಟಗಾರ್ತಿ ಗ್ರೇಟಾ ಥನ್‌ಬರ್ಗ್ ಧ್ವನಿ ಎತ್ತಿದ್ದ ಬೆನ್ನಲ್ಲೇ ಅಮೆರಿಕದ ಮಾಜಿ ನೀಲಿ ಚಿತ್ರತಾರೆ ಮಿಯಾ ಖಲೀಫಾ ಕೂಡ ರೈತರ ಪ್ರತಿಭಟನೆಯನ್ನು ಬೆಂಬಲಿಸಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಕಾಂಗ್ರೆಸ್ ಕಾರ‍್ಯಕರ್ತರ ಗುಂಪೊಂದು ಮಿಯಾ ಖಲೀಫಾ ಫೋಟೋಗೆ ಕೇಕ್ ತಿನ್ನಿಸುತ್ತಿರುವ ಫೋಟೋ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಫೋಟೋಗಳನ್ನು ಪೋಸ್ಟ್ ಮಾಡಿ ಕೆಲವರು, ‘ಅಡಿಯಾಳು ಮನಸ್ಥಿತಿ, ಓಲೈಕೆಯ ಪರಮಾವಧಿ..ಉಫ್. ಇದು ಕಾಂಗ್ರೆಸ್ ಸಂಸ್ಕೃತಿ’ ಎಂದು ಒಕ್ಕಣೆ ಬರೆದುಕೊಂಡಿದ್ದಾರೆ. ಇದೀಗ ವೈರಲ್ ಆಗಿದೆ.
ಆದರೆ ನಿಜಕ್ಕೂ ಕಾಂಗ್ರೆಸ್ ಕಾರ‍್ಯಕರ್ತರು ಮಿಯಾ ಅವರ ಫೋಟೋಗೆ ಕೇಕ್ ತಿನ್ನಿಸಿದ್ದರೇ ಎಂದು ಪರಿಶೀಲಿಸಿದಾಗ, ಫೋಟೋಶಾಪ್ ಮೂಲಕ ತಿರುಚಿ ಈ ರೀತಿ ಸುಳ್ಳು ಸುದ್ದಿ ಎಂಬುದು ಸ್ಪಷ್ಟವಾಗಿದೆ. ರಿವರ್ಸ್ ಇಮೇಜ್‌ನಲ್ಲಿ ಪರಿಶೀಲಿಸಿದಾಗ 2007ರಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ 37ನೇ ವರ್ಷದ ಹುಟ್ಟಿದ ದಿನವನ್ನು ಕಾಂಗ್ರೆಸ್ ಯುವ ಘಟಕದ ಕಾರ‍್ಯಕರ್ತರು ಕೇಕ್ ಕತ್ತರಿಸುವ ಮೂಲಕ ಆಚರಿಸಿದ್ದರು. ಈ ಸಂಭ್ರಮಾಚರಣೆಯ ಫೋಟೋವನ್ನೇ ತಿರುಚಿ ಈ ರೀತಿ ಸುಳ್ಳುಸುದ್ದಿ ಬಿತ್ತಲಾಗಿದೆ ಎಂಬುದು ಖಚಿತವಾಗಿದೆ.
- ವೈರಲ್ ಚೆಕ್