ಅಂಫಾನ್‌ ಚಂಡಮಾರುತದಿಂದ ಉಂಟಾದ ಹಾನಿ ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಮೇ 22ರಂದು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ್ದರು. ಈ ವೇಳೆ ‘ಚೌಕಿದಾರ್‌ ಚೋರ್‌ ಹೈ’ ಎನ್ನುವ ಮೂಲಕ ಪ್ರಧಾನಿ ಮೋದಿಗೆ ‘ಸ್ವಾಗತ’ ನೀಡಲಾಯ್ತು ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಚಂಡಮಾರುತದ ಅಬ್ಬರಕ್ಕೆ ಬಂಗಾಳದಲ್ಲಿ 80ಕ್ಕೂ ಹೆಚ್ಚು ಜನರು ಬಲಿಯಾಗಿ, ಅಪಾರ ಆಸ್ತಿ-ಪಾಸ್ತಿ ಹಾನಿ ಉಂಟಾಗಿದೆ. ಆದ್ದರಿಂದ ಮೋದಿ, ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ರಾಜ್ಯಪಾಲ ಜಗದೀಪ್‌ ಧಂಖರ್‌ ಅವರ ಜೊತೆಗೂಡಿ ತೀವ್ರ ಹಾನಿಗೆ ಒಳಗಾದ ಜಿಲ್ಲೆಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ್ದರು. ಈ ವೇಳೆ ಪ್ರಧಾನಿ ಸಮೀಕ್ಷೆಗೆಂದು ಹೆಲಿಕಾಪ್ಟರ್‌ ಏರುವ ಮುನ್ನ ಮಮತಾ ಜೊತೆ ಸಾಗುತ್ತಿರುವಾಗ ‘ಚೌಕಿದಾರ್‌ ಚೋರ್‌ ಹೈ’ ಎಂದು ಜನರು ಕಿರುಚುವ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕಾಂಗ್ರೆಸ್‌ ಬೆಂಬಲಿತ ಫೇಸ್‌ಬುಕ್‌ ಪೇಜ್‌ಗಳಲ್ಲಿ ಈ ವಿಡಿಯೋ ಹೆಚ್ಚಾಗಿ ಕಂಡುಬಂದಿದೆ.

 

ಆದರೆ ನಿಜಕ್ಕೂ ಪ್ರಧಾನಿಗೆ ‘ಚೌಕಿದಾರ್‌ ಚೋರ್‌ ಹೈ’ ಎನ್ನುವ ಮೂಲಕ ಅವಮಾನ ಮಾಡಲಾಗಿತ್ತೇ ಎಂದು ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ ಎಂಬುದು ಸಾಬೀತಾಗಿದೆ. ವೈರಲ್‌ ವಿಡಿಯೋದ ಮೂಲ ವಿಡಿಯೋ ಲಭ್ಯವಾಗಿದ್ದು, ಅದರಲ್ಲಿ ‘ಜೈ ಶ್ರೀರಾಮ್‌’ ಎಂದು ಪಠಿಸಿರುವ ಧ್ವನಿ ಇದೆ. ಹಾಗಾಗಿ ಚೌಕಿದಾರ್‌ ಚೋರ್‌ ಎಂಬ ಧ್ವನಿಯನ್ನು ಎಡಿಟ್‌ ಮಾಡಿ ಸೇರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಸುದ್ದಿ ಹರಿಬಿಡಲಾಗಿದೆ ಎಂಬುದು ಸ್ಪಷ್ಟ.

- ವೈರಲ್ ಚೆಕ್