ನವದೆಹಲಿ (ಜೂ. 30): ಪೂರ್ವ ಲಡಾಖ್‌ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ನೆರೆಯ ಚೀನಾ ಮತ್ತು ಭಾರತದ ಮಧ್ಯೆ ಹಿಂಸಾತ್ಮಕ ಘರ್ಷಣೆ ಏರ್ಪಟ್ಟು ಚೀನಾ ಭಾರತದ 20 ಯೋಧರನ್ನು ಹತ್ಯೆಗೈದಿದೆ. ಇದೇ ವಿಷಯವಾಗಿ ಭಾರತ-ಚೀನಾ ಮಧ್ಯೆ ಯುದ್ಧದ ಕಾರ್ಮೋಡ ಸಹ ಕವಿದಿದೆ.

ಈ ನಡುವೆ ಚೀನಾ ಸೈನಿಕರು ಭಾರತದ ಯೋಧರನ್ನು ಹೇಗೆ ಹಿಂಸಿಸುತ್ತಿದ್ದಾರೆ ನೋಡಿ ಎಂದು ಬರೆದು, ಸೈನಿಕರನ್ನು ನೆಲದ ಮೇಲೆ ಬೀಳಿಸಿ, ಕೈಕಾಲನ್ನು ಒಟ್ಟಿಗೆ ಸೇರಿಸಿ ಹಿಂದಕ್ಕೆ ಕಟ್ಟಿಆ ಹಗ್ಗವನ್ನು ಜಗ್ಗಿ ಎಳೆಯುತ್ತಾ ಯೋಧರನ್ನು ಹಿಂಸಿಸುತ್ತಿರುವ ವಿಡಿಯೋವೊಂದನ್ನು ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಲಾಗುತ್ತಿದೆ.

Fact Check: ಭಾರತದಲ್ಲಿ ಚೀನಾ ಬ್ಯಾಂಕ್‌ ತೆರೆಯಲು ಅನುಮತಿ ನೀಡಿತಾ ಆರ್‌ಬಿಐ?

‘ಜೆಕೆ ಟೈಮ್ಸ್‌’ ಹೆಸರಿನ ಫೇಸ್‌ಬುಕ್‌ ಪೇಜ್‌ ಮೊದಲಿಗೆ ಇದನ್ನು ಪೋಸ್ಟ್‌ ಮಾಡಿ, ‘ಲಡಾಖ್‌ ಗಡಿಯಲ್ಲಿ ಚೀನಾ ಸೈನಿಕರು ನಮ್ಮ ಯೋಧರನ್ನು ಹೀಗೆಲ್ಲಾ ಹಿಂಸಿಸುತ್ತಿದ್ದಾರೆ’ ಎಂದು ಬರೆದುಕೊಂಡಿತ್ತು. ಅನಂತರ ಈ ವಿಡಿಯೋ ವೈರಲ್‌ ಆಗುತ್ತಿದೆ.

 

ಆದರೆ ನಿಜಕ್ಕೂ ವಿಡಿಯೋದಲ್ಲಿವವರು ಭಾರತದ ಯೋಧರೇ ಎಂದು ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ ಎಂಬುದು ಖಚಿತವಾಗಿದೆ. ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲಿಸಿದಾಗ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಯುಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡಿದ್ದ ಇದೇ ರೀತಿಯ ವಿಡಿಯೋ ಪತ್ತೆಯಾಗಿದೆ. ಅದರಲ್ಲಿ ‘ಕಠಿಣ ತರಬೇತಿ ಪಡೆಯುತ್ತಿರುವ ಬಾಂಗ್ಲಾದೇಶಿ ಸೈನಿಕರು’ ಎಂದು ಅಡಿಬರಹ ಬರೆಯಲಾಗಿದೆ. ಜೊತೆಗೆ ಮೂಲ ವಿಡಿಯೋದಲ್ಲಿ ಯೋಧರು ಬಂಗಾಳಿ ಭಾಷೆಯಲ್ಲಿ ಸಂವಹನ ನಡೆಸುತ್ತಿರುವುದನ್ನೂ ಕಾಣಬಹುದು. ಹಾಗಾಗಿ ವೈರಲ್‌ ವಿಡಿಯೋ ಭಾರತದ್ದಲ್ಲ ಎಂಬುದು ಸ್ಪಷ್ಟ.

- ವೈರಲ್ ಚೆಕ್