ಪ್ರಖ್ಯಾತ ಬಡ್‌ವೈಸರ್‌ ಬಿಯರ್‌ನಲ್ಲಿ ಕಳೆದ 12 ವರ್ಷದಿಂದ ಮನುಷ್ಯರ ಮೂತ್ರ ಮಿಶ್ರಣ ಮಾಡಲಾಗುತ್ತಿತ್ತು ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗುತ್ತಿದೆ.

‘ಬಿಯರ್‌ ಪ್ರಿಯರಿಗೊಂದು ಶಾಕಿಂಗ್‌ ಸುದ್ದಿ. ಬಡ್‌ವೈಸರ್‌ ಕಂಪನಿಯ ಉದ್ಯೋಗಿಯೊಬ್ಬರು ಕಳೆದ 12 ವರ್ಷಗಳಿಂದ ಬಿಯರ್‌ ಟ್ಯಾಂಕ್‌ಗೆ ಮೂತ್ರ ವಿಸರ್ಜಿಸಿ ಬರುತ್ತಿದ್ದರು. ಈ ವಿಷಯವನ್ನು ಕಂಪನಿಯ ಆ ಉದ್ಯೋಗಿಯೇ ಬಹಿರಂಗಪಡಿಸಿದ್ದಾರೆ’ ಎಂದು ಹೇಳಲಾಗುತ್ತಿದೆ. ಟ್ವೀಟರ್‌ನಲ್ಲೂ ಈ ಸುದ್ದಿ ಟ್ರೆಂಡ್‌ ಆಗುತ್ತಿದ್ದು, ‘ಈ ಸುದ್ದಿ ಓದಿದ್ರೆ ಇನ್ನೆಂದೂ ಬಡ್‌ವೈಸರ್‌ ಬಿಯರ್‌ ಮುಟ್ಟೋದಿಲ್ಲ’ ಎಂಬ ಅಡಿಬರಹ ಬರೆದು ನೆಟ್ಟಿಗರು ಶೇರ್‌ ಮಾಡುತ್ತಿದ್ದಾರೆ.

 

ಆದರೆ ಈ ಸುದ್ದಿಯ ಸತ್ಯಾಸತ್ಯ ಪರಿಶೀಲಿಸಿದಾಗ, ವಿಡಂಬನಾತ್ಮಕ ಸುದ್ದಿಗಳನ್ನು ಪ್ರಸಾರ ಮಾಡುವ ವೆಬ್‌ಸೈಟ್‌ವೊಂದು ಈ ಸುಳ್ಳುಸುದ್ದಿಯನ್ನು ಪ್ರಕಟಿಸಿತ್ತು. ಸುದ್ದಿಯ ಕೊನೆಯಲ್ಲಿ ‘ಇದು ವಿಡಂಬನಾತ್ಮಕ ಅಥವಾ ಹಾಸ್ಯದ ಸುದ್ದಿಗಳನ್ನಷ್ಟೆಪ್ರಕಟಿಸುವ ವೆಬ್‌ಸೈಟ್‌. ಮನರಂಜನೆ ಮಾತ್ರವೇ ಇದರ ಉದ್ದೇಶವಾಗಿರುತ್ತದೆ’ ಎಂದೂ ಬರೆದಿತ್ತು. ಆದರೆ ಓದುಗರು ಕೊನೆಯಲ್ಲಿರುವ ವಿಶೇಷ ಸೂಚನೆಯ ಮೇಲೆ ಕಣ್ಣಾಡಿಸದೇ ಸುದ್ದಿಯನ್ನು ಮಾತ್ರ ನೋಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಪರಿಣಾಮ ಬಡ್‌ವೈಸರ್‌ ಬಿಯರ್‌ನಲ್ಲಿ ಮೂತ್ರ ಮಿಶ್ರಣ ಮಾಡಲಾಗುತ್ತಿತ್ತು ಎಂಬ ಸುದ್ದಿ ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗಿದೆ. ಹಾಗಾಗಿ ಈ ಸುದ್ದಿ ಸುಳ್ಳು ಎಂಬುದು ಸ್ಪಷ್ಟ.

- ವೈರಲ್ ಚೆಕ್