Fact Check: ಬಾಲಕಿಯ ನಾಲಿಗೆಗೆ ಕತ್ತರಿ ಹಾಕಿದ್ರಾ ಬ್ರಾಹ್ಮಣರು?
ಉತ್ತರ ಪ್ರದೇಶದ ಬುಂದೇಲ್‌ಖಂಡದಲ್ಲಿ ಕೊರೋನಾ ವೈರಸ್ ನಿಗ್ರಹಕ್ಕಾಗಿ ಬ್ರಾಹ್ಮಣರು 8ನೇ ತರಗತಿ ವಿದ್ಯಾರ್ಥಿನಿಯೊಬ್ಬಳ ನಾಲಿಗೆಯನ್ನು ಕತ್ತರಿಸಿ ದೇವರಿಗೆ ಅರ್ಪಿಸಿದ್ದಾರೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ?
ಉತ್ತರ ಪ್ರದೇಶದ ಬುಂದೇಲ್‌ಖಂಡದಲ್ಲಿ ಕೊರೋನಾ ವೈರಸ್ ನಿಗ್ರಹಕ್ಕಾಗಿ ಬ್ರಾಹ್ಮಣರು 8ನೇ ತರಗತಿ ವಿದ್ಯಾರ್ಥಿನಿಯೊಬ್ಬಳ ನಾಲಿಗೆಯನ್ನು ಕತ್ತರಿಸಿ ದೇವರಿಗೆ ಅರ್ಪಿಸಿದ್ದಾರೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಾಲಿಗೆ ಕತ್ತರಿಸಿಕೊಂಡಿರುವ ಬಾಲಕಿಯೊಬ್ಬಳ ಫೋಟೋವನ್ನು ಪೋಸ್ಟ್ ಮಾಡಿ ಹೀಗೆ ಹೇಳಲಾಗುತ್ತಿದೆ.
ಕೆಲವರು ಇದನ್ನು ಪೋಸ್ಟ್ ಮಾಡಿ, ‘ಮೂಢನಂಬಿಕೆಗೂ ಒಂದು ಮಿತಿ ಇರಬೇಕು. ಉತ್ತರ ಪ್ರದೇಶದ ಬುಂದೇಲ್‌ಖಂಡದಲ್ಲಿ ಬ್ರಾಹ್ಮಣರು ಊರಿಗೆ ಕೊರೋನಾ ವೈರಸ್ ಬಾರದಂತೆ ತಡೆಯಲು 8ನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿಯ ನಾಲಿಗೆಯನ್ನೇ ಕತ್ತರಿಸಿ ಶಿವನಿಗೆ ಅರ್ಪಿಸಿದ್ದಾರೆ. ಮುಖ್ಯವಾಹಿನಿಯ ಮಾಧ್ಯಮಗಳಾಗಲೀ, ಸೆಲೆಬ್ರಿಟಿಗಳಾಗಲೀ ಈ ಬಗ್ಗೆ ಧ್ವನಿ ಎತ್ತಿದ್ದು ನೋಡಿದ್ದೀರಾ?’ ಎಂದು ಬರೆದುಕೊಂಡಿದ್ದಾರೆ.
ಈ ಸುದ್ದಿಯ ಸತ್ಯಾಸತ್ಯ ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ ಎಂಬುದು ಖಚಿತವಾಗಿದೆ. ಉತ್ತರ ಪ್ರದೇಶದ ಬುಂದೇಲ್‌ಖಂಡದಲ್ಲಿ ಶಿವಭಕ್ತೆಯಾಗಿದ್ದ 16 ವರ್ಷದ ಬಾಲಕಿಯೊಬ್ಬಳು ಮೂಢನಂಬಿಕೆಗೆ ಒಳಗಾಗಿ ತನ್ನ ಹಳ್ಳಿಯನ್ನು ಕೊರೋನಾದಿಂದ ರಕ್ಷಿಸುವಂತೆ ಪ್ರಾರ್ಥಿಸಿ ಸ್ವತಃ ತಾನೇ ತನ್ನ ನಾಲಿಗೆ ತುದಿಯನ್ನು ಕತ್ತರಿಸಿಕೊಂಡು ಶಿವನಿಗೆ ಅರ್ಪಿಸಿದ್ದಳು. ಮೇ 20ರಂದು ಈ ಘಟನೆ ನಡೆದಿದ್ದು, ಮುಖ್ಯವಾಹಿನಿಯ ಮಾಧ್ಯಮಗಳೂ ಈ ಬಗ್ಗೆ ವರದಿ ಮಾಡಿದ್ದವು. ಇಂಡಿಯಾ ಟುಡೇ ಆ ವ್ಯಾಪ್ತಿಯ ಪೊಲೀಸರನ್ನು ಸಂಪರ್ಕಿಸಿದಾಗಲೂ ಇದೇ ಉತ್ತರ ಲಭ್ಯವಾಗಿದೆ. ಹಾಗಾಗಿ ಕೊರೋನಾ ನಿಗ್ರಹಕ್ಕಾಗಿ ಬ್ರಾಹ್ಮಣರು ಬಾಲಕಿಯ ನಾಲಿಗೆ ಕತ್ತರಿಸಿದ್ದಾರೆ ಎಂಬ ಸುದ್ದಿ ಸುಳ್ಳು.
- ವೈರಲ್ ಚೆಕ್