ಇತ್ತೀಚೆಗೆ ಬಿಹಾರ ಚುನಾವಣೆ ಹಿನ್ನೆಲೆಯಲ್ಲಿ ವರ್ಚುವಲ್‌ ರಾರ‍ಯಲಿ ನಡೆಸಲು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಬಿಹಾರಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಅವರ ಬೆಂಗಾವಲು ವಾಹನದ ಮೇಲೆ ದಾಳಿ ನಡೆಸಲಾಗಿದೆ. ಕಲ್ಲು, ಇಟ್ಟಿಗೆ ಎಸೆದು ದಾಳಿ ಮಾಡಲಾಗಿದೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

‘ಬಿಹಾರದಲ್ಲಿ ಬಿಜೆಪಿ ರಾರ‍ಯಲಿ ವಿರುದ್ಧದ ಜನಾಕ್ರೋಶ. ಇಂಥ ಪರಿಸ್ಥಿತಿ ಯಾವ ಪಕ್ಷಕ್ಕೂ ಬಂದಿಲ್ಲ’ ಎಂದು ಬರೆದು ಶೇರ್‌ ಮಾಡಲಾಗುತ್ತಿದೆ. ಎರಡು ನಿಮಿಷಗಳಿರುವ ವಿಡಿಯೋದಲ್ಲಿ ಬೆಂಗಾವಲು ವಾಹನ ಹೋಗುತ್ತಿದ್ದಂತೆಯೇ ಪ್ರೇಕ್ಷಕರು ಇಟ್ಟಿಗೆಗಳನ್ನು ಎಸೆಯುತ್ತಾರೆ. ಇದರಿಂದ ಪೊಲೀಸ್‌ ವಾಹನವು ಕಂದಕಕ್ಕೆ ಜಾರುತ್ತದೆ. ಕಾರಿನಿಂದ ಹೊರಬಂದ ಇಬ್ಬರು ಪೊಲೀಸ್‌ ಅಧಿಕಾರಿಗಳು ಗಾಯಗೊಂಡಂತೆ ಸಹ ಕಂಡುಬರುತ್ತದೆ. ಬಳಿಕ ದಾಳಿ ಮಾಡಿದ ಜನರನ್ನು ಪೊಲೀಸರು ಅಟ್ಟಿಸಿಕೊಂಡು ಹೋಗುತ್ತಾರೆ.

 

ಆದರೆ ಈ ವಿಡಿಯೋದ ಸತ್ಯಾಸತ್ಯವನ್ನು  ಪರಿಶೀಲಿಸಿದಾಗ ಕಂದಕಕ್ಕೆ ಬೀಳುವ ವಾಹನವು ‘ಬಿಆರ್‌ 11ಟಿ’ ಎಂಬ ನಂಬರ್‌ ಪ್ಲೇಟ್‌ ಹೊಂದಿದೆ. ಅದರ ಜಾಡು ಹಿಡಿದು ಪರಿಶೀಲಿಸಿದಾಗ ಈ ವಿಡಿಯೋ 2018ರಲ್ಲಿ ಯುಟ್ಯೂಬ್‌ನಲ್ಲಿ ಅಪ್‌ಲೋಡ್‌ ಆಗಿದೆ ಎಂದು ತಿಳಿದುಬಂದಿದೆ. 2018ರಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ‘ವಿಕಾಸ್‌ ಸಮೀಕ್ಷಾ ಯಾತ್ರೆ’ ವೇಳೆ ಅವರ ಬೆಂಗಾವಲು ವಾಹನದ ಮೇಲೆ ದಾಳಿಯಾಗಿತ್ತು. ಆ ವಿಡಿಯೋವನ್ನು ಈಗ ಪೋಸ್ಟ್‌ ಮಾಡಿ, ಅಮಿತ್‌ ಶಾ ಬೆಂಗಾವಲು ವಾಹನದ ಮೇಲೆ ದಾಳಿ ಎಂದು ಸುಳ್ಳು ಸುದ್ದಿ ಹರಡಲಾಗುತ್ತಿದೆ.

- ವೈರಲ್ ಚೆಕ್